Skip to content
Billava News

ಎಳೆವಯಸ್ಸಿನಲ್ಲೇ ಅಸಾಮಾನ್ಯ ಸಾಧನೆ: ರಕ್ಷಿತ್ ಕುಮಾರ್ ಜೆ. ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ

ಮಂಗಳೂರು: “ಅಕ್ಷರವೇ ಆಯುಧ, ವಿದ್ಯೆಯೇ ಶಕ್ತಿ, ಅಧ್ಯಯನವೇ ತಪಸ್ಸು, ಪರಿಶ್ರಮವೇ ದೇವರು” ಎಂಬ ನಂಬಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಎಳೆಯ ವಯಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿರುವ ರಕ್ಷಿತ್ ಕುಮಾರ್ ಜೆ. ಅವರು ಸಮಾಜಕ್ಕೆ ಹೆಮ್ಮೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

By Billavavani
ಎಳೆವಯಸ್ಸಿನಲ್ಲೇ ಅಸಾಮಾನ್ಯ ಸಾಧನೆ: ರಕ್ಷಿತ್ ಕುಮಾರ್ ಜೆ. ನಮ್ಮ ಸಮಾಜದ ಹೆಮ್ಮೆಯ ಪ್ರತಿಭೆ

ಮಂಗಳೂರು: “ಅಕ್ಷರವೇ ಆಯುಧ, ವಿದ್ಯೆಯೇ ಶಕ್ತಿ, ಅಧ್ಯಯನವೇ ತಪಸ್ಸು, ಪರಿಶ್ರಮವೇ ದೇವರು” ಎಂಬ ನಂಬಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಎಳೆಯ ವಯಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿರುವ ರಕ್ಷಿತ್ ಕುಮಾರ್ ಜೆ. ಅವರು ಸಮಾಜಕ್ಕೆ ಹೆಮ್ಮೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ.

1001145519.jpg

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸೋಮೇಶ್ವರ ಗ್ರಾಮದ ಕೊಲ್ಯ ಪರ್ಯತ್ತೂರು ನಿವಾಸಿಗಳಾದ ಜೈ ಕುಮಾರ್ ಪರ್ಯತ್ತೂರು ಮತ್ತು ವತ್ಸಲ ದಂಪತಿಯ ಪುತ್ರನಾಗಿರುವ ರಕ್ಷಿತ್ ಕುಮಾರ್ ಬಾಲ್ಯದಿಂದಲೇ ಶೈಕ್ಷಣಿಕ ಆಸಕ್ತಿ, ನಾಯಕತ್ವ ಗುಣ ಹಾಗೂ ನವೀನ ಚಿಂತನೆಯ ಮೂಲಕ ವಿಶಿಷ್ಟ ಪ್ರತಿಭೆಯನ್ನು ಮೆರೆದಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಹಂತ ಹಂತವಾಗಿ ಮುನ್ನಡೆದ ಅವರು Goa Institute of Managementನಿಂದ 2026ರಲ್ಲಿ MBA ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲೇ ರಾಷ್ಟ್ರಮಟ್ಟದ ಹಲವು ಪ್ರತಿಷ್ಠಿತ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನಾರ್ಹ ಯಶಸ್ಸು ಸಾಧಿಸಿರುವುದು ಅವರ ಪ್ರತಿಭೆಗೆ ಸಾಕ್ಷಿಯಾಗಿದೆ.

Reliance TUP Season XI ರಾಷ್ಟ್ರಮಟ್ಟದ ಸ್ಪರ್ಧೆಯ ಅಂಗವಾಗಿ ನಡೆದ ಪ್ರತಿಷ್ಠಿತ “Ultimate Pitch” ಸ್ಪರ್ಧೆಯಲ್ಲಿ ದೇಶದಾದ್ಯಂತ ಸುಮಾರು 21,000 ತಂಡಗಳು ನೋಂದಾಯಿಸಿಕೊಂಡಿದ್ದವು. ಅಂತಿಮ ಹಂತಕ್ಕೆ ಆಯ್ಕೆಯಾದ 10 ತಂಡಗಳ ಪೈಕಿ ರಕ್ಷಿತ್ ಕುಮಾರ್ ಅವರ ತಂಡವು ಮುಂಬೈನಲ್ಲಿ ನಡೆದ ಅಂತಿಮ ಸುತ್ತಿನಲ್ಲಿ ಪ್ರಥಮ ಸ್ಥಾನ ಪಡೆದು “Ultimate Winner” ಗೌರವಕ್ಕೆ ಪಾತ್ರವಾಯಿತು. ಇದರೊಂದಿಗೆ ₹6 ಲಕ್ಷ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಂಸಾ ಪತ್ರವನ್ನು ಅವರು ಪಡೆದಿದ್ದಾರೆ.

ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ನವೀನ ಆಲೋಚನೆ ಹಾಗೂ ನಾಯಕತ್ವ ಸಾಮರ್ಥ್ಯವನ್ನು ಉತ್ತೇಜಿಸುವ ಈ ಸ್ಪರ್ಧೆಯಲ್ಲಿ ರಕ್ಷಿತ್ ಅವರು ತಮ್ಮ ವಿಶಿಷ್ಟ ಆಲೋಚನೆಯನ್ನು ಪರಿಣಾಮಕಾರಿಯಾಗಿ ಮಂಡಿಸಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು.

