ವಿಟ್ಲದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ನೆರೆಮನೆಯವರ ಸಮಯಪ್ರಜ್ಞೆಯಿಂದ ಮನೆ ಸಿಬ್ಬಂದಿ ರಕ್ಷಣೆ
ವಿಟ್ಲ ಕಸಬಾ ಗ್ರಾಮದ ಕುರುಂಬಾಳದಲ್ಲಿ ಭಾನುವಾರ ಬೆಳಿಗ್ಗೆ ಗೃಹಬಳಕೆಯ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಭಾರೀ ಹಾನಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.

ವಿಟ್ಲ ಕಸಬಾ ಗ್ರಾಮದ ಕುರುಂಬಾಳದಲ್ಲಿ ಭಾನುವಾರ ಬೆಳಿಗ್ಗೆ ಗೃಹಬಳಕೆಯ ಅನಿಲ ಸಿಲಿಂಡರ್ ಸ್ಫೋಟಗೊಂಡು ಮನೆಗೆ ಭಾರೀ ಹಾನಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಈ ಘಟನೆ ಭಾನುವಾರ ಬೆಳಿಗ್ಗೆ ಸುಮಾರು 11 ಗಂಟೆಗೆ ಕುರುಂಬಾಳ ನಿವಾಸಿ ಹಮೀದ್ ಅವರ ಮನೆಯಲ್ಲಿ ನಡೆದಿದೆ.
ಘಟನೆ ಸಂಭವಿಸಿದ ವೇಳೆ ಹಮೀದ್ ಅವರು ಪಟ್ಟಣಕ್ಕೆ ತೆರಳಿದ್ದರೆ, ಅವರ ಪತ್ನಿ ಖೈರುನ್ನಿಸಾ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗ್ಯಾಸ್ ಸಿಲಿಂಡರ್‌ನ ರೆಗ್ಯುಲೇಟರ್ ಸಮೀಪದಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಖೈರುನ್ನಿಸಾ ಸಹಾಯಕ್ಕಾಗಿ ಕೂಗಿಕೊಂಡಿದ್ದು, ಅವರ ಕಿರುಚಾಟ ಕೇಳಿದ ನೆರೆಮನೆಯ ಉಮರ್ ಅವರು ಧಾವಿಸಿ ಬಂದು ಕುಟುಂಬದ ಸದಸ್ಯರನ್ನು ಸುರಕ್ಷಿತವಾಗಿ ಮನೆಯ ಅಂಗಳಕ್ಕೆ ಕರೆತಂದು ರಕ್ಷಿಸಿದ್ದಾರೆ.
ಕುಟುಂಬದವರು ಮನೆಯಿಂದ ಹೊರಬಂದ ಕೆಲವೇ ಕ್ಷಣಗಳಲ್ಲಿ ಗ್ಯಾಸ್ ಸಿಲಿಂಡರ್ ಭಾರೀ ಸದ್ದು ಮಾಡಿ ಸ್ಫೋಟಗೊಂಡಿದ್ದು, ಸಿಲಿಂಡರ್ ತುಂಡಾಗಿ ಚಿಂದಿಯಾಗಿದೆ.
ಸ್ಫೋಟದ ತೀವ್ರತೆಗೆ ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಅಡುಗೆ ಮನೆ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ಪ್ರಮುಖ ದಾಖಲೆಗಳು ಹಾಗೂ ಪೀಠೋಪಕರಣಗಳಿಗೂ ಹಾನಿಯಾಗಿದೆ. ಈ ಘಟನೆಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಟ್ಲ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಟ್ಲದ ಇಂಡೇನ್ ಗ್ಯಾಸ್ ವಿತರಕರಾದ ಸಾಯಿ ಗಣೇಶ್ ಸಂಸ್ಥೆಯ ಮಾಲೀಕ ಸತೀಶ್ ಆಳ್ವ ಸೇರಿದಂತೆ ಹಲವಾರು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು.
