ಯುವವಾಹಿನಿ (ರಿ) ಮಂಗಳೂರು ಘಟಕ | ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನುವುದಕ್ಕೆ ಅಭ್ಯರ್ಥಿಗಳಲ್ಲಿ ತುಂಬಿ ತುಳುಕುವ ಆತ್ಮವಿಶ್ವಾಸವೇ ಸಾಕ್ಷಿ: ಹರೀಶ್ ಕೆ.ಸುವರ್ಣ
ಮಂಗಳೂರು, ಸೆ. 7: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಷನ್, ಮಂಗಳೂರು ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಸಹಯೋಗದಲ್ಲಿ ಕಳೆದ ಹತ್ತು ದಿನಗಳಿಂದ...

ಮಂಗಳೂರು, ಸೆ. 7: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಷನ್, ಮಂಗಳೂರು ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಸಹಯೋಗದಲ್ಲಿ ಕಳೆದ ಹತ್ತು ದಿನಗಳಿಂದ ನಡೆದ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೋಮವಾರ (ಸೆ. 7) ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರು, ತರಬೇತಿ ಕಾರ್ಯಾಗಾರದ ಆರಂಭಿಕ ದಿನಗಳಿಗೆ ಹೋಲಿಸಿದರೆ ಇದೀಗ ಪ್ರತಿಯೊಬ್ಬ ಅಭ್ಯರ್ಥಿಯಲ್ಲೂ ಆತ್ಮವಿಶ್ವಾಸ ತುಂಬಿ ತುಳುಕುತ್ತಿರುವುದು ಕಂಡುಬರುತ್ತಿದೆ. ತರಬೇತಿಯಲ್ಲಿ ಭಾಗವಹಿಸಿದವರಲ್ಲಿ ಯಶಸ್ವಿ ಉದ್ಯಮಿಗಳಾಗುವ ಕನಸು ಮತ್ತು ಉತ್ಸಾಹ ಎದ್ದು ಕಾಣುತ್ತಿದೆ. ಇದೇ ಈ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.

ಉದ್ಯಮಶೀಲತೆಯ ಪರಿಕಲ್ಪನೆ, ಹಣಕಾಸು ನಿರ್ವಹಣೆ, ಮಾರುಕಟ್ಟೆ ತಂತ್ರಗಳು, ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸಾಲ ಸೌಲಭ್ಯಗಳ ಕುರಿತು ಪರಿಣಾಮಕಾರಿಯಾಗಿ ತರಬೇತಿ ನೀಡಿದ ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಯೆಲಿಗಾರ್, ತರಬೇತುದಾರರಾದ ಪ್ರವೀಷಾ ಕುಕ್ಯಾನ್, ವಿದ್ಯಾ ಹಾಗೂ ಜೀವನ್ ಕೊಲ್ಯ ಅವರಿಗೆ ಯುವವಾಹಿನಿ ಮಂಗಳೂರು ಘಟಕದ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದರು.

ಭಾರತೀಯ ವಿಕಾಸ ಟ್ರಸ್ಟ್‌ನ ವ್ಯವಸ್ಥಾಪಕ ಜೀವನ್ ಕೊಲ್ಯ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ಎಲ್ಲರೂ ಉತ್ತಮ ಉತ್ಸಾಹದಿಂದ ಪಾಲ್ಗೊಂಡಿದ್ದು, ಈ ತರಬೇತಿ ಯಶಸ್ವಿ ಉದ್ಯಮಿಗಳಾಗಲು ಉತ್ತಮ ಅವಕಾಶ ಕಲ್ಪಿಸಿದೆ. ತರಬೇತಿಯ ಪ್ರಯೋಜನವನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಉದ್ಯಮಿಗಳಾಗಿ ಬೆಳೆಯುವಂತೆ ಅವರು ಶುಭ ಹಾರೈಸಿದರು.
ಸಿಡಾಕ್‌ನ ಉಪನಿರ್ದೇಶಕ ಶಿವಾನಂದ ಯೆಲಿಗಾರ್ ಮಾತನಾಡಿ, ಕರ್ನಾಟಕದಾದ್ಯಂತ ಸಿಡಾಕ್ ಸಂಸ್ಥೆಯ ವತಿಯಿಂದ ಇಂತಹ ಹಲವಾರು ಉದ್ಯಮಶೀಲತಾ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ಸ್ವಂತ ಉದ್ಯಮವನ್ನು ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂಬುದೇ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಮುಂದೆಯೂ ಯಾವುದೇ ರೀತಿಯ ಸಹಕಾರ ಅಥವಾ ಮಾರ್ಗದರ್ಶನ ಅಗತ್ಯವಿದ್ದಲ್ಲಿ ಸಿಡಾಕ್ ಅನ್ನು ಸಂಪರ್ಕಿಸಬಹುದು ಎಂದರು.
ಇಂತಹ ಜನಪರ ಹಾಗೂ ಉಪಯುಕ್ತ ತರಬೇತಿ ಕಾರ್ಯಾಗಾರಕ್ಕೆ ಸ್ಥಳಾವಕಾಶ ಕಲ್ಪಿಸಿದ ಯುವವಾಹಿನಿ (ರಿ) ಮಂಗಳೂರು ಘಟಕದ ಅಧ್ಯಕ್ಷರು ಹಾಗೂ ಸರ್ವಸದಸ್ಯರಿಗೆ ಅವರು ಧನ್ಯವಾದ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ ಕಾರ್ಯದರ್ಶಿ ಕುಮಾರಿ ಉಷಾ ಕೆ. ಉಪಸ್ಥಿತರಿದ್ದರು. ಪ್ರವೀಷಾ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ವಂದಿಸಿದರು.
ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
