Skip to content
Billava News

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಆಯುರ್ವೇದ ಕೇಂದ್ರ ನಿರ್ಮಾಣಕ್ಕೆ ಬಿಲ್ಲವ ಉದ್ಯಮಿಗಳ ಸಹಕಾರ ಅಗತ್ಯ: ಖ್ಯಾತ ಉದ್ಯಮಿ ದಯಾನಂದ ಬೊಂಟ್ರ ಕರೆ

ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಧಾರ್ಮಿಕ ಚಟುವಟಿಕೆಗಳೊಂದಿಗೆ ಬಿಲ್ಲವ ಸಮುದಾಯದ ಪಾರಂಪರಿಕ ಆಯುರ್ವೇದ ವೈದ್ಯ ಪರಂಪರೆಯನ್ನು …

By Billavavani
ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಆಯುರ್ವೇದ ಕೇಂದ್ರ ನಿರ್ಮಾಣಕ್ಕೆ ಬಿಲ್ಲವ ಉದ್ಯಮಿಗಳ ಸಹಕಾರ ಅಗತ್ಯ: ಖ್ಯಾತ ಉದ್ಯಮಿ ದಯಾನಂದ ಬೊಂಟ್ರ ಕರೆ

ಮಂಗಳೂರು: ದೇಯಿ ಬೈದ್ಯೆತಿ ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಧಾರ್ಮಿಕ ಚಟುವಟಿಕೆಗಳೊಂದಿಗೆ ಬಿಲ್ಲವ ಸಮುದಾಯದ ಪಾರಂಪರಿಕ ಆಯುರ್ವೇದ ವೈದ್ಯ ಪರಂಪರೆಯನ್ನು ಸಂರಕ್ಷಿಸಿ ಬೆಳೆಸುವ ಮಹತ್ವಾಕಾಂಕ್ಷೆಯ ಯೋಜನೆಗಳು ಹಂತ ಹಂತವಾಗಿ ಅನುಷ್ಠಾನಗೊಳ್ಳುತ್ತಿವೆ ಎಂದು ಶ್ರೀ ಕ್ಷೇತ್ರದ ಮಹಾಪೋಷಕರು, ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷರು ಹಾಗೂ ಖ್ಯಾತ ಉದ್ಯಮಿ ದಯಾನಂದ ಬೊಂಟ್ರ ತಿಳಿಸಿದ್ದಾರೆ.

ನಗರದ ಹೋಟೆಲ್ ದೀಪ ಕಂಫರ್ಟ್‌ನಲ್ಲಿ ನಡೆದ ಬಿಲ್ಲವ ಸಮಾಜದ ಉದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಆಯುರ್ವೇದ ಕ್ಲಿನಿಕ್, ಆಯುರ್ವೇದ ಫಾರ್ಮಸಿ, ಆಯುರ್ವೇದ ಉತ್ಪನ್ನಗಳ ತಯಾರಿಕಾ ಘಟಕ, ಯೋಗ ಕೇಂದ್ರ, ಪಂಚಕರ್ಮ ಕೇಂದ್ರ ಹಾಗೂ ಔಷಧೀಯ ಸಸ್ಯಗಳ ವನ ನಿರ್ಮಾಣದ ಯೋಜನೆ ರೂಪಿಸಲಾಗಿದೆ. ಎರಡನೇ ಹಂತದಲ್ಲಿ ಆಯುರ್ವೇದ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಔಷಧೀಯ ಸಸ್ಯಗಳ ಸಂಶೋಧನಾ ಕೇಂದ್ರ ಹಾಗೂ ಆಯುರ್ವೇದ ಸಂಶೋಧನಾ ಕೇಂದ್ರ ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಸುಮಾರು ₹7 ಕೋಟಿ ವೆಚ್ಚದಲ್ಲಿ ಆಯುರ್ವೇದ ಕೇಂದ್ರ ಹಾಗೂ ಯಾತ್ರಿ ನಿವಾಸದ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಬಿಲ್ಲವ ಸಮಾಜದ ಉದ್ಯಮಿಗಳು ಮತ್ತು ದಾನಿಗಳು ಉದಾರವಾಗಿ ಸಹಕಾರ ನೀಡುತ್ತಿದ್ದಾರೆ. ಆದರೆ ಯೋಜನೆಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲು ಇನ್ನಷ್ಟು ನೆರವು ಅಗತ್ಯವಿದೆ. ಸಮಾಜದ ಪಾರಂಪರಿಕ ಔಷಧೀಯ ಸಸ್ಯ ಹಾಗೂ ವೈದ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ಅವರು ಕರೆ ನೀಡಿದರು.

