ಬಿಲ್ಲವರ ಅಸೋಸಿಯೇಷನ್ ಮುಂಬೈ ಡೊಂಬಿವಲಿ ಸ್ಥಳೀಯ ಸಮಿತಿಯಿಂದ ವಿಜೃಂಭಣೆಯ ಗುರುಪೂರ್ಣಿಮಾ ಆಚರಣೆ
ಬಿಲ್ಲವರ ಅಸೋಸಿಯೇಷನ್ ಮುಂಬೈನ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಜುಲೈ 29ರಂದು ಸ್ಥಳೀಯ ಸಮಿತಿಯ ಕಚೇರಿ ಸಭಾಂಗಣದಲ್ಲಿ

ಡೊಂಬಿವಲಿ, ಜು. 29: ಬಿಲ್ಲವರ ಅಸೋಸಿಯೇಷನ್ ಮುಂಬೈನ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಗುರುಪೂರ್ಣಿಮಾ ಮಹೋತ್ಸವವನ್ನು ಜುಲೈ 29ರಂದು ಸ್ಥಳೀಯ ಸಮಿತಿಯ ಕಚೇರಿ ಸಭಾಂಗಣದಲ್ಲಿ ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಸಂಭ್ರಮದೊಂದಿಗೆ ಆಚರಿಸಲಾಯಿತು.
ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ವಿವಿಧ ಪೂಜಾ ವಿಧಿವಿಧಾನಗಳು ನೆರವೇರಿದವು. ಸಮಿತಿಯ ಭಜನಾ ಮಂಡಳಿಯ ಸದಸ್ಯರಿಂದ ದಿವ್ಯ ಭಜನಾ ಸಂಕೀರ್ತನೆ ನಡೆಯಿತು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಭಜನಾ ಸದಸ್ಯರ ಮಕ್ಕಳಿಂದ ಮನಮೋಹಕ ಕುಣಿತ ಭಜನೆ ಪ್ರದರ್ಶನ ಜರುಗಿದ್ದು, ನೆರೆದಿದ್ದ ಸಮಾಜ ಬಾಂಧವರ ಮೆಚ್ಚುಗೆಗೆ ಪಾತ್ರವಾಯಿತು.
ಕುಣಿತ ಭಜನೆಗೆ ತರಬೇತಿ ನೀಡಿದ ಶ್ರುತಿ ಪೂಜಾರಿ ಅವರನ್ನು ಅವರ ವಿದ್ಯಾರ್ಥಿಗಳು ಗುರು ವಂದನೆ ಸಲ್ಲಿಸಿ ಗೌರವಿಸಿ ಆಶೀರ್ವಾದ ಪಡೆದರು. ಈ ಭಾವನಾತ್ಮಕ ಕ್ಷಣ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕೇಂದ್ರ ಕಚೇರಿಯ ಕೋಶಾಧಿಕಾರಿ ರವಿ ಎಸ್. ಸನಿಲ್, ಡೊಂಬಿವಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಪೂಜಾರಿ, ಉಪ ಕಾರ್ಯಾಧ್ಯಕ್ಷರಾದ ಚಂದ್ರಹಾಸ ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ, ಕೋಶಾಧಿಕಾರಿ ಆನಂದ ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಹಾಗೂ ಯುವ ವಿಭಾಗದ ಪದಾಧಿಕಾರಿಗಳು, ಸದಸ್ಯರು ಮತ್ತು ಅಪಾರ ಸಂಖ್ಯೆಯ ಸಮಾಜ ಬಾಂಧವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಗುರುಪೂಜೆ, ಮಹಾಮಂಗಳಾರತಿ ನೆರವೇರಿಸಿ, ಭಕ್ತಾದಿಗಳಿಗೆ ತೀರ್ಥ ಪ್ರಸಾದ ಹಾಗೂ ಅನ್ನಪ್ರಸಾದ ವಿತರಿಸಲಾಯಿತು.
ಸಮಿತಿಯ ಗೌರವ ಕಾರ್ಯದರ್ಶಿ ಜೆ. ಜೆ. ಕೋಟ್ಯಾನ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ ಯಶಸ್ವಿಗೊಳಿಸಿದರು.