ಇದೇ ರೀತಿ Central Depository Services Limited (CDSL) ವತಿಯಿಂದ ಮುಂಬೈನಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಮಟ್ಟದ “Re-imagine Ideathon” ಸ್ಪರ್ಧೆಯಲ್ಲಿಯೂ ರಕ್ಷಿತ್ ಕುಮಾರ್ ಅವರು ಪ್ರಥಮ ಸ್ಥಾನ ಗಳಿಸಿದ್ದಾರೆ. ಸುಮಾರು 1,000 ತಂಡಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಶೇರು ಮಾರುಕಟ್ಟೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಹಾಗೂ ನವೀನ ಆಲೋಚನೆಗಳನ್ನು ಉತ್ತೇಜಿಸುವ ಪರಿಕಲ್ಪನೆಯನ್ನು ಆಧರಿಸಿ ಅವರು ಮಂಡಿಸಿದ ಆಲೋಚನೆ ಅತ್ಯುತ್ತಮವಾಗಿ ಪರಿಗಣಿಸಲ್ಪಟ್ಟಿತು. ಈ ಸಾಧನೆಗಾಗಿ ₹5 ಲಕ್ಷ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಂಸಾ ಪತ್ರವನ್ನು ಪಡೆದಿದ್ದಾರೆ.

ಇದಲ್ಲದೆ, Goa Management Association ವತಿಯಿಂದ ನೀಡಲಾಗುವ 2025ನೇ ಸಾಲಿನ “Best Management Student” ಪ್ರಶಸ್ತಿಗೂ ರಕ್ಷಿತ್ ಕುಮಾರ್ ಭಾಜನರಾಗಿದ್ದಾರೆ. ಶೈಕ್ಷಣಿಕ ಸಾಧನೆ, ನಾಯಕತ್ವ ಗುಣಗಳು ಹಾಗೂ ಸಮಗ್ರ ವ್ಯಕ್ತಿತ್ವವನ್ನು ಪರಿಗಣಿಸಿ ನೀಡಲಾಗುವ ಈ ಪ್ರಶಸ್ತಿ ಗೋವಾ ರಾಜ್ಯದ ಪ್ರತಿಷ್ಠಿತ ವಿದ್ಯಾರ್ಥಿ ಗೌರವಗಳಲ್ಲಿ ಒಂದಾಗಿದೆ.

ಮಾರ್ಚ್ 2026ರಲ್ಲಿ ನಡೆದ Goa Institute of Managementನ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಗಳಿಸಿರುವ ರಕ್ಷಿತ್ ಕುಮಾರ್, ತಮ್ಮ ಶೈಕ್ಷಣಿಕ ಸಾಮರ್ಥ್ಯಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ್ದಾರೆ.

ಮಂಗಳೂರಿನ ಶಾರದಾ ವಿದ್ಯಾಲಯ ಹಾಗೂ NITK ಸುರತ್ಕಲ್ನ ಹಳೆಯ ವಿದ್ಯಾರ್ಥಿಯಾಗಿರುವ ರಕ್ಷಿತ್ ಕುಮಾರ್ ಅವರು ಪ್ರಸ್ತುತ ಬೆಂಗಳೂರಿನ Lowe’s ಸಂಸ್ಥೆಯಲ್ಲಿ Product Manager ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಳೆವಯಸ್ಸಿನಲ್ಲೇ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ನಿರಂತರ ಸಾಧನೆಗೈದು, ಶಿಕ್ಷಣ, ನವೀನತೆ, ಉದ್ಯಮಶೀಲತೆ ಹಾಗೂ ನಾಯಕತ್ವದ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ರಕ್ಷಿತ್ ಕುಮಾರ್ ಅವರು ಯುವಜನತೆಗೆ ಸ್ಫೂರ್ತಿಯಾಗಿದ್ದಾರೆ.

“ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ಬಾಲ್ಯದಲ್ಲೇ ಪ್ರತಿಭೆಯ ಪರಿಚಯ ಮಾಡಿಕೊಟ್ಟಿರುವ ರಕ್ಷಿತ್ ಕುಮಾರ್ ಅವರ ಸಾಧನೆಯ ಪಯಣ ಇನ್ನಷ್ಟು ಎತ್ತರಕ್ಕೆ ಸಾಗಲಿ, ಅವರ ಪ್ರತಿಭೆ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳಲಿ ಹಾಗೂ ಮುಂದಿನ ದಿನಗಳಲ್ಲಿ ದೇಶಕ್ಕೆ ಹೆಮ್ಮೆಯ ಕೊಡುಗೆ ನೀಡುವಂತಾಗಲಿ ಎಂಬುದು ಕುಟುಂಬ, ಸ್ನೇಹಿತರು ಹಾಗೂ ಸಮಾಜದ ಹಾರೈಕೆಯಾಗಿದೆ.