Skip to content
Billava News

ಅಶಕ್ತ ಕುಟುಂಬಗಳ ಬಾಳಲ್ಲಿ ಬೆಳಕಾದ ಬ್ರಹ್ಮಾವರ ಬಿಲ್ಲವ ಯುವ ವೇದಿಕೆ

ನಾರಾಯಣ ಗುರುಗಳ ಸಮಾನತೆ, ಮಾನವೀಯತೆ ಸಂದೇಶದೊಂದಿಗೆ ಅರ್ಥಪೂರ್ಣ ದೀಪಾವಳಿ ಸೇವಾ ಕಾರ್ಯಕ್ರಮ

By Billavavani
ಅಶಕ್ತ ಕುಟುಂಬಗಳ ಬಾಳಲ್ಲಿ ಬೆಳಕಾದ ಬ್ರಹ್ಮಾವರ ಬಿಲ್ಲವ ಯುವ ವೇದಿಕೆ

ಬ್ರಹ್ಮಾವರ: ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ, ಬದಲಾಗಿ ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕನ್ನು ಮೂಡಿಸುವ ಹಬ್ಬ ಎಂಬ ಆಶಯದೊಂದಿಗೆ ಬ್ರಹ್ಮಾವರ ಬಿಲ್ಲವ ಸಂಘದ ಬಿಲ್ಲವ ಯುವ ವೇದಿಕೆಯ ವತಿಯಿಂದ ವಿಶೇಷ ದೀಪಾವಳಿ ಸೇವಾ ಕಾರ್ಯಕ್ರಮವನ್ನು ಶನಿವಾರ ಬ್ರಹ್ಮಾವರದ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಲಾಯಿತು.

“ಅರಿವಿನ ಗುರು – ಗುರುವಿನ ಬೆಳಕು” ಎಂಬ ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮವು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ, ಮಾನವೀಯತೆ ಮತ್ತು ಸಹೋದರತ್ವದ ತತ್ವಾದರ್ಶಗಳನ್ನು ಸಮಾಜದಲ್ಲಿ ಕಾರ್ಯರೂಪಕ್ಕೆ ತರುವ ಉದ್ದೇಶ ಹೊಂದಿತ್ತು. ಆರ್ಥಿಕವಾಗಿ ಹಿಂದುಳಿದ ವಿಧವೆಯರ ಕುಟುಂಬಗಳೊಂದಿಗೆ ದೀಪಾವಳಿಯ ಸಂತೋಷವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

1001229612.jpg

ಈ ಸಂದರ್ಭದಲ್ಲಿ ಆಯ್ದ ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಅಗತ್ಯ ವಸ್ತುಗಳು, ಹೊಸ ಬಟ್ಟೆಗಳು, ಪಟಾಕಿ ಹಾಗೂ ದೀಪಾವಳಿ ಉಡುಗೊರೆಗಳನ್ನು ವಿತರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ವಿಶೇಷವಾಗಿ ಉಡುಗೊರೆಗಳೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನೂ ನೀಡಲಾಯಿತು. ಗುರುಗಳ ಭಾವಚಿತ್ರವನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಮೂಲಕ ಅವರ ಆದರ್ಶ ಮತ್ತು ಸಂದೇಶಗಳನ್ನು ಮನೆಮನೆಗೆ ತಲುಪಿಸುವ ಆಶಯವನ್ನು ಯುವ ವೇದಿಕೆ ಹೊಂದಿತ್ತು.

1001229616.jpg

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ನಮ್ಮ ಮನೆಯ ಅಂಗಳದಲ್ಲಿ ದೀಪ ಬೆಳಗಿಸುವುದರ ಜೊತೆಗೆ ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕು ಮೂಡಿಸುವ ಕಾರ್ಯವನ್ನು ಯುವ ವೇದಿಕೆಯವರು ಮಾಡಿದ್ದಾರೆ. ನೀಡಿದ ಉಡುಗೊರೆಗಳ ಮೌಲ್ಯಕ್ಕಿಂತ ಅದರ ಹಿಂದಿರುವ ಪ್ರೀತಿ, ಕಾಳಜಿ ಮತ್ತು ಮಾನವೀಯತೆ ದೊಡ್ಡದು. ನಾರಾಯಣ ಗುರುಗಳ ತತ್ವಾದರ್ಶಗಳನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಅನುಷ್ಠಾನಗೊಳಿಸುತ್ತಿರುವುದು ಶ್ಲಾಘನೀಯ” ಎಂದು ಮೆಚ್ಚುಗೆ ವ್ಯಕ್ತಪಡಿಸಿ ಬಿಲ್ಲವ ಯುವ ವೇದಿಕೆಯ ಕಾರ್ಯಕ್ಕೆ ಶುಭ ಹಾರೈಸಿದರು.

ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಅವರು ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಸಚಿನ್ ಪೂಜಾರಿ ಹೇರೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

1001229618.jpg

ಈ ಸಂದರ್ಭದಲ್ಲಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ, ಕೋಶಾಧಿಕಾರಿ ಚೇತನ್ ಪೂಜಾರಿ, ಬಿಲ್ಲವ ಸಂಘದ ಕಾರ್ಯದರ್ಶಿ ಶೇಖರ್ ಪೂಜಾರಿ, ಉಪಾಧ್ಯಕ್ಷರಾದ ರಾಜು ಪೂಜಾರಿ ಉಪ್ಪೂರು, ಅಶೋಕ್ ಪೂಜಾರಿ ಹಾರಾಡಿ, ರಾಘು ಪೂಜಾರಿ ಹೇರೂರು, ಜೊತೆ ಕಾರ್ಯದರ್ಶಿ ಅಶೋಕ್ ಪೂಜಾರಿ (ಇ), ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪೂಜಾರಿ ಹಂದಾಡಿ, ಶೈಲಾ, ಹೇಮಾ, ಬಾಲಕೃಷ್ಣ ಪೂಜಾರಿ, ಸೀತಾರಾಮ್ ಪೂಜಾರಿ, ಅಶೋಕ್ ಕಲ್ಕಾರ್ ಸೇರಿದಂತೆ ಬಿಲ್ಲವ ಯುವ ವೇದಿಕೆಯ ಸಚಿನ್ ಪೂಜಾರಿ ಕುಕ್ಕುಡೆ, ರಾಕೇಶ್ ಪೂಜಾರಿ, ಪ್ರತಾಪ್ ಪೂಜಾರಿ, ದೀಪು ಚಾಂತಾರು, ಕಿಶೋರ್ ವಾರಂಬಳ್ಳಿ, ನಿತ್ಯಾನಂದ ಪೂಜಾರಿ, ರಕ್ಷಿತ್ ಕುಂಬ್ರಗೋಡು, ಶಶಾಂಕ್ ಹೇರೂರು, ನಿಖಿಲ್ ಹೊನ್ನಾಳ, ರಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಯುವ ವೇದಿಕೆಯ ಮಾಧ್ಯಮ ಸಂಚಾಲಕ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.