ಬಿಲ್ಲವ ಸಮಾಜ ಸೇವಾ ಸಂಘ ಪುಣೆ ‘ಆಟಿಡ್ ಒಂಜಿ ಕೂಟ’ಕ್ಕೆ ಭರ್ಜರಿ ಚಾಲನೆ: ಬಿಲ್ಲವ ಸಮಾಜ ಸೇವಾ ಸಂಘದ ಸಂಘಟನಾ ಶಕ್ತಿ ಶ್ಲಾಘಿಸಿದ ಎನ್.ಟಿ. ಪೂಜಾರಿ
ಬಿಲ್ಲವ ಸಮಾಜ ಸೇವಾ ಸಂಘ ಪುಣೆ (ರಿ.) ವತಿಯಿಂದ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ‘ಆಟಿಡ್ ಒಂಜಿ ಕೂಟ’ ಕಾರ್ಯಕ್ರಮವು ಸಡಗರ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.

ಪುಣೆ: ಬಿಲ್ಲವ ಸಮಾಜ ಸೇವಾ ಸಂಘ ಪುಣೆ (ರಿ.) ವತಿಯಿಂದ ಆಯೋಜಿಸಲಾಗಿದ್ದ ಸಾಂಪ್ರದಾಯಿಕ ‘ಆಟಿಡ್ ಒಂಜಿ ಕೂಟ’ ಕಾರ್ಯಕ್ರಮವು ಸಡಗರ, ಸಂಭ್ರಮ ಹಾಗೂ ಸಾಂಸ್ಕೃತಿಕ ವೈಭವದೊಂದಿಗೆ ನೆರವೇರಿತು.
ಪುಣೆಯ ಕರ್ವೇನಗರದ ಎನ್.ಡಿ.ಎ. ರಸ್ತೆಯ ರಾಜಾರಾಂ ಸೇತುವೆ ಸಮೀಪದ ಮಹಾಲಕ್ಷ್ಮಿ ಲಾನ್ಸ್‌ನಲ್ಲಿ ಆಗಸ್ಟ್ 9ರಂದು ನಡೆದ ಕಾರ್ಯಕ್ರಮವನ್ನು ಬಿಲ್ಲವ ಸಮಾಜ ಸೇವಾ ಸಂಘ ಪುಣೆಯ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡುಲ್ ಅವರ ಅಧ್ಯಕ್ಷತೆಯಲ್ಲಿ, ಸಂಘದ ಗೌರವಾಧ್ಯಕ್ಷ ಎನ್.ಟಿ. ಪೂಜಾರಿ ಅವರ ಶುಭಹಸ್ತದಿಂದ ದೀಪ ಬೆಳಗಿಸಿ, ಆಟಿ ಕಳಂಜಿ ಆಗಮನದೊಂದಿಗೆ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗೌರವಾಧ್ಯಕ್ಷ ಎನ್.ಟಿ. ಪೂಜಾರಿ ಅವರು, ಪುಣೆ ಬಿಲ್ಲವ ಸಂಘದ ಯಾವುದೇ ಕಾರ್ಯಕ್ರಮವನ್ನು ಸಂಘಟನಾ ಸಾಮರ್ಥ್ಯ, ಶಿಸ್ತು ಹಾಗೂ ಕರ್ತವ್ಯನಿಷ್ಠೆಯಿಂದ ಯಶಸ್ವಿಯಾಗಿ ನಡೆಸುತ್ತಿರುವ ಅಧ್ಯಕ್ಷ ವಿಶ್ವನಾಥ್ ಪೂಜಾರಿ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದರು.

“ವಿಶ್ವನಾಥ್ ಪೂಜಾರಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು ಸಂತೋಷದ ಜೊತೆಗೆ ಹೆಮ್ಮೆಯ ಸಂಗತಿಯಾಗಿದೆ. ‘ಆಟಿಡ್ ಒಂಜಿ ಕೂಟ’ ನಮ್ಮ ಸಂಸ್ಕೃತಿಗೆ ಅನುಗುಣವಾಗಿ ಸಾಂಪ್ರದಾಯಿಕವಾಗಿ ನಡೆಯುತ್ತಿರುವುದರಿಂದ ಇದು ಒಂದು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತದೆ. ಇಂತಹ ಕಾರ್ಯಕ್ರಮಗಳು ಯುವ ಪೀಳಿಗೆಗೆ ನಮ್ಮ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ,” ಎಂದು ಅವರು ಹೇಳಿದರು.

