Skip to content
Billava News

ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಸಂತಾಕ್ರೂಜ್ ಪೂರ್ವದ ಪ್ರಭಾತ ಕಾಲೋನಿಯಲ್ಲಿರುವ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 14ರಂದು ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಮೋಹನ್ ಸಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

By Billavavani
ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಮುಂಬೈ: ಸಂತಾಕ್ರೂಜ್ ಪೂರ್ವದ ಪ್ರಭಾತ ಕಾಲೋನಿಯಲ್ಲಿರುವ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವು ಆಗಸ್ಟ್ 14ರಂದು ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಮೋಹನ್ ಸಿ. ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೋಹನ್ ಸಿ. ಕೋಟ್ಯಾನ್, “ಮಕ್ಕಳೇ ನಾಳಿನ ಪ್ರಜೆಗಳು. ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಂದೆ-ತಾಯಿಯರ ಪಾತ್ರ ಮಹತ್ವದ್ದಾಗಿದೆ. ತಾಯ್ತಂದೆಯರು ನಿಮ್ಮ ಪಾಲಿಗೆ ದೇವರಿದ್ದಂತೆ. ಅವರನ್ನು ಗೌರವಿಸಿ, ಅವರ ಆಶೀರ್ವಾದ ಪಡೆಯಬೇಕು. ಬದುಕನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಪ್ರಮುಖವಾಗಿದ್ದು, ಗುರುವಿಗೆ ಶರಣಾಗಿ ಉತ್ತಮ ಶಿಕ್ಷಣ ಪಡೆದು ಉನ್ನತ ಉದ್ಯೋಗ ಪಡೆಯುವ ಪ್ರಯತ್ನ ಮಾಡಬೇಕು. ಕಲಿಕೆಯ ಮೂಲಕ ಉತ್ತಮ ಹುದ್ದೆ ಅಲಂಕರಿಸುವುದೇ ನೈಜ ಸ್ವಾತಂತ್ರ್ಯ” ಎಂದು ಹೇಳಿದರು.

WhatsApp Image 2026-08-19 at 3.22.33 PM.jpeg

“ಶಿಕ್ಷಣದ ಸ್ವಾತಂತ್ರ್ಯ ಪಡೆದರೆ ಯಾರ ಮೇಲೂ ಅವಲಂಬಿತರಾಗದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಪ್ರತಿಯೊಬ್ಬರ ಬದುಕು ಪ್ರಗತಿಯ ಪಥದಲ್ಲಿ ಸಾಗಿದಾಗ ದೇಶದ ಪ್ರಗತಿಯೂ ಸಹಜವಾಗಿ ಮುಂದುವರಿಯುತ್ತದೆ” ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಮಾತೃ ಸಂಸ್ಥೆಯ ಕೋಶಾಧಿಕಾರಿ ಹಾಗೂ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ರವಿ ಎಸ್. ಸನಿಲ್, “ಸ್ವಾತಂತ್ರ್ಯ ಎಂದರೆ ಸ್ವೇಚ್ಛಾಚಾರವಲ್ಲ. ನಾವು ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು. ನಿಮ್ಮನ್ನು ಸಾಕಿ-ಸಲುಹಿ ಬೆಳೆಸಿದ ತಂದೆ-ತಾಯಿಯರೇ ನಿಮ್ಮ ಮೊದಲ ದೇವರು. ಅವರ ಆಶೀರ್ವಾದಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ” ಎಂದರು.

ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಮಿತಿಗೊಳಿಸಿ ಓದಿನ ಕಡೆ ಹೆಚ್ಚಿನ ಗಮನ ಹರಿಸಬೇಕು. ಪ್ರತಿಯೊಬ್ಬರೂ ತಮ್ಮ ಗುರಿ ಸಾಧಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ದೇಶವೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಉತ್ತಮ ಸಂಸ್ಕಾರ ಬೆಳೆಸಿಕೊಂಡು ಭವಿಷ್ಯದ ಕನಸುಗಳನ್ನು ನನಸಾಗಿಸಿಕೊಳ್ಳಬೇಕು ಎಂದು ಅವರು ಶುಭ ಹಾರೈಸಿದರು.

