Skip to content
Billava News

ಧರ್ಮಾಧಾರಿತ ಬದುಕು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪರಸ್ಪರ ಸ್ನೇಹ–ವಿಶ್ವಾಸವನ್ನು ಬೆಳೆಸಲು ಸಹಕಾರಿ: ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಧರ್ಮಾಧಾರಿತ ಬದುಕು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪರಸ್ಪರ ಸ್ನೇಹ–ವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತದೆ. ಧರ್ಮದ ಆಚರಣೆಯಲ್ಲಿ ದ್ವೇಷಕ್ಕೆ ಅವಕಾಶವಿರಬಾರದು ಎಂದು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

By Billavavani
ಧರ್ಮಾಧಾರಿತ ಬದುಕು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪರಸ್ಪರ ಸ್ನೇಹ–ವಿಶ್ವಾಸವನ್ನು ಬೆಳೆಸಲು ಸಹಕಾರಿ: ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

ಬೈಂದೂರು: ಧರ್ಮಾಧಾರಿತ ಬದುಕು ಸಮಾಜದಲ್ಲಿ ಶಾಂತಿ, ನೆಮ್ಮದಿ ಮತ್ತು ಪರಸ್ಪರ ಸ್ನೇಹ–ವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತದೆ. ಧರ್ಮದ ಆಚರಣೆಯಲ್ಲಿ ದ್ವೇಷಕ್ಕೆ ಅವಕಾಶವಿರಬಾರದು ಎಂದು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧಿಪತಿ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ಗುರುವಾರ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಪಟ್ಟಾಭಿಷೇಕದ 18ನೇ ವರ್ಧಂತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ 37ನೇ ದಿನದ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಬೆಳಿಗ್ಗೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಭಾರತೀಯ ಸನಾತನ ಸಂಸ್ಕೃತಿ ಧಾರ್ಮಿಕ ತಳಹದಿ ಹಾಗೂ ಭಗವಂತನ ಸಾಕ್ಷಾತ್ಕಾರದ ಪರಂಪರೆಯಿಂದ ಅವತರಿಸಿದೆ. ಧರ್ಮದ ಆಚಾರ–ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಸ್ಪರ ಸ್ನೇಹ ಮತ್ತು ವಿಶ್ವಾಸದಿಂದ ಬದುಕಬೇಕು ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ–ದರ್ಶನಗಳು ಸಮಾಜಕ್ಕೆ ದಾರಿದೀಪವಾಗಬೇಕು. ಧಾರ್ಮಿಕ ಭಾವನೆಗಳನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆ ಮತ್ತು ಶಾಂತಿಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಅವರು ಹೇಳಿದರು.

ಬೆಳ್ಳಿ ಕಿರೀಟ ತೊಡಿಸಿ ಗೌರವ

ಪಟ್ಟಾಭಿಷೇಕದ 18ನೇ ವರ್ಧಂತಿ ಅಂಗವಾಗಿ ಬೆಳಿಗ್ಗೆ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾಸ್ವಾಮಿಯವರ ಪಾದುಕೆ ಪೂಜೆ ನೆರವೇರಿಸಲಾಯಿತು.

ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದಕ್ಷಿಣ ಕನ್ನಡ ಲೋಕಸಭಾ ಸಂಸದ ಬ್ರಿಜೇಶ್ ಚೌಟ, ಉಡುಪಿ ಮಾಜಿ ಶಾಸಕ ರಘುಪತಿ ಭಟ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಅಯೋಧ್ಯೆಯ ನಾಗಸಾಧು ಕೇಶವ್ ಮಹಾರಾಜ್, ಕಾರ್ಪೊರೇಟರ್ ಕಿರಣ್ ಮಂಗಳೂರು, ಮಾಜಿ ವಿಧಾನಪರಿಷತ್ ಸದಸ್ಯ ಸಂತು ಮಂಗಳೂರು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ಸಹಪ್ರಭಾರಿ ಜಯಂತ್ ಕೋಟ್ಯಾನ್, ಸಂಜಯ್ ಪ್ರಭು, ವಕೀಲ ಶಾಂತಿಪ್ರಕಾಶ್ ಹೆಗಡೆ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸೋಮಸುಂದರ್, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ, ಜಯಂತ್ ಎಚ್., ಸಮಾಜಸೇವಕ ಯೋಗೀಶ್ ಕೋಟ್ಯಾನ್, ವೆನ್ಲಾಕ್ ಆಸ್ಪತ್ರೆ ಮಂಗಳೂರಿನ ಡಾ. ಸದಾನಂದ ಪೂಜಾರಿ, ಸಂಚಾಲಕ ಶಿವರಾಜ್ ಪೂಜಾರಿ ಹಾಗೂ ವತ್ತಿನೆಣೆ ಗುರುರಾಘವೇಂದ್ರ ಸ್ವಾಮಿ ಮರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೂಲಿಯಣ್ಣ ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೈಂದೂರು ಗೋಳಿಹೊಳೆ ಶ್ರೀ ಬಿಳಿಶಿಲೆ ವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆ ಸೆಪ್ಟೆಂಬರ್ 14ರವರೆಗೆ ಮುಂದುವರಿಯಲಿದೆ.

ರಮಣಿ ರವಿ ಬಿಜೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಪೂಜಾರಿ ಅರೆಹೊಳೆ ವಂದಿಸಿದರು. ಎಂ.ಪಿ. ಬೆಳ್ಳಾಡಿ ಸಹಕರಿಸಿದರು.