ಬಿಲ್ಲವ ಸಮಾಜ ಸೇವಾ ಸಂಘದ ಸಂಘಟನೆಯಲ್ಲಿ ನಾಯಕತ್ವದ ಜೊತೆಗೆ ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸುವ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರ ಸಹಕಾರವು ಸಂಘದ ಬಲವನ್ನು ಹೆಚ್ಚಿಸಿದೆ ಎಂದ ಅವರು, ಸಂಘದ ವಿವಿಧ ಯೋಜನೆಗಳು ಶೀಘ್ರವಾಗಿ ಸಾಕಾರಗೊಳ್ಳಲಿ ಎಂದು ಆಶಿಸಿದರು. ಸಮಾಜಮುಖಿ ಯೋಜನೆಗಳ ಮೂಲಕ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಲಿ ಹಾಗೂ ವಿಶ್ವನಾಥ್ ಪೂಜಾರಿ ಅವರ ಸಮಾಜ ಸೇವಾ ಯೋಜನೆಗಳು ಆದಷ್ಟು ಬೇಗ ಲೋಕಾರ್ಪಣೆಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವನಾಥ್ ಪೂಜಾರಿ ಕಡುಲ್ ಅವರು ಮಾತನಾಡಿ, ಬಿಲ್ಲವ ಸಮಾಜ ಸೇವಾ ಸಂಘವು ಹಲವು ವರ್ಷಗಳಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬರುತ್ತಿದೆ. ಹಿಂದಿನ ಅಧ್ಯಕ್ಷರು ಆರಂಭಿಸಿದ ಉತ್ತಮ ಕಾರ್ಯಗಳನ್ನು ಮುಂದುವರಿಸಿಕೊಂಡು, ಆರಾಧ್ಯ ದೈವ ಬ್ರಹ್ಮ ಬೈದರ್ಕಳ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶೀರ್ವಾದ ಮತ್ತು ತತ್ವಾದರ್ಶಗಳನ್ನು ಪಾಲಿಸಿಕೊಂಡು ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
“ಸಂಘದ ಪ್ರತಿಯೊಂದು ಯೋಜನೆಗೂ ಸಮಾಜ ಬಾಂಧವರು ಕೈಜೋಡಿಸಿ ಬೆಂಬಲ ನೀಡಬೇಕು. ಎಲ್ಲರ ಸಹಕಾರದೊಂದಿಗೆ ರೂಪಿಸಿರುವ ಯೋಜನೆಗಳು ಸಾಕಾರಗೊಂಡು ಪುಣೆ ಬಿಲ್ಲವ ಸಂಘವು ವಿಶ್ವಮಟ್ಟದಲ್ಲಿ ಮತ್ತಷ್ಟು ಗುರುತಿಸಿಕೊಳ್ಳಬೇಕು ಎಂಬುದು ನಮ್ಮ ಸಂಕಲ್ಪ,” ಎಂದು ಅವರು ಹೇಳಿದರು.
“ಆಟಿಡ್ ಒಂಜಿ ಕೂಟ” ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಸಮಾಜ ಬಾಂಧವರನ್ನು ಸ್ವಾಗತಿಸಿದ ಅವರು, ಸಂಘದ ಸಮಾಜಸೇವಾ ಕಾರ್ಯಗಳಿಗೆ ಮುಂದೆಯೂ ಎಲ್ಲರ ಸಹಕಾರ ಇರಲಿ ಎಂದು ಮನವಿ ಮಾಡಿದರು.
ಸಂಘಟನಾ ಸಾಮರ್ಥ್ಯಕ್ಕೆ ಮೆಚ್ಚುಗೆ
ಬಿಲ್ಲವ ಸಂಘ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಎಂ. ಪೂಜಾರಿ ಅವರು ಮಾತನಾಡಿ, ಒಗ್ಗಟ್ಟಿನಿಂದ ಸಂಘಟನೆ ಮಾಡಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸುತ್ತಿರುವ ವಿಶ್ವನಾಥ್ ಪೂಜಾರಿ ಅವರ ನಾಯಕತ್ವ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಜಾತಿ-ಮತ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸಿ, ಗುರುಮಂದಿರ ಭವನ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಆದಷ್ಟು ಬೇಗ ಸಾಕಾರಗೊಳಿಸಬೇಕು ಎಂದು ಅವರು ಆಶಿಸಿದರು.
ಸಾಂಸ್ಕೃತಿಕ ವೈಭವದ ಮಹತ್ವವನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯವಾಗಿವೆ ಎಂದು ಅವರು ಹೇಳಿದರು.
ಬಿಲ್ಲವರ ಅಸೋಸಿಯೇಷನ್ ಸೊಸೈಟಿ ಖಂಡಾಲಾ-ಲೋಣಾವಳಾ ಸಮಿತಿಯ ಅಧ್ಯಕ್ಷ ಗಣೇಶ್ ಪೂಜಾರಿ ಅವರು ಮಾತನಾಡಿ, ‘ಆಟಿಡ್ ಒಂಜಿ ಕೂಟ’ದಂತಹ ಕಾರ್ಯಕ್ರಮಗಳನ್ನು ಎಲ್ಲರೂ ಕಣ್ತುಂಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದರೆ ಪುಣೆ ಬಿಲ್ಲವ ಸಂಘವು ಇಂತಹ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಸಂತಸದ ಸಂಗತಿ ಎಂದರು.
