Skip to content
Billava News

ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ: ಉಳ್ಳಾಲ ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ

ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ (ರಿ.) ಕೊಲ್ಯ ಆಶ್ರಯದಲ್ಲಿ, ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಸಹಭಾಗಿತ್ವದಲ್ಲಿ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಪ್ರಯುಕ್ತ...

By Billavavani
ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ: ಉಳ್ಳಾಲ ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆ

ಕೊಲ್ಯ, ಆ. 23: ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ (ರಿ.) ಕೊಲ್ಯ ಆಶ್ರಯದಲ್ಲಿ, ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಸಹಭಾಗಿತ್ವದಲ್ಲಿ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜಯಂತಿ ಪ್ರಯುಕ್ತ ಉಳ್ಳಾಲ ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳು ಆ.23ರಂದು ಕೊಲ್ಯ ನಾರಾಯಣ ಗುರು ಸಭಾಗೃಹದಲ್ಲಿ ನಡೆಯಿತು.

WhatsApp Image 2026-08-25 at 4.48.31 PM.jpeg

ಗಾನ ಸರಸ್ವತಿ ಸಂಗೀತ ವಿದ್ಯಾಲಯ ಕೊಲ್ಯ ನಿರ್ದೇಶಕಿ ಲಾವಣ್ಯ ಸುಧಾಕರ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ನಾರಾಯಣಗುರುಗಳ ತತ್ವದಂತೆ ಎಲ್ಲಾ ಜಾತಿ-ಧರ್ಮದ ಜನರು ಸ್ಪರ್ಧೆಯ ಹೆಸರಿನಲ್ಲಿ ಒಂದೇ ಕಡೆ ಸೇರಿದ್ದೇವೆ. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚುತ್ತದೆ. ಮಕ್ಕಳು ನಾರಾಯಣಗುರುಗಳ ಕುರಿತು ಹೆಚ್ಚು ತಿಳಿದುಕೊಂಡು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು. ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಹುಮ್ಮಸ್ಸಿನಿಂದ ಭಾಗವಹಿಸಬೇಕು” ಎಂದು ಕರೆ ನೀಡಿದರು.

WhatsApp Image 2026-08-25 at 4.48.32 PM (2).jpeg

ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ (ರಿ.) ಕೊಲ್ಯ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ನ ಗೌರವಾಧ್ಯಕ್ಷ ಈಶ್ವರ ಕಣೀರುತೋಟ, ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯ ಅಧ್ಯಕ್ಷ ಗೋಪಾಲ್ ಕೊಂಡಾಣ, ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಅಧ್ಯಕ್ಷೆ ತ್ರಿವೇಣಿ ಕುಂಪಲ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸ್ಪರ್ಧೆಯ ತೀರ್ಪುಗಾರರಾದ ಲಕ್ಷ್ಮೀ ವಿ. ಭಟ್ ಮಂಜೇಶ್ವರ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು ಹಾಗೂ ರಾಜೇಶ್ ಬಲ್ಯ ಮಾಣಿ ಅವರನ್ನು ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು.

WhatsApp Image 2026-08-25 at 4.48.31 PM (2).jpeg

ಅಂಗನವಾಡಿ, ಎಲ್‌ಕೆಜಿ, ಯುಕೆಜಿ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಸಂಗೀತ, ಭಾಷಣ, ಚಿತ್ರಕಲೆ, ಪ್ರಬಂಧ, ರಂಗವಲ್ಲಿ, ಛದ್ಮವೇಷ ಮತ್ತು ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉಳ್ಳಾಲ ವಲಯದ ಸುಮಾರು 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ವಿಶೇಷವಾಗಿ ಎಲ್‌ಕೆಜಿ, ಯುಕೆಜಿ ಹಾಗೂ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಛದ್ಮವೇಷ ಸ್ಪರ್ಧೆ ನೋಡುಗರ ಗಮನ ಸೆಳೆಯಿತು. ಪುಟಾಣಿಗಳ ವಿಭಿನ್ನ ವೇಷಭೂಷಣ, ಆತ್ಮವಿಶ್ವಾಸ ಹಾಗೂ ಸ್ಪರ್ಧಾ ಸ್ಫೂರ್ತಿಗೆ ತೀರ್ಪುಗಾರರು ತುಂಬುಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.

WhatsApp Image 2026-08-25 at 4.48.31 PM.jpeg

ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಮಾಜಿ ಅಧ್ಯಕ್ಷೆ ರೇವತಿ ವಿಶ್ವನಾಥ್ ಕುಂಪಲ ಪ್ರಾರ್ಥನೆ ನೆರವೇರಿಸಿದರು. ಕೋಶಾಧಿಕಾರಿ ಲವಿತಾ ಯತೀಶ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಶ್ರೀ ನಾಗರಾಜ್ ಧನ್ಯವಾದ ಸಮರ್ಪಿಸಿದರು. ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯದ ಸಾಂಸ್ಕೃತಿಕ ಸಂಚಾಲಕ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಲತೀಶ್ ಎಂ. ಸಂಕೊಳಿಗೆ ಕಾರ್ಯಕ್ರಮ ನಿರೂಪಿಸಿದರು.

Screenshot 2026-08-26 092539.png

ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ (ರಿ.), ಬಿಲ್ಲವ ಸೇವಾ ಸಮಾಜ (ರಿ.), ನಾರಾಯಣ ಗುರು ಮಹಿಳಾ ಮಂಡಳಿ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಬ್ರಹ್ಮಶ್ರೀ ನಾರಾಯಣಗುರುಗಳ ಏಕತೆ, ಸಮಾನತೆ ಹಾಗೂ ಮಾನವೀಯತೆಯ ತತ್ವಗಳನ್ನು ಸಾರುವ ನಿಟ್ಟಿನಲ್ಲಿ ನಡೆದ ಈ ಸಾಂಸ್ಕೃತಿಕ ಸ್ಪರ್ಧೆ, ನಾರಾಯಣಗುರು ಜಯಂತಿ ಆಚರಣೆಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಿತು.