Skip to content
Billava News

ಗೆಜ್ಜೆಗಿರಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾಸಭೆ; ಅಭಿವೃದ್ಧಿ ಕಾರ್ಯಗಳಿಗೆ ದೇಶ-ವಿದೇಶಗಳ ಬಿಲ್ಲವ ಸಂಘಟನೆಗಳಿಂದ ಉತ್ತಮ ಸಹಕಾರ

ಗೆಜ್ಜೆಗಿರಿ: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ನವೆಂಬರ್ 3ರಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯಿತು.

By Billavavani
ಗೆಜ್ಜೆಗಿರಿಯಲ್ಲಿ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾಸಭೆ; ಅಭಿವೃದ್ಧಿ ಕಾರ್ಯಗಳಿಗೆ ದೇಶ-ವಿದೇಶಗಳ ಬಿಲ್ಲವ ಸಂಘಟನೆಗಳಿಂದ ಉತ್ತಮ ಸಹಕಾರ

ಗೆಜ್ಜೆಗಿರಿ: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕ್ಷೇತ್ರಾಡಳಿತ ಸಮಿತಿಯ ವಾರ್ಷಿಕ ಮಹಾಸಭೆಯು ನವೆಂಬರ್ 3ರಂದು ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿಪೂಜಾರಿ ಚಿಲಿಂಬಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರವಿಪೂಜಾರಿ ಚಿಲಿಂಬಿ ಅವರು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸತ್ಯಧರ್ಮದ ಕಾರ್ಣಿಕ ಶಕ್ತಿಗಳ ಅನುಗ್ರಹದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ದೇಶ-ವಿದೇಶಗಳ ಬಿಲ್ಲವ ಸಂಘಟನೆಗಳಿಂದ ಉತ್ತಮ ಸಹಕಾರ ದೊರೆಯುತ್ತಿದೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ನಿತ್ಯ ಅನ್ನದಾನದ ವ್ಯವಸ್ಥೆಗಾಗಿ ಅನ್ನಛತ್ರ ನಿರ್ಮಾಣ, ಬಿಲ್ಲವ ಸಮಾಜದ ವೈದ್ಯಕೀಯ ಪರಂಪರೆಯನ್ನು ಬಿಂಬಿಸುವ ಆಯುರ್ವೇದ ಕೇಂದ್ರ ಹಾಗೂ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಯಾತ್ರಿ ನಿವಾಸದ ಕಾಮಗಾರಿಗಳು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಪ್ರಗತಿಯಲ್ಲಿವೆ. ಈ ಎಲ್ಲಾ ಕಾರ್ಯಗಳು ಕ್ಷೇತ್ರದ ಮಹಿಮೆ ಹಾಗೂ ಸಮಾಜದ ಒಗ್ಗಟ್ಟಿನ ಪ್ರಯತ್ನದ ಫಲವಾಗಿದೆ ಎಂದು ಅವರು ಹೇಳಿದರು.

ಮಹಾಸಭೆಯಲ್ಲಿ ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಮೋಹನ್ ದಾಸ್ ಬಂಗೇರ ಲೆಕ್ಕಪತ್ರಗಳನ್ನು ಮಂಡಿಸಿದರು. ಗೆಜ್ಜೆಗಿರಿ ಅಭಿವೃದ್ಧಿ ಟ್ರಸ್ಟ್‌ನ ಅಧ್ಯಕ್ಷ ಸಂಜೀವ ಪೂಜಾರಿ ಬಿರ್ವ ಅವರು ಆಯುರ್ವೇದ ಕೇಂದ್ರ ಮತ್ತು ಯಾತ್ರಿ ನಿವಾಸದ ಕಾಮಗಾರಿಗಳ ಪ್ರಗತಿ ವರದಿ ಹಾಗೂ ಲೆಕ್ಕಪತ್ರಗಳನ್ನು ವಿವರಿಸಿದರು. ಗೆಜ್ಜೆಗಿರಿ ಮೇಳದ ಪ್ರಗತಿಯ ಕುರಿತು ಸಂಚಾಲಕ ನಿತ್ಯಾನಂದ ನಾವರ ಮಾಹಿತಿ ನೀಡಿದರು. ನವರಾತ್ರಿ ಉತ್ಸವದ ಸಂಚಾಲಕ ಹರೀಶ್ ಕೆ. ಪೂಜಾರಿ ಅವರು ಉತ್ಸವಕ್ಕೆ ಭಕ್ತಾದಿಗಳಿಂದ ದೊರೆತ ಸಹಕಾರವನ್ನು ಸ್ಮರಿಸಿದರು.

