ಓಲ್ಡ್ ಮಾಂಕ್, RC ಸೇರಿ 7 ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಕೆಲವು ಉತ್ಪನ್ನಗಳಿಗೆ FSSAI ನಿಷೇಧ; ಕಾರಣವೇನು?
Source: News Website

ನವದೆಹಲಿ: ಕೃತಕ ಸುವಾಸನೆ (Artificial Flavours) ಬಳಸಿರುವುದು ಹಾಗೂ ಉತ್ಪನ್ನಗಳ ಲೇಬಲ್‌ಗಳಲ್ಲಿ ತಪ್ಪುದಾರಿಗೆಳೆಯುವ ಮಾಹಿತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ, ಓಲ್ಡ್ ಮಾಂಕ್, ಮ್ಯಾಕ್ ಡೊವೆಲ್ಸ್, ಆಂಟಿಕ್ವಿಟಿ ಬ್ಲೂ, ರಾಯಲ್ ಚಾಲೆಂಜ್ (RC), ಓಲ್ಡ್ ಕ್ಯಾಸ್ಕ್, ಸೆಂಟ್ರಲ್ ಪ್ರಾವಿನ್ಸ್ ಮತ್ತು ಬ್ಯಾಗ್ ಪೈಪರ್ ಡಿಲಕ್ಸ್ ಸೇರಿದಂತೆ ಏಳು ಜನಪ್ರಿಯ ಮದ್ಯ ಬ್ರ್ಯಾಂಡ್‌ಗಳ ಕೆಲವು ಉತ್ಪನ್ನಗಳ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡ ಪ್ರಾಧಿಕಾರ (FSSAI) ನಿಷೇಧ ಹೇರಿದೆ.
ಆದರೆ ಈ ನಿಷೇಧವು ಸಂಪೂರ್ಣ ಬ್ರ್ಯಾಂಡ್‌ಗಳಿಗೆ ಅನ್ವಯಿಸುವುದಿಲ್ಲ ಎಂದು FSSAI ಸ್ಪಷ್ಟಪಡಿಸಿದೆ. ನಿರ್ದಿಷ್ಟ ಉತ್ಪಾದನಾ ಘಟಕಗಳಲ್ಲಿ ತಯಾರಾದ ಮದ್ಯ ಉತ್ಪನ್ನಗಳಿಗೆ ಮಾತ್ರ ಈ ಆದೇಶ ಅನ್ವಯವಾಗಲಿದೆ.
FSSAI ಆದೇಶದ ಪ್ರಕಾರ, ಮಹಾರಾಷ್ಟ್ರದ ಖೋಪೋಲಿ ಪ್ರದೇಶದಲ್ಲಿರುವ ರಾಕಿ ಸ್ಪ್ರಿಂಗ್‌ವಾಟರ್ ಘಟಕದಲ್ಲಿ ತಯಾರಾದ Old Monk The Legend, Old Monk Gold Reserve ಮತ್ತು Old Monk XXX Matured Rum ಉತ್ಪನ್ನಗಳು ನಿಷೇಧದ ವ್ಯಾಪ್ತಿಗೆ ಬಂದಿವೆ.
ಮಹಾರಾಷ್ಟ್ರದ ಬಾರಾಮತಿಯ ಯುನೈಟೆಡ್ ಸ್ಪಿರಿಟ್ಸ್/ಡಿಯಾಜಿಯೋ ಘಟಕದಲ್ಲಿ ತಯಾರಾದ McDowell’s No.1 Rum ಮೇಲೂ ಕ್ರಮ ಕೈಗೊಳ್ಳಲಾಗಿದೆ.
ಮಧ್ಯಪ್ರದೇಶದ ಯುನೈಟೆಡ್ ಸ್ಪಿರಿಟ್ಸ್ ಘಟಕದಲ್ಲಿ ತಯಾರಾದ Antiquity Blue Whisky ಹಾಗೂ Royal Challenge Whiskyಉತ್ಪನ್ನಗಳು ಕೂಡ ನಿಷೇಧಿತ ಪಟ್ಟಿಯಲ್ಲಿವೆ.
ಇದೇ ರೀತಿ ಮಧ್ಯಪ್ರದೇಶದ ಇನ್‌ಬ್ರೂ ಬೆವರೇಜಸ್ ಘಟಕದಲ್ಲಿ ತಯಾರಾದ Bagpiper Deluxe Whisky ಮತ್ತು Old Cask ಉತ್ಪನ್ನಗಳ ಮೇಲೂ ನಿಷೇಧ ಹೇರಲಾಗಿದೆ.
ಮಧ್ಯಪ್ರದೇಶದ ಅಸೋಸಿಯೇಟೆಡ್ ಆಲ್ಕೋಹಾಲ್ ಅಂಡ್ ಬ್ರೂವರೀಸ್ ಘಟಕದಲ್ಲಿ ತಯಾರಾದ Central Province Whisky ಹಾಗೂ McDowell’s No.1 Celebration Matured XXX Rum ಕೂಡ FSSAI ಕ್ರಮಕ್ಕೆ ಒಳಪಟ್ಟಿವೆ.
ನಿರ್ದಿಷ್ಟ ಉತ್ಪಾದನಾ ಘಟಕಗಳಲ್ಲಿ ತಯಾರಾದ ಮದ್ಯಗಳಿಗೆ ಮಾತ್ರ ಈ ಆದೇಶ ಅನ್ವಯವಾಗುವುದರಿಂದ, ಅದೇ ಬ್ರ್ಯಾಂಡ್‌ನ ಇತರ ಘಟಕಗಳಲ್ಲಿ ತಯಾರಾದ ಉತ್ಪನ್ನಗಳ ಮಾರಾಟ ಮತ್ತು ವಿತರಣೆ ಮೇಲೆ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
