ಡೊಂಬಿವಲಿ: ಬಿಲ್ಲವರ ಅಸೋಸಿಯೇಶನ್ ವತಿಯಿಂದ ತುಳುನಾಡಿನ ಸಂಸ್ಕೃತಿಯ ಅನಾವರಣ
ಮುಂಬೈ: ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಬದುಕಿನ ವೈವಿಧ್ಯಮಯ ಅಂಶಗಳು ಅನಾವರಣಗೊಂಡವು.

ಮುಂಬೈ: ಬಿಲ್ಲವರ ಅಸೋಸಿಯೇಶನ್, ಮುಂಬೈ ಇದರ ಡೊಂಬಿವಲಿ ಸ್ಥಳೀಯ ಸಮಿತಿ ವತಿಯಿಂದ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಜನಪದ ಬದುಕಿನ ವೈವಿಧ್ಯಮಯ ಅಂಶಗಳು ಅನಾವರಣಗೊಂಡವು.
ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ನೃತ್ಯ, ಗಾಯನ, ಆಟಿ ತಿಂಗಳ ನೆನಪಿನ ಪ್ರಾತ್ಯಕ್ಷಿಕೆ, ಕೋಳಿ ಅಂಕದ ಅಣಕು ಪ್ರದರ್ಶನ ಹಾಗೂ ಆಟಿ ಕಳಂಜ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು. ‘ನಮ್ಮ ಸಂಘ ಡೊಂಬಿವಲಿ’ ಮಕ್ಕಳ ನೃತ್ಯ ವೈಭವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.

ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದ್ದ 55 ವಿಧದ ತುಳುನಾಡಿನ ಸಾಂಪ್ರದಾಯಿಕ ಖಾದ್ಯಗಳನ್ನು ಮಹಿಳೆಯರು ತಮ್ಮ ಮನೆಗಳಲ್ಲೇ ಸಿದ್ಧಪಡಿಸಿ ತಂದು ಸಮಾಜ ಬಾಂಧವರಿಗೆ ಉಣಬಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್, “ಹಿಂದಿನ ಕಾಲದಲ್ಲಿ ನಮ್ಮ ಹಿರಿಯರಿಗೆ ಆಟಿ ತಿಂಗಳು ಅತ್ಯಂತ ಕಷ್ಟದ ದಿನಗಳಾಗಿದ್ದವು. ಅಂದಿನ ಕಠಿಣ ಪರಿಸ್ಥಿತಿ ಹಾಗೂ ಜೀವನ ಮೌಲ್ಯಗಳ ಕುರಿತು ಇಂದಿನ ಯುವ ಪೀಳಿಗೆಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕೂಟದಲ್ಲಿ ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ಪರಿಸರದ ಗಣ್ಯರು ಪಾಲ್ಗೊಂಡಿರುವುದು ಸಂತೋಷ ತಂದಿದೆ,” ಎಂದರು.

ಸಂಘದ ಭಜನೆ, ಗುರುಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಒಂಬತ್ತು ಮಂದಿ ಅರ್ಹ ಮಹಿಳೆಯರನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮವನ್ನು ಸ್ಥಳೀಯ ಸಮಿತಿ ಗೌರವ ಕಾರ್ಯದರ್ಶಿ ಜೆ.ಜೆ. ಕೋಟ್ಯಾನ್ ನಿರೂಪಿಸಿದರು. ಮಹಿಳಾ ವಿಭಾಗದ ದೇವಿಕಾ ಕೆ. ಸಾಲ್ಯಾನ್ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಚಿನ್ಮಯ್ ಎಂ. ಸಾಲ್ಯಾನ್ ಹಾಗೂ ಸುಶ್ಮಿತಾ ಪೂಜಾರಿ ನಡೆಸಿಕೊಟ್ಟರು.

ಕೇಂದ್ರ ಸಮಿತಿಯ ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಮಾಜ ಸೇವಕಿ ಶ್ಯಾಮಲಾ ಪೂಜಾರಿ, ದೀಪಾ ಎಸ್. ಕೋಟ್ಯಾನ್, ಚಾಂದನಿ ರಾಮಚಂದ್ರ ಬಂಗೇರ, ಕುಶಾ ರವಿ ಸನಿಲ್ ಹಾಗೂ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ದೇವಿಕಾ ಕೆ. ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಗೌರವಾಧ್ಯಕ್ಷ ಮಂಜಪ್ಪ ಕೆ. ಪೂಜಾರಿ, ಉಪಾಧ್ಯಕ್ಷರಾದ ಚಂದ್ರಹಾಸ ಎಸ್. ಪಾಲನ್ ಹಾಗೂ ಸಚಿನ್ ಜಿ. ಪೂಜಾರಿ, ಕೋಶಾಧಿಕಾರಿ ಆನಂದ್ ಡಿ. ಪೂಜಾರಿ ಸೇರಿದಂತೆ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ಸರ್ವ ಸದಸ್ಯರು ಶ್ರಮಿಸಿದರು. ಅಪಾರ ಸಂಖ್ಯೆಯಲ್ಲಿ ಸಮಾಜ ಬಾಂಧವರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಪಾಲ್ಗೊಂಡು ಕಾರ್ಯಕ್ರಮದ ಸಂಭ್ರಮವನ್ನು ಹೆಚ್ಚಿಸಿದರು.
















