Skip to content
Billava News

ಬಿರುವೆರ್ ಕುಡ್ಲ ದುಬಾಯಿ ಘಟಕದಿಂದ ₹1.65 ಲಕ್ಷ ನೆರವು ವಿತರಣೆ

ಸಮಾಜಸೇವೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಬಿರುವೆರ್ ಕುಡ್ಲ ಸಂಘಟನೆಯ ದುಬಾಯಿ ಘಟಕದ ಆಶ್ರಯದಲ್ಲಿ ಎರಡು ಅಸಹಾಯಕ ಕುಟುಂಬಗಳಿಗೆ ಒಟ್ಟು ₹1.65 ಲಕ್ಷ ಆರ್ಥಿಕ ನೆರವು ವಿತರಿಸಲಾಯಿತು.

By Billavavani
ಬಿರುವೆರ್ ಕುಡ್ಲ ದುಬಾಯಿ ಘಟಕದಿಂದ ₹1.65 ಲಕ್ಷ ನೆರವು ವಿತರಣೆ

ಮಂಗಳೂರು, ಜು. 16: ಸಮಾಜಸೇವೆಯ ಮೂಲಕ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಬಿರುವೆರ್ ಕುಡ್ಲ ಸಂಘಟನೆಯ ದುಬಾಯಿ ಘಟಕದ ಆಶ್ರಯದಲ್ಲಿ ಎರಡು ಅಸಹಾಯಕ ಕುಟುಂಬಗಳಿಗೆ ಒಟ್ಟು ₹1.65 ಲಕ್ಷ ಆರ್ಥಿಕ ನೆರವು ವಿತರಿಸಲಾಯಿತು.

fbb350d1-47ad-4cf9-87cb-81f3c8738424.jpeg

ಅನಾರೋಗ್ಯದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ₹55,000 ಹಾಗೂ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ದುರ್ಗಾಪ್ರಸಾದ್ ಅವರ ಚಿಕಿತ್ಸೆಗೆ ₹1.10 ಲಕ್ಷ ನೆರವನ್ನು ಸಂಘಟನೆಯ ಪದಾಧಿಕಾರಿಗಳು ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿ, ಬಿರುವೆರ್ ಕುಡ್ಲ ಸಂಘಟನೆಯು ಹಲವು ವರ್ಷಗಳಿಂದ ಜಾತಿ, ಧರ್ಮ, ಭೇದವಿಲ್ಲದೆ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ವಿದೇಶದಲ್ಲಿ ದುಡಿಯುತ್ತಿರುವ ಕನ್ನಡಿಗರು ತಮ್ಮ ಊರಿನ ಜನರ ನೆರವಿಗೆ ಧಾವಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿರುವೆರ್ ಕುಡ್ಲ ಸಂಸ್ಥಾಪಕ ಅಧ್ಯಕ್ಷ ಉದಯ ಪೂಜಾರಿ ಹಾಗೂ ತಂಡದವರು ನಡೆಸುತ್ತಿರುವ ಸೇವಾ ಕಾರ್ಯಗಳು ಮುಂದೆಯೂ ನಿರಂತರವಾಗಿ ಸಾಗಲಿ ಎಂದು ಹಾರೈಸಿದರು. ಯುವಕರ ಸಮಾಜಮುಖಿ ಕಾರ್ಯಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ಬಿರುವೆರ್ ಕುಡ್ಲ ಸಂಘಟನೆಯು ಕಳೆದ 8 ವರ್ಷಗಳಲ್ಲಿ ₹10 ಕೋಟಿಗೂ ಅಧಿಕ ಮೌಲ್ಯದ ವೈದ್ಯಕೀಯ, ಶೈಕ್ಷಣಿಕ ಹಾಗೂ ಮನೆ ನಿರ್ಮಾಣ ನೆರವು ಒದಗಿಸಿದೆ. ಕೋವಿಡ್ ಅವಧಿಯಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆ ಹಾಗೂ ರೇಷನ್ ಕಿಟ್ ವಿತರಣೆ ಮೂಲಕ ಗಮನ ಸೆಳೆದಿದ್ದು, ದುಬಾಯಿಯಲ್ಲಿಯೂ ಘಟಕ ಸ್ಥಾಪಿಸಿ ಸೇವಾ ಚಟುವಟಿಕೆಗಳನ್ನು ವಿಸ್ತರಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಾಜಿ ಅಧ್ಯಕ್ಷ ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷ ಸುಭಾಶ್ ಬೋಳೂರು, ವಸಂತ್ ಪೂಜಾರಿ, ಉದ್ಯಮಿ ಹಾಗೂ ದಾನಿ ದರ್ಶನ್ ಜೈನ್, ರಣ್ ದೀಪ್ ಕಾಂಚನ್, ಬಿರುವೆರ್ ಕುಡ್ಲ ಅಧ್ಯಕ್ಷ ರಾಕೇಶ್ ಬಲ್ಲಾಳ್ ಬಾಗ್, ದುಬಾಯಿ ಘಟಕದ ಅಧ್ಯಕ್ಷ ಸಂದೀಪ್ ಕೋಟ್ಯಾನ್ ಕಾರ್ಕಳ, ಅಶ್ವಿನ್ ರಾಜ್ ಚಿಲಿಂಬಿ, ಲೋಹಿತ್ ಗಟ್ಟಿ, ರಾಮ್ ಎಕ್ಕೂರು, ದಿನಿಲ್ ಬಲ್ಲಾಳ್ ಬಾಗ್, ಗಿರೀಶ್ ಬೋಳೂರು, ಗಣೇಶ್ ಎಕ್ಕೂರು, ರಿತೇಶ್ ಉಳ್ಳಾಲ ಸೇರಿದಂತೆ ಸಂಘಟನೆಯ ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ದಾನಿಗಳು ಮತ್ತು ಫಲಾನುಭವಿಗಳ ಕುಟುಂಬದವರು ಉಪಸ್ಥಿತರಿದ್ದರು.