ಹೊಸ ತಲೆಮಾರಿನ ಸಮಾಜಮುಖಿ ಜೀವನಕ್ಕೆ ಆಟಿದ ಮಿನದನ ಪ್ರೇರಣೆಯಾಗಲಿ: ಹರಿಪ್ರಸಾದ್ ರೈ
ತುಳುನಾಡು ಸೌಹಾರ್ದತೆ, ಸಮೃದ್ಧಿ ಹಾಗೂ ಸಂಸ್ಕಾರವಂತಿಕೆಯ ಸಂಕೇತವಾಗಿದ್ದು, ಈ ಮಣ್ಣಿನ ಪರಂಪರೆ ಮತ್ತು ಜೀವನಶೈಲಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಆಟಿ ತಿಂಗಳ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ...

ಉಡುಪಿ: ತುಳುನಾಡು ಸೌಹಾರ್ದತೆ, ಸಮೃದ್ಧಿ ಹಾಗೂ ಸಂಸ್ಕಾರವಂತಿಕೆಯ ಸಂಕೇತವಾಗಿದ್ದು, ಈ ಮಣ್ಣಿನ ಪರಂಪರೆ ಮತ್ತು ಜೀವನಶೈಲಿಯನ್ನು ಹೊಸ ತಲೆಮಾರಿಗೆ ಪರಿಚಯಿಸುವಲ್ಲಿ ಆಟಿ ತಿಂಗಳ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸುಮನಸಾ ರಜತ ಸಂಭ್ರಮ ಸಮಿತಿ ಅಧ್ಯಕ್ಷ ಹರಿಪ್ರಸಾದ್ ರೈ ಹೇಳಿದರು.
ಸುಮನಸಾ ಕೊಡವೂರು ಬಳಗದ ಮಹಿಳಾ ಸದಸ್ಯರು ಆಯೋಜಿಸಿದ್ದ ರಜತ ಸಂಭ್ರಮದ ಸರಣಿ ಕಾರ್ಯಕ್ರಮದ ಅಂಗವಾಗಿ ಬನ್ನಂಜೆ ಶಿವಗಿರಿ ಸಭಾಂಗಣದಲ್ಲಿ ನಡೆದ ‘ಆಟಿದ ಮಿನದನ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಸಂಘಟನಾ ಪ್ರಜ್ಞೆ, ಆಹಾರ ಕ್ರಮ ಹಾಗೂ ಸಮಾಜದ ರೀತಿ-ನೀತಿಗಳನ್ನು ಹೊಸ ತಲೆಮಾರಿನವರು ಅಳವಡಿಸಿಕೊಳ್ಳಲು ಆಟಿದ ಮಿನದನದಂತಹ ಕಾರ್ಯಕ್ರಮಗಳು ಪ್ರೇರಣೆಯಾಗಬೇಕು. ಜೆನ್‌ಜೀ ಎಂದು ಗುರುತಿಸಿಕೊಳ್ಳುತ್ತಿರುವ ಯುವ ಸಮುದಾಯಕ್ಕೆ ಹಿಂದಿನ ಕಾಲದ ಜೀವನ ಪದ್ಧತಿ ಹಾಗೂ ಅದರ ಮಹತ್ವವನ್ನು ಪರಿಚಯಿಸಲು ಹಳ್ಳಿಯ ಮನೆತನದ ವಾತಾವರಣವನ್ನು ಸೃಷ್ಟಿಸಿರುವ ಈ ಕಾರ್ಯಕ್ರಮ ಅನುಕರಣೀಯ,” ಎಂದು ಅವರು ಹೇಳಿದರು.

ಸುಮನಸಾ ರಜತ ಸಂಭ್ರಮ ಸಮಿತಿ ಪದಾಧಿಕಾರಿಗಳಾದ ನಿವೃತ್ತ ಪ್ರಾಧ್ಯಾಪಕಿ ಡಾ. ಸುನೀತಾ ವಿ. ಹಾಗೂ ನಿವೃತ್ತ ಪ್ರಾಂಶುಪಾಲೆ ಸುಕನ್ಯ ಮಾರ್ಟಿಸ್ ಅವರು ಆಟಿಕಳೆಂಜನಿಗೆ ಧಾನ್ಯ ಮತ್ತು ತರಕಾರಿ ಕಾಣಿಕೆಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡಾ. ಸುನೀತಾ ವಿ. ಮಾತನಾಡಿ, “ನಮ್ಮ ಮೂಲ ಮತ್ತು ಮೌಲ್ಯಗಳಿಗೆ ಸಂಬಂಧಿಸಿದ ಸಂಗತಿಗಳನ್ನು ಅಳವಡಿಸಿಕೊಳ್ಳಲು ಆಟಿ ಮಿನದನ ಸಹಕಾರಿಯಾಗಿದೆ. ಸಾಂಸ್ಕೃತಿಕ ಸಂಘಟನೆಗಳು ಸಮಾಜದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ,” ಎಂದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ ಅವರು ‘ಆಟಿದ ಪೊಲಬು’ ನುಡಿಯಲ್ಲಿ ಆಟಿಯ ಮಹತ್ವವನ್ನು ವಿವರಿಸಿದರು. “ಆಟಿ ಅನಿಷ್ಟವಲ್ಲ; ಅದು ಅನುಭವದ ಅಮೂಲ್ಯ ತಿಂಗಳು. ತುಳುನಾಡಿನ ಪರಂಪರೆಗೆ ಜಾಗತಿಕ ಮನ್ನಣೆಯಿದೆ. ಆದರೆ ಆಧುನಿಕತೆಯ ನಡುವೆ ತುಳುಭಾಷೆ ಸೇರಿದಂತೆ ಇಲ್ಲಿನ ಮಾತೃಮೂಲ ಸಂಗತಿಗಳು ಸವಾಲುಗಳನ್ನು ಎದುರಿಸುತ್ತಿವೆ. ಈ ಮಣ್ಣಿನ ಶಿಷ್ಟಾಚಾರಗಳನ್ನು ಗೌರವಿಸಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಜೀವನೋದ್ಧಾರ ಸಾಧ್ಯ,” ಎಂದು ಅವರು ಅಭಿಪ್ರಾಯಪಟ್ಟರು.
ತುಳು ಮಹಾಕಾವ್ಯವೆಂದು ಪರಿಗಣಿಸಲ್ಪಟ್ಟ ‘ಕೋಟಿ ಚೆನ್ನಯ’ ಪಾಡ್ದನದ ಭಾಗವನ್ನು ಅರ್ಥಪೂರ್ಣವಾಗಿ ಹಾಡಿದ ಅಪರೂಪದ ಪಾಡ್ದನ ಕಲಾವಿದೆ ಹಾಗೂ ಹಿರಿಯ ಕೃಷಿಕರಾದ ಸುಂದರಿ ಪೂಜಾರ್ತಿ ಅವರನ್ನು ತುಳುಮಣ್ಣಿನ ಮನೆ ಮರ್ಯಾದೆಯಂತೆ ‘ಅನ್ನದ ಋಣ’ದ ನೆನಪಿನಲ್ಲಿ ಅಕ್ಕಿ ಮುಡಿಯೊಂದಿಗೆ ಸನ್ಮಾನಿಸಲಾಯಿತು.