WhatsApp Image 2026-08-19 at 3.22.34 PM.jpeg

ಶಾಲೆಯ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಬಡಿಗೇರ ಮಾತನಾಡಿ, “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರೆತಿಲ್ಲ. ಅನೇಕ ಮಹನೀಯರ ಹೋರಾಟದ ಫಲವಾಗಿ 1947ರ ಆಗಸ್ಟ್ 15ರಂದು ಭಾರತ ಸ್ವಾತಂತ್ರ್ಯ ಪಡೆಯಿತು. ಅಂತಹ ಮಹಾಪುರುಷರನ್ನು ಸ್ಮರಿಸುವುದು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವಾಗಿದೆ” ಎಂದು ಹೇಳಿದರು.

WhatsApp Image 2026-08-19 at 3.22.34 PM (1).jpeg

“ಅನಕ್ಷರತೆಯೇ ಬಂಧನ, ಸಾಕ್ಷರತೆಯೇ ಸ್ವಾತಂತ್ರ್ಯ. ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿಗಳು ಪುಣೆಯಲ್ಲಿ ರಾತ್ರಿ ಶಾಲೆಯನ್ನು ಸ್ಥಾಪಿಸುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣದ ಸ್ವಾತಂತ್ರ್ಯವನ್ನು ನೀಡಿದರು. ಇಂತಹ ಮಹನೀಯರನ್ನು ಸ್ಮರಿಸುವುದೇ ಸ್ವಾತಂತ್ರ್ಯದ ಉಸಿರು” ಎಂದು ಅವರು ತಿಳಿಸಿದರು.

WhatsApp Image 2026-08-19 at 3.22.32 PM.jpeg

ಎಸ್‌ಎಸ್‌ಸಿ ಸಾಧಕರಿಗೆ ಸನ್ಮಾನ

2026ರ ಮಾರ್ಚ್‌ನಲ್ಲಿ ನಡೆದ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಪ್ರಥಮ ಸ್ಥಾನ ಪಡೆದ ಸಂಗೀತಾ ಚಂದ್ರು ಚವಾಣ್, ದ್ವಿತೀಯ ಸ್ಥಾನ ಪಡೆದ ರಾಧಿಕಾ ಮಲ್ಲಿಕಾರ್ಜುನ ಭಾವಿಮನಿ ಹಾಗೂ ತೃತೀಯ ಸ್ಥಾನ ಪಡೆದ ರಾಜು ಡಪ್ಪಿನೂರ ಅವರಿಗೆ ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಮೋಹನ್ ಸಿ. ಕೋಟ್ಯಾನ್ ಹಾಗೂ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ರವಿ ಎಸ್. ಸನಿಲ್ ಅವರು ನೆನಪಿನ ಕಾಣಿಕೆ ಹಾಗೂ ಹೂಗುಚ್ಛ ನೀಡಿ ಅಭಿನಂದಿಸಿದರು.

WhatsApp Image 2026-08-19 at 3.22.31 PM.jpeg

ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಕುರಿತು ರಾಧಿಕಾ ಭಾವಿಮನಿ, ಸೋನು ಚವಾಣ್, ಚಾಂದನಿ ಚವಾಣ್, ಸುಮನ ಫುಲೆ, ಪಲ್ಲವಿ ರಾಠೋಡ್, ಭಾವನಾ ರಾಠೋಡ್, ರೂಪಾ ಕಾಂಬಳೆ, ನೈನಾ ರಾಠೋಡ್, ತನ್ವಿ ರಾಠೋಡ್, ಅನ್ಸ್ ಕಿಸಾನ್, ಭಾವಿಶ್ ಪೂಜಾರಿ ಹಾಗೂ ಗಣೇಶ ಚವಾಣ್ ಅವರು ಭಾಷಣ ಮಾಡಿದರು.

WhatsApp Image 2026-08-19 at 3.22.32 PM (1).jpeg

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿಯರಾದ ಪಲ್ಲವಿ ರಾಠೋಡ್, ಚಾಂದಿನಿ ಚವಾಣ್, ಸುಮನ ಫುಲೆ ಹಾಗೂ ಸುನೀತಾ ರಾಠೋಡ್ ಪ್ರಾರ್ಥನೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಬಡಿಗೇರ ಸ್ವಾಗತಿಸಿದರು. ಶಿಕ್ಷಕಿ ವಿಮಲಾ ಡಿ. ಪೂಜಾರಿ ನಿರೂಪಣೆ ನಡೆಸಿ ವಂದನಾರ್ಪಣೆ ಸಲ್ಲಿಸಿದರು. ಬಳಿಕ ರಾಷ್ಟ್ರಗೀತೆ ಹಾಡಲಾಯಿತು. ಕೊನೆಯಲ್ಲಿ ಸಿಹಿ ಹಂಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.