ಕ್ಯಾನ್ಸರ್ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚಿದರೆ ಗುಣಪಡಿಸಲು ಸಾಧ್ಯ: ಡಾ. ಮಮತಾ ಸುವರ್ಣ
ಮಂಗಳೂರು: ಕ್ಯಾನ್ಸರ್ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯವಿದೆ ...

ಮಂಗಳೂರು: ಕ್ಯಾನ್ಸರ್ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ಆರಂಭಿಕ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯವಿದೆ ಎಂದು ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯ ಕ್ಯಾನ್ಸರ್ ವಿಭಾಗದ ತಜ್ಞೆ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯೆ ಡಾ. ಮಮತಾ ಸುವರ್ಣ ಹೇಳಿದರು.
ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಲಾದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಕ್ಯಾನ್ಸರ್ ರೋಗದ ಕುರಿತು ವಿಸ್ತೃತ ಮಾಹಿತಿ ನೀಡಿದರು.

ಕ್ಯಾನ್ಸರ್‌ನ ಆರಂಭಿಕ ಹಂತದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳದಿರುವುದರಿಂದ ದೇಹದಲ್ಲಿ ಯಾವುದೇ ಅಸಹಜ ಬದಲಾವಣೆ ಕಂಡುಬಂದರೆ ಅಥವಾ ದೇಹದ ತೂಕದಲ್ಲಿ ಗಮನಾರ್ಹ ವ್ಯತ್ಯಾಸವಾದರೆ ಅದನ್ನು ನಿರ್ಲಕ್ಷಿಸದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಅವರು ಸಲಹೆ ನೀಡಿದರು.
ಮಹಿಳೆಯರು ಮತ್ತು ಪುರುಷರಲ್ಲಿ ಕಂಡುಬರುವ ವಿವಿಧ ರೀತಿಯ ಕ್ಯಾನ್ಸರ್, ಅದರ ಲಕ್ಷಣಗಳು, ಆರಂಭಿಕ ಪತ್ತೆ ವಿಧಾನಗಳು, ಚಿಕಿತ್ಸಾ ಕ್ರಮಗಳು, ಕ್ಯಾನ್ಸರ್ ತಡೆಗಟ್ಟುವ ಮಾರ್ಗಗಳು ಹಾಗೂ ರೋಗದ ಪರಿಣಾಮಗಳ ಕುರಿತು ಮಮತಾ ಸುವರ್ಣ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸದಸ್ಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ಅವರು ಸ್ಪಷ್ಟವಾಗಿ ಉತ್ತರಿಸಿದರು.
ಕ್ಯಾನ್ಸರ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆಯೇ ಎಂಬ ಸದಸ್ಯ ಜಯ್ ಕುಮಾರ್ ಕೊಲ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾನ್ಯವಾಗಿ ವ್ಯಕ್ತಿಯನ್ನು ಮುಟ್ಟುವುದರಿಂದ ಅಥವಾ ಸಂಪರ್ಕದಿಂದ ಕ್ಯಾನ್ಸರ್ ಹರಡುವುದಿಲ್ಲ ಎಂದು ತಿಳಿಸಿದರು. ಕೆಲವು ಕ್ಯಾನ್ಸರ್‌ಗಳಲ್ಲಿ ವಂಶವಾಹಿ (ಜೆನೆಟಿಕ್) ಅಂಶಗಳು ಪ್ರಮುಖ ಪಾತ್ರ ವಹಿಸಬಹುದಾಗಿದ್ದು, ಕುಟುಂಬದ ವೈದ್ಯಕೀಯ ಹಿನ್ನೆಲೆಯನ್ನು ಗಮನದಲ್ಲಿಟ್ಟುಕೊಂಡು ಅಗತ್ಯ ತಪಾಸಣೆ ನಡೆಸುವುದು ಸೂಕ್ತ ಎಂದರು.
ಬ್ರೆಸ್ಟ್ ಕ್ಯಾನ್ಸರ್, ಓವರಿಯನ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್, ಪ್ರೋಸ್ಟೇಟ್ ಕ್ಯಾನ್ಸರ್, ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ಹಾಗೂ ಮೆಲನೋಮ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಬಗ್ಗೆ ವಿವರಿಸಿದ ಅವರು, ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮತ್ತು ನಿಯಮಿತ ಆರೋಗ್ಯ ತಪಾಸಣೆಯ ಮಹತ್ವವನ್ನು ಒತ್ತಿ ಹೇಳಿದರು.
ಕ್ಯಾನ್ಸರ್ ಕುರಿತು ಸಮಗ್ರ ಮಾಹಿತಿ ನೀಡಿ ಜಾಗೃತಿ ಮೂಡಿಸಿದ ಸಂಪನ್ಮೂಲ ವ್ಯಕ್ತಿ ಮಮತಾ ಸುವರ್ಣ ಅವರನ್ನು ಯುವವಾಹಿನಿ (ರಿ.) ಮಂಗಳೂರು ಘಟಕದ ಪರವಾಗಿ ಮಾಜಿ ಅಧ್ಯಕ್ಷ ಹರೀಶ್ ವಿ. ಪಚ್ಚನಾಡಿ ಗೌರವಿಸಿದರು.
ಕಾರ್ಯಕ್ರಮವು ಸಂಜೆ 7 ಗಂಟೆಗೆ ಗುರು ಪ್ರಾರ್ಥನೆಯೊಂದಿಗೆ, ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರ ಅಧ್ಯಕ್ಷತೆಯಲ್ಲಿ ಆರಂಭವಾಯಿತು. ಅಧ್ಯಕ್ಷರು ಸರ್ವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕಾರ್ಯದರ್ಶಿ ಉಷಾ ಕೆ. ಅವರು ಹಿಂದಿನ ಸಭೆಯ ವರದಿಯನ್ನು ವಾಚಿಸಿ ಅನುಮೋದನೆ ಪಡೆದರು. ಸದಸ್ಯೆ ನೀತಾ ಅಳಪೆ ಅವರು ಗುರು ಸಂದೇಶ ವಾಚಿಸಿದರು.
ಮಹಿಳಾ ಸಂಘಟನಾ ನಿರ್ದೇಶಕಿ ಜಯಂತಿ ಕೋಟ್ಯಾನ್ ಅವರು ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಲೋಕಕಲ್ಯಾಣ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
