ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಕಂಚಿನ ಪ್ರಭಾವಳಿ ಸಮರ್ಪಣೆ
ಗಾಣದಪಡ್ಪು ಬಿಸಿರೋಡುದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಗಾಣದಪಡ್ಪು...

ಗಾಣದಪಡ್ಪು, ಆ. 29: ಗಾಣದಪಡ್ಪು ಬಿಸಿರೋಡುದಲ್ಲಿರುವ ಬ್ರಹ್ಮಶ್ರೀ ನಾರಾಯಣಗುರು ಮಂದಿರಕ್ಕೆ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಗಾಣದಪಡ್ಪು ಇದರ ಅಧ್ಯಕ್ಷರು ಹಾಗೂ ಶುಭಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕರಾದ ಭುವನೇಶ್ ಪಚಿನಡ್ಕ ಅವರು ತಮ್ಮ ಸೇವಾರೂಪದಲ್ಲಿ ಕಂಚಿನ ಪ್ರಭಾವಳಿಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸಿದರು.
ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆಯ ಶುಭ ಸಂದರ್ಭದಲ್ಲಿ ಗುರುಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಅರ್ಚಕರ ವೈದಿಕ ಮಂತ್ರಘೋಷಗಳ ನಡುವೆ ಪ್ರಭಾವಳಿಯನ್ನು ಗುರುಗಳ ಮೂರ್ತಿಗೆ ಅರ್ಪಿಸಿ ಸಮರ್ಪಣಾ ವಿಧಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭುವನೇಶ್ ಪಚಿನಡ್ಕ ಅವರು, “ಗುರುಮಂದಿರದ ಅಭಿವೃದ್ಧಿ ಕಾರ್ಯಗಳಲ್ಲಿ ಹಾಗೂ ಗುರುಸೇವೆಯಲ್ಲಿ ಭಾಗಿಯಾಗುವುದು ನಮ್ಮ ಪೂರ್ವಜನ್ಮದ ಪುಣ್ಯ. ನನ್ನ ತಂದೆ ಸೇಸಪ್ಪ ಕೋಟ್ಯಾನ್ ಅವರ ಸೇವಾ ಪರಂಪರೆಯ ಹಾದಿಯಲ್ಲಿ ಸಾಗುತ್ತಾ, ಗುರುಗಳ ಸನ್ನಿಧಿಗೆ ಈ ಕಂಚಿನ ಪ್ರಭಾವಳಿಯನ್ನು ಸಮರ್ಪಿಸಲು ಅವಕಾಶ ದೊರೆತಿರುವುದು ನನಗೆ ಹಾಗೂ ನನ್ನ ಕುಟುಂಬಕ್ಕೆ ಅತ್ಯಂತ ಸಂತೋಷದ ವಿಷಯವಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂದಿರದ ಪದಾಧಿಕಾರಿಗಳು, ಭಕ್ತಾದಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದು, ಗುರುಗಳ ಆಶೀರ್ವಾದವನ್ನು ಪಡೆದರು.