ಮಹಾರಾಷ್ಟ್ರದ ನಾಸಿಕ್‌ನ ಉದ್ಯಮಿ ಗಂಗಾಧರ ಅಮೀನ್ ಮಾತನಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದ್ದು, ಇಂತಹ ಮಹತ್ವದ ಯೋಜನೆಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಹೇಳಿದರು.

ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀ ಕ್ಷೇತ್ರವು ಕೇವಲ ಧಾರ್ಮಿಕ ಕೇಂದ್ರವಾಗಿರದೆ ಆರೋಗ್ಯ, ಶಿಕ್ಷಣ ಹಾಗೂ ಸಮಾಜಮುಖಿ ಸೇವೆಗಳ ಕೇಂದ್ರವಾಗಿ ರೂಪುಗೊಳ್ಳುತ್ತಿದೆ. ಆಯುರ್ವೇದ ಕೇಂದ್ರದ ಸ್ಥಾಪನೆಯ ಮೂಲಕ ಬಿಲ್ಲವ ಸಮಾಜದ ವೈದ್ಯ ಪರಂಪರೆಗೆ ಹೊಸ ಆಯಾಮ ದೊರೆಯಲಿದ್ದು, ಇದು ಸಮಾಜ ಸೇವೆಯ ಮಹತ್ವದ ಹೆಜ್ಜೆಯಾಗಲಿದೆ ಎಂದು ಹೇಳಿದರು.

ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಸಂಜೀವ ಬಿರ್ವ ಮಾತನಾಡಿ, ದೇಶ-ವಿದೇಶಗಳ ದಾನಿಗಳ ಸಹಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಸಾಗುತ್ತಿವೆ. ಆದರೆ ಈವರೆಗೆ ಸರ್ಕಾರದಿಂದ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಮುಂದಿನ ಜನೋಪಯೋಗಿ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಕಾರವೂ ಅಗತ್ಯವಿದ್ದು, ಈ ಕುರಿತು ಸರ್ಕಾರದ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮಾತನಾಡಿ, ಶ್ರೀ ಕ್ಷೇತ್ರದ ಇಂದಿನ ಅಭಿವೃದ್ಧಿಯ ಹಿಂದೆ ಬಿಲ್ಲವ ಸಮಾಜದ ಸಕಾರಾತ್ಮಕ ಸ್ಪಂದನೆ ಹಾಗೂ ಕ್ಷೇತ್ರಾಡಳಿತ ಸಮಿತಿಯ ಪ್ರಾಮಾಣಿಕ ಸೇವೆಯೇ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಟ್ರಸ್ಟಿ ಹಾಗೂ ಮಾರ್ಗದರ್ಶಿ ಚಿತ್ತರಂಜನ್ ಕಂಕನಾಡಿ, ಗೌರವಾಧ್ಯಕ್ಷ ರಾಜಶೇಖರ್ ಕೋಟ್ಯಾನ್, ಮಹಾಪೋಷಕರಾದ ಊರ್ಮಿಳಾ ರಮೇಶ್ ಕುಮಾರ್ ಮತ್ತು ಪ್ರತಿಭಾ ಕುಳಾಯಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು, ಆರ್ಕಿಟೆಕ್ಟ್ ಪ್ರಮಲ್ ಕುಮಾರ್ ಕಾರ್ಕಳ ಸೇರಿದಂತೆ ಅನೇಕ ಉದ್ಯಮಿಗಳು, ದಾನಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಭಾಗವಹಿಸಿದ ಉದ್ಯಮಿಗಳು ಶ್ರೀ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು. ಸಮಾಜದ ಐಕ್ಯತೆ ಮತ್ತು ಸೇವಾ ಮನೋಭಾವದಿಂದ ಶ್ರೀ ಕ್ಷೇತ್ರವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.