Skip to content
Billava News

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಅವಿರೋಧ ಆಯ್ಕೆ

ಭಾರತೀಯ ವೈದ್ಯಕೀಯ ಸಂಘದ (IMA) ರಾಜ್ಯ ಸಂಸ್ಥೆಯ ವಾರ್ಷಿಕ ಆಡಳಿತ ಮಂಡಳಿ ಚುನಾವಣೆ ಸೆ. 27ರಂದು ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಡಾ. ವಿಕಾಸ್ ಅವರ ನೇತೃತ್ವದಲ್ಲಿ ನಡೆಯಿತು.

By Billavavani
ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಅವಿರೋಧ ಆಯ್ಕೆ

ಮಂಗಳೂರು: ಭಾರತೀಯ ವೈದ್ಯಕೀಯ ಸಂಘದ (IMA) ರಾಜ್ಯ ಸಂಸ್ಥೆಯ ವಾರ್ಷಿಕ ಆಡಳಿತ ಮಂಡಳಿ ಚುನಾವಣೆ ಸೆ. 27ರಂದು ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಡಾ. ವಿಕಾಸ್ ಅವರ ನೇತೃತ್ವದಲ್ಲಿ ನಡೆಯಿತು. ಚುನಾವಣೆಯಲ್ಲಿ ನಗರದ ಖ್ಯಾತ ಮೂತ್ರರೋಗ ತಜ್ಞ ಹಾಗೂ ಶಸ್ತ್ರಚಿಕಿತ್ಸಕ, ವೆನ್‌ಲಾಕ್ ಆಸ್ಪತ್ರೆಯ ಮೂತ್ರರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಅವರು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಾ. ಸದಾನಂದ ಪೂಜಾರಿ ಅವರು ಪ್ರಸ್ತುತ ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದಾರೆ.

ಶಿವಮೊಗ್ಗದಲ್ಲಿ ಅ. 23 ಮತ್ತು 24ರಂದು ನಡೆಯಲಿರುವ ಭಾರತೀಯ ವೈದ್ಯಕೀಯ ಸಂಘದ ರಾಜ್ಯಮಟ್ಟದ ಸಮ್ಮೇಳನದಲ್ಲಿ ಡಾ. ಸದಾನಂದ ಪೂಜಾರಿ ಅವರು ರಾಜ್ಯ ಉಪಾಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಅವರಿಗೆ ರಾಜ್ಯಮಟ್ಟದ ಡಾ. ಬಿ.ಸಿ. ರಾಯ್ ಪ್ರಶಸ್ತಿ ಸೇರಿದಂತೆ ವಿವಿಧ ಗೌರವಗಳು ಲಭಿಸಿವೆ. ಅಲ್ಲದೆ, ದೃಶ್ಯಮಾಧ್ಯಮ ಕ್ಷೇತ್ರದ ಸುವರ್ಣಕನ್ನಡ ನ್ಯೂಸ್ ವಾಹಿನಿಯ ಹೆಲ್ತ್‌ಕೇರ್ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ.

ಭಾರತೀಯ ವೈದ್ಯಕೀಯ ಸಂಘವು ಕರ್ನಾಟಕದಲ್ಲಿ 175 ಶಾಖೆಗಳನ್ನು ಹೊಂದಿದ್ದು, ಸುಮಾರು 38 ಸಾವಿರ ಸದಸ್ಯರನ್ನು ಒಳಗೊಂಡಿದೆ. ರಾಜ್ಯ ಉಪಾಧ್ಯಕ್ಷರಾಗಿ ಡಾ. ಸದಾನಂದ ಪೂಜಾರಿ ಅವರ ಅವಿರೋಧ ಆಯ್ಕೆಗೆ ವೈದ್ಯಕೀಯ ಕ್ಷೇತ್ರದ ಗಣ್ಯರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.