ಕ್ಷೇತ್ರದಲ್ಲಿ ಬೈದರ್ಕಳ ನುಡಿಯ ಪ್ರಕಾರ ಮುಂದಿನ ದಿನಗಳಲ್ಲಿ ಅನುಸರಿಸಬೇಕಾದ ಧಾರ್ಮಿಕ ವ್ಯವಸ್ಥೆಗಳ ಕುರಿತು ಕ್ಷೇತ್ರದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಕ್ಷೇತ್ರಾಡಳಿತ ಸಮಿತಿಯ ಮಾರ್ಗದರ್ಶಕ ಚಿತ್ತರಂಜನ್ ಕಂಕನಾಡಿ ಅವರು ಸವಿಸ್ತಾರವಾಗಿ ವಿವರಿಸಿದರು. ಕ್ಷೇತ್ರಾಡಳಿತ ಸಮಿತಿಯ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ, ಡಾ. ರಾಜಶೇಖರ್ ಕೋಟ್ಯಾನ್ ಹಾಗೂ ಜಯಂತ ನಡುಬೈಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಮಾನ್ ಬಿಲ್ಲವಾಸ್‌ನಿಂದ ಭೂದಾನ

ಮಹಾಸಭೆಯ ವಿಶೇಷ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಸತ್ಯಧರ್ಮ ಚಾವಡಿಯ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ಅನ್ನಛತ್ರದ ಪುಣ್ಯ ಕಾರ್ಯಕ್ಕೆ ಒಮಾನ್ ಬಿಲ್ಲವಾಸ್ ಕೂಟವು ಸ್ಥಳದಾನ (ಭೂದಾನ) ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿತು. ಈ ಸಂದರ್ಭದಲ್ಲಿ ಕೂಟದ ಅಧ್ಯಕ್ಷ ಉಮೇಶ್ ಬಂಟ್ವಾಳ್ ಅವರನ್ನು ಸನ್ಮಾನಿಸಲಾಯಿತು.

1001225601.jpg

ವಿವಿಧ ಕ್ಷೇತ್ರಗಳ ಸಾಧಕರಿಗೆ ಅಭಿನಂದನೆ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಮಾಜಸೇವಕ ಹಾಗೂ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಟ್ರಸ್ಟಿ, ದುಬೈ ಬಿಲ್ಲವಾಸ್‌ನ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಬೆಳಪು, ಸಮಾಜಸೇವಾ ಕ್ಷೇತ್ರದಲ್ಲಿ ರವಿ ಕಕ್ಕೆಪದವು, ಧಾರ್ಮಿಕ ಕ್ಷೇತ್ರದಲ್ಲಿ ವೇದನಾಥ ಸುವರ್ಣ, ಶಿಕ್ಷಣ ಕ್ಷೇತ್ರದಲ್ಲಿ ವೇದಾವತಿ, ಸಹಕಾರಿ ಕ್ಷೇತ್ರದಲ್ಲಿ ಉಷಾ ಅಂಚನ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಪುಷ್ಪಾವತಿ ಕೇಕುಡೆ ಅವರನ್ನು ಅವರ ಸಾಧನೆಗಳಿಗಾಗಿ ಅಭಿನಂದಿಸಲಾಯಿತು.

ಕ್ಷೇತ್ರಾಡಳಿತ ಸಮಿತಿಯ ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಅಭಿವೃದ್ಧಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಗುರುಪುರ, ಕ್ಷೇತ್ರಾಡಳಿತ ಸಮಿತಿಯ ಟ್ರಸ್ಟಿಗಳಾದ ಸತೀಶ್ ಪೂಜಾರಿ ಬೆಳಪು, ಸುಜೀತಾ ವಿ. ಬಂಗೇರ, ಶೈಲೇಂದ್ರ ವೈ. ಸುವರ್ಣ, ಜಯಾನಂದ್ ಎಂ. ಮಂಗಳೂರು, ಪ್ರಮಲ್ ಕುಮಾರ್ ಕಾರ್ಕಳ, ಕಾನೂನು ಸಲಹೆಗಾರ ನವನೀತ್ ಹಿಂಗಾಣಿ, ಕ್ಷೇತ್ರದ ವಕ್ತಾರ ರಾಜೇಂದ್ರ ಚಿಲಿಂಬಿ ಸೇರಿದಂತೆ ಹರೀಶ್ ಅಮೀನ್ ಉಡುಪಿ, ನವೀನ್ ಸುವರ್ಣ ಸಜಿಪ, ಕಮಲಾಕ್ಷ ಬೋಳಾರ, ಚಂದ್ರಶೇಖರ್ ಉಚ್ಚಿಲ್, ಜಯ ವಿಕ್ರಮ್ ಕಲ್ಲಾಪು, ಹರಿಶ್ಚಂದ್ರ ಅಮೀನ್, ನಾಗೇಶ್ ಬೈಕಂಪಾಡಿ, ನಾರಾಯಣ ಮಚ್ಚಿನ, ಕುಮಾರ್ ಇರುವೈಲು, ಡಾ. ಸಂತೋಷ್ ಬೈರಂಪಳ್ಳಿ, ವಿಜಯ ಪೂಜಾರಿ ಸುರತ್ಕಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.