ಎನ್.ಟಿ. ಪೂಜಾರಿ ಅವರ ಗೌರವಾಧ್ಯಕ್ಷತೆಯೂ, ವಿಶ್ವನಾಥ್ ಪೂಜಾರಿ ಅವರ ಸಂಘಟನಾ ಸಾಮರ್ಥ್ಯವೂ ಸಂಘದ ಪ್ರಗತಿಗೆ ಪ್ರೇರಣೆಯಾಗಿದೆ. ಸಂಘವನ್ನು ಹೇಗೆ ಮುನ್ನಡೆಸಬೇಕು ಹಾಗೂ ಯಶಸ್ವಿ ಕಾರ್ಯಚಟುವಟಿಕೆಗಳನ್ನು ಹೇಗೆ ರೂಪಿಸಬೇಕು ಎಂಬುದನ್ನು ಅವರು ತೋರಿಸಿಕೊಡುತ್ತಿದ್ದಾರೆ ಎಂದು ಗಣೇಶ್ ಪೂಜಾರಿ ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಬಿಲ್ಲವ ಸಂಘ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಅಧ್ಯಕ್ಷ ಸತೀಶ್ ಎಂ. ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಸೊಸೈಟಿ ಖಂಡಾಲಾ-ಲೋಣಾವಳಾ ಸಮಿತಿಯ ಅಧ್ಯಕ್ಷ ಗಣೇಶ್ ಪೂಜಾರಿ, ಬಿಲ್ಲವ ಸಂಘದ ಕಟ್ಟಡ ಸಮಿತಿಯ ಅಧ್ಯಕ್ಷ ಸಂದೇಶ್ ಪೂಜಾರಿ, ಮಹಿಳಾ ಅಧ್ಯಕ್ಷೆ ಉಮಾ ಕೆ. ಪೂಜಾರಿ, ಕಟ್ಟಡ ಸಮಿತಿ ಅಧ್ಯಕ್ಷೆ ನವಿತಾ ಪೂಜಾರಿ ಸೇರಿದಂತೆ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷರಾದ ಪ್ರಕಾಶ್ ಪೂಜಾರಿ ದೊಂಡೆರಂಗು, ಭಾಸ್ಕರ್ ಪೂಜಾರಿ, ಕಾರ್ಯದರ್ಶಿ ಸುದರ್ಶನ್ ಸುವರ್ಣ, ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಕ್ರೀಡಾ ಕಾರ್ಯಾಧ್ಯಕ್ಷ ಪ್ರಕಾಶ್ ಪೂಜಾರಿ ಬೈಲೂರು, ಜೊತೆ ಕಾರ್ಯದರ್ಶಿ ನವೀನ್ ಎಸ್. ಪೂಜಾರಿ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಶಿವಪ್ರಸಾದ್ ಪೂಜಾರಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಶಂಕರ್ ಪೂಜಾರಿ, ಜೊತೆ ಕೋಶಾಧಿಕಾರಿ ಉಮೇಶ್ ಪೂಜಾರಿ, ಜನಸಂಪರ್ಕಾಧಿಕಾರಿ ರಘು ಪೂಜಾರಿ, ಮಹಿಳಾ ಕಾರ್ಯದರ್ಶಿ ವಿಶಾಲ್ ಪೂಜಾರಿ, ಯುವ ವಿಭಾಗದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೇಯಾ ಪೂಜಾರಿ, ಕಟ್ಟಡ ಸಮಿತಿ ಮಹಿಳಾ ಕಾರ್ಯದರ್ಶಿ ಪ್ರಮೀಳಾ ಟಿ. ಪೂಜಾರಿ ಸೇರಿದಂತೆ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸರೋಜಿನಿ ಬಂಗೇರ ಹಾಗೂ ಜಯಶ್ರೀ ಪೂಜಾರಿ ಪ್ರಾರ್ಥನೆ ಸಲ್ಲಿಸಿದರು. ಅಧ್ಯಕ್ಷ ವಿಶ್ವನಾಥ್ ಪೂಜಾರಿ ಕಡುಲ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಣ್ಯರಾದ ಎನ್.ಟಿ. ಪೂಜಾರಿ, ಸತೀಶ್ ಪೂಜಾರಿ ಹಾಗೂ ಗಣೇಶ್ ಪೂಜಾರಿ ಅವರನ್ನು ಶಾಲು, ಪುಷ್ಪಗುಚ್ಛ ಹಾಗೂ ಸ್ಮರಣಿಕೆಯೊಂದಿಗೆ ಸನ್ಮಾನಿಸಲಾಯಿತು. ವಿ.ಜೆ. ಮದಿರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
