ಬಿಲ್ಲವಾಸ್ ದುಬೈ ಚಾರಿಟೇಬಲ್ ಟ್ರಸ್ಟ್‌ನಿಂದ ವಿದ್ಯಾರ್ಥಿವೇತನ, ಪ್ರತಿಭಾವಂತರಿಗೆ ಸನ್ಮಾನ
ಮಂಗಳೂರು: ಬಿಲ್ಲವಾಸ್ ದುಬೈ & ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ...

ಮಂಗಳೂರು: ಬಿಲ್ಲವಾಸ್ ದುಬೈ & ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸಹಯೋಗದಲ್ಲಿ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಹಾಗೂ ವೈದ್ಯಕೀಯ ನೆರವು ಹಸ್ತಾಂತರ ಕಾರ್ಯಕ್ರಮ ಭಾನುವಾರ (ಆ.9) ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ ಉದ್ಘಾಟಿಸಿದರು. ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವುದು ಹಾಗೂ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ನೆರವು ಒದಗಿಸುವುದು ಪುಣ್ಯದ ಕೆಲಸವಾಗಿದೆ. ಫಲಾನುಭವಿಗಳು ನೆರವಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆಗಳ ಮಾಜಿ ಡೀನ್ ಡಾ. ಉಮ್ಮಪ್ಪ ಪೂಜಾರಿ ಪಿ. ಮಾತನಾಡಿ, ಬಿಲ್ಲವಾಸ್ ದುಬೈ & ನಾರ್ದರ್ನ್ ಎಮಿರೇಟ್ಸ್ ಚಾರಿಟೇಬಲ್ ಟ್ರಸ್ಟ್ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ದೊಡ್ಡ ಸೇವಾ ಕಾರ್ಯ ನಡೆಸುತ್ತಿದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವುದಕ್ಕೆ ಸೀಮಿತವಾಗದೆ ತಮ್ಮ ಪ್ರತಿಭೆ ಮತ್ತು ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಗುರು-ಹಿರಿಯರನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಲ್ಲವಾಸ್ ಫ್ಯಾಮಿಲಿ ದುಬೈ ಅಧ್ಯಕ್ಷ ದೀಪಕ್ ಎಸ್.ಪಿ. ಮಾತನಾಡಿ, ಕೊಲ್ಲಿ ರಾಷ್ಟ್ರಗಳಲ್ಲಿ ಪ್ರಸಕ್ತ ಪರಿಸ್ಥಿತಿ ಉತ್ತಮವಾಗಿಲ್ಲದಿದ್ದರೂ ವಿದ್ಯಾರ್ಥಿಗಳಿಗೆ ನೆರವು ನೀಡುವ ಕಾರ್ಯವನ್ನು ನಿಲ್ಲಿಸಬಾರದು ಎಂಬ ನಿರ್ಧಾರದಿಂದ ಈ ವರ್ಷವೂ ವಿದ್ಯಾರ್ಥಿವೇತನ ವಿತರಿಸಲಾಗಿದೆ. ಈ ಸೇವಾ ಕಾರ್ಯಕ್ರಮವನ್ನು ನಿರಂತರವಾಗಿ ಮುಂದುವರಿಸುವ ಉದ್ದೇಶವಿದೆ. ಕುದ್ರೋಳಿ ಕ್ಷೇತ್ರದಲ್ಲಿ ಇದುವರೆಗೆ ವಿದ್ಯಾರ್ಥಿವೇತನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಒಟ್ಟು ₹2.30 ಕೋಟಿಗೂ ಅಧಿಕ ಮೊತ್ತವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಕುದ್ರೋಳಿ ಕ್ಷೇತ್ರದ ಟ್ರಸ್ಟಿ ಕೃತಿನ್ ಡಿ. ಅಮೀನ್ ಹಾಗೂ ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸೀತಾರಾಮ ಎಚ್. ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ ಹಾಗೂ ವಿವಿಧ ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿದ 11 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಬಡ್ಡಿ ಆಟಗಾರ್ತಿ ಧನಲಕ್ಷ್ಮೀ ಪೂಜಾರಿ ಹಾಗೂ ಬಹುಮುಖ ಪ್ರತಿಭೆ ಶ್ರೀಜಾ ಸಿ. ಕೋಟ್ಯಾನ್ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ವೈದ್ಯಕೀಯ ನೆರವನ್ನು ಹಸ್ತಾಂತರಿಸಲಾಯಿತು.