238 ಪಾರಂಪರಿಕ ವಸ್ತುಗಳೊಂದಿಗೆ ‘ಇಂಚ ಇತ್ತ್ಂಡ್ ನಮ್ಮ ಇಲ್ಲ್’
‘ಇಂಚ ಇತ್ತ್ಂಡ್ ನಮ್ಮ ಇಲ್ಲ್’ ಎಂಬ ಪರಿಕಲ್ಪನೆಯಡಿ ಆಟಿದ ಮಿನದನದ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಹಿಂದಿನ ಕಾಲದ ಕೂಡುಕುಟುಂಬದ ಚಿಕ್ಕದಾದ, ಚೊಕ್ಕದಾದ ಮನೆಯೇ ದೈವಾರಾಧನೆ ಸೇರಿದಂತೆ ಸಂಸ್ಕಾರಯುತ ಬದುಕಿನ ನೆಲೆಬೀಡಾಗಿತ್ತು. ಆ ಬದುಕಿನ ಚಿತ್ರಣವನ್ನು ಮರುಸೃಷ್ಟಿಸುವ ಉದ್ದೇಶದಿಂದ ಅಡುಗೆ ಕೋಣೆ ಹಾಗೂ ಮನೆಯ ವಿವಿಧ ಗೃಹೋಪಯೋಗಿ ವಸ್ತುಗಳನ್ನು ವೇದಿಕೆಯಲ್ಲಿ ಪ್ರದರ್ಶಿಸಲಾಯಿತು.
ಅಂದಿನ ಕಾಲದಲ್ಲಿ ಬಳಕೆಯಲ್ಲಿದ್ದ ವಿವಿಧ ಗಾತ್ರದ ಅಡುಗೆ ಪಾತ್ರೆಗಳು, ಮಣ್ಣಿನ ಮತ್ತು ಮರದ ಪರಿಕರಗಳು ಸೇರಿದಂತೆ ಒಟ್ಟು 238 ಪಾರಂಪರಿಕ ವಸ್ತುಗಳನ್ನು ಸಂಗ್ರಹಿಸಿ, ಸುಮನಸಾ ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ಅವರ ನೇತೃತ್ವದಲ್ಲಿ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು.
ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಕಾಂತ್ ಕುಂದರ್ ವಂದಿಸಿದರು. ಕಾರ್ತಿಕ್ ಪ್ರಭು ಮತ್ತು ವಸುಪ್ರದಾ ಅವರು ಪಾಡ್ದನದ ರೂಪದಲ್ಲಿ ಪ್ರಸ್ತಾವನೆ ಮಂಡಿಸಿದರು. ವಿವಿಧ ಖಾದ್ಯಗಳ ತಯಾರಿಕೆ ಕುರಿತ ಭಾವಗೀತೆಯನ್ನು ಗೀತಾ ಪಾಲನ್ ಹಾಡಿದರು. ಪ್ರಜ್ಞಾಶ್ರೀ ಕಾರ್ಯಕ್ರಮ ನಿರೂಪಿಸಿದರು.
ಔಷಧೀಯ ಗುಣವುಳ್ಳ ವಿವಿಧ ಬಗೆಯ ತಿಂಡಿ-ತಿನಿಸುಗಳು, ಸಾಂಪ್ರದಾಯಿಕ ಊಟೋಪಚಾರ, ಹಳ್ಳಿ ಆಟಗಳು ಹಾಗೂ ಮಹಿಳಾ ಸದಸ್ಯರ ಮನೋರಂಜನಾ ಕಾರ್ಯಕ್ರಮಗಳೊಂದಿಗೆ ‘ಆಟಿದ ಮಿನದನ’ ಸಂಪನ್ನಗೊಂಡಿತು.
ಕಾರ್ಯಕ್ರಮದಲ್ಲಿ ಸುಮನಸಾ ಸಂಚಾಲಕ ಭಾಸ್ಕರ ಪಾಲನ್ ಹಾಗೂ ಗೌರವಾಧ್ಯಕ್ಷ ಎಂ.ಎಸ್. ಭಟ್ ಉಪಸ್ಥಿತರಿದ್ದರು.
