Skip to content
Tulunadu Special

ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ

ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಅವರು ಆಯ್ಕೆಯಾಗಿದ್ದಾರೆ.

By Billavavani
ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಡಾ. ವಾಣಿಶ್ರೀ ಕಾಸರಗೋಡು ಆಯ್ಕೆ

ಪಾರ್ಪಜೆ ಈಶ್ವರ ಭಟ್ ಹಾಗೂ ದೇವಕಿ ದಂಪತಿಗಳ ಪುತ್ರಿಯಾಗಿರುವ ಡಾ. ವಾಣಿಶ್ರೀ ಅವರು ಪ್ರಾಥಮಿಕ ಶಿಕ್ಷಣವನ್ನು ಸ್ಥಳೀಯ ಶಿಕ್ಷಣ ಸಂಸ್ಥೆಗಳಲ್ಲಿ, ಪ್ರೌಢ ಶಿಕ್ಷಣವನ್ನು ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ, ಪಿಯುಸಿ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಹಾಗೂ ಆಯುರ್ವೇದ ವೈದ್ಯಕೀಯ ಪದವಿಯನ್ನು ಸುಳ್ಯದ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.

ಬಾಲ್ಯದಲ್ಲಿಯೇ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಗಮನ ಸೆಳೆದ ಅವರು, ನಂತರ ವೈದ್ಯಕೀಯ ವೃತ್ತಿಯನ್ನು ಜೀವನದ ಧ್ಯೇಯವನ್ನಾಗಿ ಆರಿಸಿಕೊಂಡರು. ವಿವಾಹದ ಬಳಿಕ ಪತಿ ಡಾ. ವೆಂಕಟಗಿರೀಶ್ ಅವರೊಂದಿಗೆ ಕಾಸರಗೋಡಿನ ಚೂರಿಪಳ್ಳ ಸಮೀಪದ ನೆಲ್ಲಿಕಟ್ಟೆಯಲ್ಲಿ "ಪ್ರಕೃತಿ ಆಯುರ್ವೇದ ಚಿಕಿತ್ಸಾಲಯ"ವನ್ನು ಸ್ಥಾಪಿಸಿ, ಹಲವು ವರ್ಷಗಳಿಂದ ಜನರಿಗೆ ಸಮರ್ಪಕ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ.

1.jpeg

ತಮ್ಮ ಮಾವ, ಖ್ಯಾತ ಆಶುಕವಿ ದಿವಂಗತ ನಾರಾಯಣ ಭಟ್ಟರ ಪ್ರೇರಣೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟ ಡಾ. ವಾಣಿಶ್ರೀ ಅವರು, "ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಸ್ಥೆ (ರಿ), ಕಾಸರಗೋಡು" ಅನ್ನು ಸ್ಥಾಪಿಸಿ, ಗಡಿನಾಡಿನಲ್ಲಿ ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಉಳಿವು-ಬೆಳವಣಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅವರ ನೇತೃತ್ವದಲ್ಲಿ ಈಗಾಗಲೇ 224ಕ್ಕೂ ಹೆಚ್ಚು ಯಶಸ್ವಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ವೇದಿಕೆಯನ್ನು ಕಲ್ಪಿಸಲಾಗಿದೆ.

ಸ್ವತಃ ಉತ್ತಮ ಕಲಾವಿದೆಯೂ ಆಗಿರುವ ಅವರು, ಅನೇಕ ವೇದಿಕೆಗಳಲ್ಲಿ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು, ವಿವಿಧ ಸಂಘ-ಸಂಸ್ಥೆಗಳಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಸಾಹಿತ್ಯ, ಕಲೆ ಹಾಗೂ ಸಮಾಜಸೇವೆಯಲ್ಲಿನ ಅವರ ಅಮೋಘ ಸಾಧನೆಯನ್ನು ಗುರುತಿಸಿ, ಕಲಾ ಸಂಸ್ಕೃತಿ ಸಾರಥಿ ಪ್ರಶಸ್ತಿ, ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಭಾರತ ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ, ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಜರತ್ನ ಪ್ರಶಸ್ತಿ, ಗಡಿನಾಡ ಸಾಧಕಿ ಗೌರವ ಸನ್ಮಾನ, ಕರುನಾಡ ವಿಭೂಷಣ ಗೌರವ ಪ್ರಶಸ್ತಿ, ಕೆಂಪಮ್ಮ ಪುರಸ್ಕಾರ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿವೆ.

ಅಲ್ಲದೆ, "ಪ್ರಕೃತಿ" ಎಂಬ ಸಾಹಿತ್ಯ ಕೃತಿಯನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ.

ವಿಶ್ವ ತುಳುವೆರ್ (ರಿ) ಕೇರಳ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ವಾಣಿಶ್ರೀ ಕಾಸರಗೋಡು ಅವರ ಅವಧಿಯಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆ ಇನ್ನಷ್ಟು ಬೆಳೆಯಲಿ, ತುಳುವಿನ ಕಂಪು ಮತ್ತಷ್ಟು ಹರಡಲಿ ಎಂಬುದು ಎಲ್ಲರ ಹಾರೈಕೆಯಾಗಿದೆ.