Skip to content
Billava News

ಭಾರತದ ರಾಯಭಾರಿ ಡಾ. ಶ್ರೀಕರ್ ರೆಡ್ಡಿ ಅವರನ್ನು ಭೇಟಿಯಾದ ಬಿಲ್ಲವಾಸ್ ಕತಾರ್ ನಿಯೋಗ

ದೋಹಾ, ನ. 23: ಬಿಲ್ಲವಾಸ್ ಕತಾರ್ ಅಧ್ಯಕ್ಷ ಸಂದೀಪ್ ಕೃಷ್ಣಪ್ಪ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸದಸ್ಯರು ಕತಾರ್‌ನ ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ ರಾಯಭಾರಿ ಗೌರವಾನ್ವಿತ ಡಾ. ಶ್ರೀಕರ್ ರೆಡ್ಡಿ ಹಾಗೂ ಪ್ರಥಮ ಕಾರ್ಯದರ್ಶಿ ಅಶ್ವನಿ ಕುಮಾರ್ ಅವರನ್ನು ಸೌಜನ್ಯಯುತವಾಗಿ ಭೇಟಿಯಾದರು.

By Billavavani

ಈ ಸಂದರ್ಭದಲ್ಲಿ ಮಾತನಾಡಿದ ರಾಯಭಾರಿ ಡಾ. ಶ್ರೀಕರ್ ರೆಡ್ಡಿ ಅವರು, 2012ರಲ್ಲಿ ಸ್ಥಾಪನೆಯಾದ ಬಿಲ್ಲವಾಸ್ ಕತಾರ್ ಸಂಘಟನೆಯು ಅಂದಿನಿಂದ ಇಂದಿನವರೆಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಶ್ಲಾಘಿಸಿದರು. ಸಂಘಟನೆಯ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯ ಸದಸ್ಯರ ಸಮುದಾಯ ಸೇವೆ ಹಾಗೂ ಕೊಡುಗೆಗಳನ್ನು ಪ್ರಶಂಸಿಸಿದರು.

ಭೇಟಿಯ ಸಂದರ್ಭದಲ್ಲಿ ಬಿಲ್ಲವಾಸ್ ಕತಾರ್ ಸಂಘಟನೆಯ ಸ್ಥಾಪನೆಯ ಹಿನ್ನೆಲೆ, ಇದುವರೆಗೆ ಕೈಗೊಂಡಿರುವ ವಿವಿಧ ಸಮಾಜಮುಖಿ ಕಾರ್ಯಕ್ರಮಗಳು, ಸಮುದಾಯದ ಕಲ್ಯಾಣ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ನಡುವೆ ಸೌಹಾರ್ದ ಮತ್ತು ಒಗ್ಗಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು.

ಈ ಸೌಜನ್ಯಯುತ ಭೇಟಿ ಬಿಲ್ಲವಾಸ್ ಕತಾರ್ ಸಂಘಟನೆಗೆ ಹೆಮ್ಮೆಯ ಹಾಗೂ ಪ್ರೋತ್ಸಾಹದಾಯಕ ಕ್ಷಣವಾಗಿದ್ದು, ಅಮೂಲ್ಯ ಸಮಯ ಮೀಸಲಿಟ್ಟು ಸಂಘಟನೆಯ ಕಾರ್ಯಗಳನ್ನು ಮೆಚ್ಚಿ ಪ್ರೋತ್ಸಾಹಿಸಿದ ರಾಯಭಾರಿ ಹಾಗೂ ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಂಘಟನೆಯ ವತಿಯಿಂದ ಕೃತಜ್ಞತೆ.

ಮುಂದಿನ ದಿನಗಳಲ್ಲಿಯೂ ಸಮಾಜಸೇವೆ, ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಹಾಗೂ ಸದಸ್ಯರ ನಡುವೆ ಏಕತೆ ಮತ್ತು ಸಹೋದರತ್ವವನ್ನು ಬೆಳೆಸುವ ಕಾರ್ಯಗಳಿಗೆ ಬಿಲ್ಲವಾಸ್ ಕತಾರ್ ಬದ್ಧವಾಗಿರಲಿದೆ ಎಂದು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.

ಒಂದು ತಂಡ – ಒಂದು ಕುಟುಂಬ – ಒಂದೇ ಬಿಲ್ಲವಾಸ್ ಕತಾರ್.