Skip to content
Billava News

ಯಶಸ್ವಿ ಉದ್ಯಮಿಯಾಗಲು ಆರ್ಥಿಕತೆ, ನೈಪುಣ್ಯತೆ ಹಾಗೂ ಸಮಯಪ್ರಜ್ಞೆ ಅಗತ್ಯ: ಹರೀಶ್ ಕೆ. ಸುವರ್ಣ

ಮಂಗಳೂರು, ಆ.25: ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಯಶಸ್ವಿ ಉದ್ಯಮಿಯಾಗಲು ಆರ್ಥಿಕ ಸಾಮರ್ಥ್ಯದ ಜೊತೆಗೆ ನೈಪುಣ್ಯತೆ, ಸಮಯಪ್ರಜ್ಞೆ ಹಾಗೂ ಉತ್ತಮ ಗುಣಮಟ್ಟದ ಉದ್ಯಮದತ್ತ ಬದ್ಧತೆ ಅಗತ್ಯ ಎಂದು ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಹೇಳಿದರು.

By Billavavani
ಯಶಸ್ವಿ ಉದ್ಯಮಿಯಾಗಲು ಆರ್ಥಿಕತೆ, ನೈಪುಣ್ಯತೆ ಹಾಗೂ ಸಮಯಪ್ರಜ್ಞೆ ಅಗತ್ಯ: ಹರೀಶ್ ಕೆ. ಸುವರ್ಣ

ಮಂಗಳೂರು, ಆ.25: ಇಂದಿನ ಸ್ಪರ್ಧಾತ್ಮಕ ಸಮಾಜದಲ್ಲಿ ಯಶಸ್ವಿ ಉದ್ಯಮಿಯಾಗಲು ಆರ್ಥಿಕ ಸಾಮರ್ಥ್ಯದ ಜೊತೆಗೆ ನೈಪುಣ್ಯತೆ, ಸಮಯಪ್ರಜ್ಞೆ ಹಾಗೂ ಉತ್ತಮ ಗುಣಮಟ್ಟದ ಉದ್ಯಮದತ್ತ ಬದ್ಧತೆ ಅಗತ್ಯ ಎಂದು ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಹೇಳಿದರು.

ಯುವವಾಹಿನಿ ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಅಮೆಜಾನ್, ಇನ್ಫೋಸಿಸ್‌ನಂತಹ ಬೃಹತ್ ಕಂಪನಿಗಳು ಸಣ್ಣ ಬಂಡವಾಳದಿಂದ ಆರಂಭಗೊಂಡು ಇಂದು ಜಾಗತಿಕ ಮಟ್ಟದಲ್ಲಿ ಬೆಳೆದು, ಸಾವಿರಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸಿವೆ. ಸಮಯದ ಮಹತ್ವವನ್ನು ಅರಿತು, ಗುಣಮಟ್ಟದ ಉದ್ಯಮದಲ್ಲಿ ತೊಡಗಿಸಿಕೊಂಡರೆ ಭವಿಷ್ಯದಲ್ಲಿ ಹೆಸರಾಂತ ಉದ್ಯಮಿಗಳಾಗಬಹುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಂದ್ರಿಕಾ ಎಸ್. ನಾಯಕ್, ಸಮಾಜದಲ್ಲಿ ವ್ಯವಸ್ಥಿತವಾಗಿ ಬದುಕಲು ಉದ್ಯೋಗದ ಅಗತ್ಯವಿದ್ದು, ಸ್ವ-ಉದ್ಯೋಗಕ್ಕೆ ಉತ್ತಮ ಅವಕಾಶಗಳು ದೊರೆಯುತ್ತಿರುವ ಸಂದರ್ಭದಲ್ಲಿ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

WhatsApp Image 2026-08-25 at 3.03.11 PM.jpeg

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಡಾಕ್, ಮಂಗಳೂರಿನ ಉಪನಿರ್ದೇಶಕ ಶಿವಾನಂದ ಯೆಲಿಗಾರ್ ಮಾತನಾಡಿ, ಸ್ವಾವಲಂಬನೆ ಹಾಗೂ ಸ್ವಂತ ಉದ್ಯೋಗದ ಪರಿಕಲ್ಪನೆಯನ್ನು ಉತ್ತೇಜಿಸುವ ಉದ್ದೇಶದಿಂದ ವರ್ಷಪೂರ್ತಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ವಾವಲಂಬಿ ಉದ್ಯಮಿಗಳಾಗುವಂತೆ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ವ್ಯವಸ್ಥಾಪಕ ಜೀವನ್ ಕೊಲ್ಯ ಅವರು ಉದ್ಯಮಶೀಲತೆಯ ವಿವಿಧ ಆಯಾಮಗಳ ಕುರಿತು ಮಾಹಿತಿ ನೀಡಿದರು. ಯಶಸ್ವಿ ಉದ್ಯಮಿಯಾಗುವ ವಿಧಾನ, ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆಯುವ ಕ್ರಮ ಹಾಗೂ ಮಾರುಕಟ್ಟೆಯಲ್ಲಿ ಹಣಕಾಸು ನಿರ್ವಹಣೆಯ ಬಗ್ಗೆ ಅವರು ವಿವರಿಸಿದರು.

WhatsApp Image 2026-08-25 at 3.03.11 PM (1).jpeg

ವೇದಿಕೆಯಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಕಾರ್ಯದರ್ಶಿ ಉಷಾ ಹಾಗೂ ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕಿ ಸವಿತಾ ಕೋಟ್ಯಾನ್ ಉಪಸ್ಥಿತರಿದ್ದರು.

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು; ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (CEDOK), ಮಂಗಳೂರು ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಹಯೋಗದಲ್ಲಿ ಆ.24ರಂದು ಉರ್ವ ಸ್ಟೋರ್‌ನ ರಘು ಬಿಲ್ಡಿಂಗ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಆರಂಭಗೊಂಡಿತು. ಸಿಡಾಕ್ ಸಂಸ್ಥೆಯ ಪ್ರವೀಶಾ ಕುಕ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ವಂದಿಸಿದರು.