ನ. 1ರಂದು ಬನ್ನಂಜೆ ಬಾಬು ಅಮೀನ್ ಅವರಿಗೆ ವಿಶುಕುಮಾರ್ ಪ್ರಶಸ್ತಿ ಪ್ರದಾನ
ಉಡುಪಿ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2026ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ.

ಉಡುಪಿ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಉಡುಪಿ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ 2026ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ ನವೆಂಬರ್ 1ರಂದು ಬೆಳಗ್ಗೆ 10 ಗಂಟೆಗೆ ನಗರದ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ.
ಸಾಹಿತ್ಯ, ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ದಿವಂಗತ ವಿಶುಕುಮಾರ್ ಅವರ ಸ್ಮರಣಾರ್ಥ ನೀಡಲಾಗುವ ಈ ಸಾಲಿನ ವಿಶುಕುಮಾರ್ ಪ್ರಶಸ್ತಿಗೆ ಖ್ಯಾತ ಜಾನಪದ ವಿದ್ವಾಂಸ ಹಾಗೂ ಸಂಶೋಧಕ ಬನ್ನಂಜೆ ಬಾಬು ಅಮೀನ್ ಆಯ್ಕೆಯಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ ಅಭಿನಂದನಾ ಭಾಷಣ ಮಾಡಲಿದ್ದಾರೆ.
ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ನೀಡಲಾಗುವ ಡಾ. ಪ್ರಭಾಕರ್ ನೀರುಮಾರ್ಗ್ ಯುವವಾಹಿನಿ ಯುವ ಸಾಹಿತ್ಯ ಪ್ರಶಸ್ತಿಗೆ ಯುವ ಸಾಹಿತಿ ತಜ್ಞ ಆರ್. ಆಯ್ಕೆಯಾಗಿದ್ದಾರೆ.
ಸಾಹಿತಿ ಹಾಗೂ ಲೇಖಕ ಬಿಬಿನ್ ಚಂದ್ರಪಾಲ್ ಸಮಾರಂಭ ಉದ್ಘಾಟಿಸಲಿದ್ದು, ಗೋವಾದ ಬಿಲ್ಲವ ಸಂಘದ ಗೌರವಾಧ್ಯಕ್ಷ ಚಂದ್ರಹಾಸ್ ಅಮೀನ್ ಹಾಗೂ ಸಾಹಿತಿ ವಿಶುಕುಮಾರ್ ಅವರ ಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಿರುಚಿತ್ರ ಸ್ಪರ್ಧೆ, ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆ, ವಿಶು ಕಾವ್ಯಾಮೃತ ಕವನ ಸ್ಪರ್ಧೆ ಹಾಗೂ ವಿಶು ವಿಹಂಗಮ ಕೃತಿ ವಿಮರ್ಶೆ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.
ಈ ಕುರಿತು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಿಶುಕುಮಾರ್ ದತ್ತಿನಿಧಿ ಸಂಚಾಲನ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್, ಸಹ ಸಂಚಾಲಕ ದಯಾನಂದ ಕರ್ಕೇರ ಉಗ್ಗೆಲ್‌ಬೆಟ್ಟು, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಹಾಗೂ ಸದಸ್ಯರಾದ ಸತೀಶ್ ಕಿಲ್ಪಾಡಿ ಮತ್ತು ಸುಪ್ರೀತ್ ಸುವರ್ಣ ಉಪಸ್ಥಿತರಿದ್ದರು.
