ಬಿಲ್ಲವರ ಅಸೋಸಿಯೇಶನ್ ಡೊಂಬಿವಲಿ: ರವಿ ಎಸ್. ಸನಿಲ್ ಅವರಿಗೆ ಸನ್ಮಾನ, ಸಮಾಜ ಸೇವೆಗೆ 24 ಗಂಟೆಯೂ ಸಿದ್ಧ
ಡೊಂಬಿವಲಿ, ಆ. 17: ಮುಂಬಯಿಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ...

ಡೊಂಬಿವಲಿ, ಆ. 17: ಮುಂಬಯಿಯ ಪ್ರತಿಷ್ಠಿತ ಸಾಮಾಜಿಕ ಸಂಘಟನೆಗಳಲ್ಲೊಂದಾದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಡೊಂಬಿವಲಿ ಸ್ಥಳೀಯ ಕಚೇರಿಯ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತ್ಯುತ್ಸವವು ಆ. 30ರಂದು ಡೊಂಬಿವಲಿ ಕಸ್ತೂರಿ ಪ್ಲಾಜಾದ ಅನಂತ ಸ್ಮತಿ ಕಟ್ಟಡದಲ್ಲಿರುವ ಸ್ಥಳೀಯ ಕಚೇರಿಯಲ್ಲಿ ಭಕ್ತಿಭಾವದಿಂದ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಪದಾಧಿಕಾರಿಗಳು ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಮಿತಿಯ ಅರ್ಚಕ ಈಶ್ವರ್ ಕೋಟ್ಯಾನ್ ಅವರ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಿತು.
ಕೇಂದ್ರ ಸಮಿತಿಯ ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್ ಅವರ ದೀರ್ಘಕಾಲೀನ ಸಾಮಾಜಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಬಿಲ್ಲವರ ಅಸೋಸಿಯೇಶನ್ ಮುಂಬಯಿ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಎಲ್.ವಿ. ಅಮೀನ್ ಅವರ ಉಪಸ್ಥಿತಿಯಲ್ಲಿ ಈ ಗೌರವ ಸಮರ್ಪಿಸಲಾಯಿತು.

“ಸಮಾಜ ಸೇವೆಗೆ 24 ಗಂಟೆಯೂ ಸಿದ್ಧ”
ಸನ್ಮಾನ ಸ್ವೀಕರಿಸಿದ ರವಿ ಎಸ್. ಸನಿಲ್ ಅವರು ಡೊಂಬಿವಲಿ ಸ್ಥಳೀಯ ಸಮಿತಿಯೊಂದಿಗಿನ ತಮ್ಮ ದೀರ್ಘಕಾಲೀನ ನಂಟನ್ನು ಸ್ಮರಿಸಿದರು. “1988ರ ಆಗಸ್ಟ್ 15ರಂದು ವ್ಯವಸ್ಥಿತ ಪೂರ್ವ ತಯಾರಿಯೊಂದಿಗೆ ಮನೆ-ಮನೆಗೆ ತೆರಳಿ ಕಟ್ಟಿ ಬೆಳೆಸಿದ ನಮ್ಮ ಡೊಂಬಿವಲಿ ಸ್ಥಳೀಯ ಸಮಿತಿಯು ಇಂದು ಮಾದರಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಸಂಘಟನೆಯ ಬೆಳವಣಿಗೆಗೆ ಭದ್ರ ಬುನಾದಿ ಹಾಕಿದ ಬಿ.ವೈ. ಸುವರ್ಣ, ವಿ.ವಿ. ಸುವರ್ಣ, ಸಂಜೀವ ಪಾಲನ್ ಹಾಗೂ ಕೆ. ಪಾಂಡುರಂಗ ಅವರಂತಹ ಹಿರಿಯ ಆಧಾರಸ್ತಂಭಗಳ ನಿಸ್ವಾರ್ಥ ಸೇವೆ ಹಾಗೂ ತ್ಯಾಗ ಸದಾ ಅವಿಸ್ಮರಣೀಯ. ಇಂತಹ ಮಹನೀಯರೊಂದಿಗೆ ಕೆಲಸ ಮಾಡುವ ಸೌಭಾಗ್ಯ ನನ್ನದಾಗಿತ್ತು,” ಎಂದು ಅವರು ಹೇಳಿದರು.

“ಡೊಂಬಿವಲಿ ಸ್ಥಳೀಯ ಕಚೇರಿ ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾಗಿದ್ದು, ಸಮಾಜ ಬಾಂಧವರ ಶೈಕ್ಷಣಿಕ, ವೈದ್ಯಕೀಯ ಅಥವಾ ಯಾವುದೇ ತುರ್ತು ಅಗತ್ಯತೆಗಳಿಗೆ ಸ್ಪಂದಿಸಲು ನಾನು ದಿನದ 24 ಗಂಟೆಯೂ ಸೇವೆಗೆ ಲಭ್ಯವಿದ್ದೇನೆ. ಸಮಾಜವು ನೀಡಿದ ಈ ಸನ್ಮಾನವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಪವಿತ್ರ ಪ್ರಸಾದವೆಂದು ಭಕ್ತಿಪೂರ್ವಕವಾಗಿ ಸ್ವೀಕರಿಸುತ್ತೇನೆ. ನನ್ನನ್ನು ಗುರುತಿಸಿ ಗೌರವಿಸಿದ ಡೊಂಬಿವಲಿ ಸ್ಥಳೀಯ ಸಮಿತಿಯ ಸಮಸ್ತ ಪದಾಧಿಕಾರಿಗಳಿಗೆ ಹೃತ್ಪೂರ್ವಕ ಕೃತಜ್ಞತೆಗಳು,” ಎಂದು ರವಿ ಎಸ್. ಸನಿಲ್ ತಿಳಿಸಿದರು.

ಸ್ಥಳೀಯ ಕಚೇರಿಯ ಗೌರವಾಧ್ಯಕ್ಷ ಮಂಜಪ್ಪ ಕೆ. ಪೂಜಾರಿ, ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್, ಉಪಾಧ್ಯಕ್ಷರಾದ ಚಂದ್ರಹಾಸ ಎಸ್. ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ, ಗೌರವ ಕಾರ್ಯದರ್ಶಿ ಜೆ.ಜೆ. ಕೋಟ್ಯಾನ್, ಕೋಶಾಧಿಕಾರಿ ಆನಂದ್ ಡಿ. ಪೂಜಾರಿ, ಜತೆ ಕಾರ್ಯದರ್ಶಿ ವಿಠ್ಠಲ್ ಪಿ. ಅಮೀನ್, ಜತೆ ಕೋಶಾಧಿಕಾರಿ ಜಗನ್ನಾಥ್ ಸಿ. ಸನಿಲ್, ಪೂಜಾ ಉಪಸಮಿತಿಯ ಕಾರ್ಯಾಧ್ಯಕ್ಷ ಅನ್ನು ಕೆ. ಪೂಜಾರಿ ಸೇರಿದಂತೆ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸರ್ವ ಸದಸ್ಯರು ಶ್ರಮಿಸಿದರು.
ಸಮಾರಂಭದಲ್ಲಿ ಪರಿಸರದ ಅಪಾರ ಸಂಖ್ಯೆಯ ಸಮಾಜ ಬಾಂಧವರು, ಕೇಂದ್ರ ಕಚೇರಿ ಹಾಗೂ ವಿವಿಧ ಸ್ಥಳೀಯ ಕಚೇರಿಗಳ ಪ್ರತಿನಿಧಿಗಳು ಮತ್ತು ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಪಾಲ್ಗೊಂಡಿದ್ದರು.
