ಪ್ರಜಾಪ್ರಭುತ್ವದ ದೇಗುಲ ಸಂಸತ್‌ನಲ್ಲಿ ಕುಂಬಾರಿಕೆಯ ಕಲಾ ವೈಭವ ಅನಾವರಣ
ದೇಶದ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಭಾರತದ ಸಂಸತ್ ಭವನದ ಮಕರ ದ್ವಾರದಲ್ಲಿ ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಕುಂಬಾರಿಕೆಯ ಕರಕುಶಲ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ನವದೆಹಲಿ: ದೇಶದ ಪ್ರಜಾಪ್ರಭುತ್ವದ ದೇಗುಲವೆಂದೇ ಕರೆಯಲ್ಪಡುವ ಭಾರತದ ಸಂಸತ್ ಭವನದ ಮಕರ ದ್ವಾರದಲ್ಲಿ ದೇಶದ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಮಣ್ಣಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿಶಿಷ್ಟ ಕುಂಬಾರಿಕೆಯ ಕರಕುಶಲ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ.

ಭಾರತದ ಎಲ್ಲಾ 29 ರಾಜ್ಯಗಳು ಹಾಗೂ ವಿವಿಧ ಕೇಂದ್ರಾಡಳಿತ ಪ್ರದೇಶಗಳ ಮಣ್ಣನ್ನು ಬಳಸಿ ಈ ಕಲಾಕೃತಿಗಳನ್ನು ರೂಪಿಸಲಾಗಿದ್ದು, "ಒಂದು ಭಾರತ – ಶ್ರೇಷ್ಠ ಭಾರತ" ಎಂಬ ಪರಿಕಲ್ಪನೆಯನ್ನು ಅನಾವರಣಗೊಳಿಸುವ ಉದ್ದೇಶ ಹೊಂದಿದೆ. ಪ್ರತಿಯೊಂದು ರಾಜ್ಯದ ಮಣ್ಣಿನ ವೈಶಿಷ್ಟ್ಯ, ಪರಂಪರೆ ಮತ್ತು ಸ್ಥಳೀಯ ಕುಂಬಾರರ ಕೈಚಳಕವನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿದೆ.
ಪ್ರದರ್ಶನದಲ್ಲಿರುವ ಪ್ರಮುಖ ಕಲಾಕೃತಿಗಳಲ್ಲಿ ಗುಜರಾತಿನ ಗುಂಡಿಯಾಲಿ ಮಡಿಕೆ, ಮಹಾರಾಷ್ಟ್ರದ ಪೀಪಲ್ ಎಲೆಗಳ ವಿನ್ಯಾಸ, ಉತ್ತರಾಖಂಡದ ಐಪಾನ್ ಕಲೆ, ಛತ್ತೀಸ್‌ಗಢದ ಮಣ್ಣಿನ ಜಾರ್ ಲ್ಯಾಂಪ್‌ಗಳು, ಮಣಿಪುರದ ಲುನ್ಪಿ ಕುಂಬಾರಿಕೆ ಸೇರಿದಂತೆ ಕೇರಳ, ಪುದುಚೇರಿ, ದೆಹಲಿ ಹಾಗೂ ಇತರ ರಾಜ್ಯಗಳ ವೈವಿಧ್ಯಮಯ ಮಣ್ಣಿನ ಕಲಾಕೃತಿಗಳು ಗಮನ ಸೆಳೆಯುತ್ತಿವೆ.
ಪ್ರತಿಯೊಂದು ಕಲಾಕೃತಿಯ ವಿವರವನ್ನು ಕನ್ನಡ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ನೀಡಲಾಗಿದ್ದು, ಸಂಸತ್‌ಗೆ ಭೇಟಿ ನೀಡುವ ಜನರಿಗೆ ದೇಶದ ವಿವಿಧ ಭಾಗಗಳ ಮಣ್ಣಿನ ಕಲೆ ಮತ್ತು ಸಂಸ್ಕೃತಿಯನ್ನು ಅರಿಯುವ ಅಪೂರ್ವ ಅವಕಾಶ ಕಲ್ಪಿಸಲಾಗಿದೆ.
ಜೇಡಿ ಮಣ್ಣಿನೊಂದಿಗೆ ಬದುಕು ಕಟ್ಟಿಕೊಂಡಿರುವ ಕುಂಬಾರ ಸಮುದಾಯದ ಶ್ರಮ, ಸೃಜನಶೀಲತೆ ಮತ್ತು ಪರಂಪರೆಯ ಸಂಕೇತವಾಗಿರುವ ಈ ಕಲಾಕೃತಿಗಳು ಭಾರತದ ಸಂಸತ್ ಭವನದಲ್ಲಿ ಸ್ಥಾನ ಪಡೆದಿರುವುದು ದೇಶದ ಕರಕುಶಲ ಕಲೆಗೆ ಸಂದ ಗೌರವದ ಸಂಕೇತವಾಗಿದೆ.
