Skip to content
Billava News

‘ಟೀಂ ವಿಹಾರಿ’ ಸಾರಥ್ಯದಲ್ಲಿ ವೈಭವದ ಶ್ರೀಕೃಷ್ಣ ಕಲೋತ್ಸವ ; ಕುದ್ರೋಳಿ ಧಾಮ ಕೃಷ್ಣಮಯ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಿವ್ಯ ಸಾನಿಧ್ಯದಲ್ಲಿ ಯುವಕರ ನೇತೃತ್ವದ ‘ಟೀಂ ವಿಹಾರಿ’ ಬಳಗದ ವತಿಯಿಂದ ಆಯೋಜಿಸಲಾಗಿದ್ದ ‘ಶ್ರೀಕೃಷ್ಣ ಕಲೋತ್ಸವ–2026’ ಶ್ರೀಕೃಷ್ಣ ವೇಷ ಸ್ಪರ್ಧೆಯು ಭಕ್ತಿ, ಸಂಸ್ಕೃತಿ ಹಾಗೂ ಸಂಭ್ರಮದ ಅಪೂರ್ವ ಸಂಗಮವಾಗಿ ಗಮನ ಸೆಳೆಯಿತು.

By Billavavani
‘ಟೀಂ ವಿಹಾರಿ’ ಸಾರಥ್ಯದಲ್ಲಿ ವೈಭವದ ಶ್ರೀಕೃಷ್ಣ ಕಲೋತ್ಸವ ; ಕುದ್ರೋಳಿ ಧಾಮ ಕೃಷ್ಣಮಯ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಿವ್ಯ ಸಾನಿಧ್ಯದಲ್ಲಿ ಯುವಕರ ನೇತೃತ್ವದ ‘ಟೀಂ ವಿಹಾರಿ’ ಬಳಗದ ವತಿಯಿಂದ ಆಯೋಜಿಸಲಾಗಿದ್ದ ‘ಶ್ರೀಕೃಷ್ಣ ಕಲೋತ್ಸವ–2026’ ಶ್ರೀಕೃಷ್ಣ ವೇಷ ಸ್ಪರ್ಧೆಯು ಭಕ್ತಿ, ಸಂಸ್ಕೃತಿ ಹಾಗೂ ಸಂಭ್ರಮದ ಅಪೂರ್ವ ಸಂಗಮವಾಗಿ ಗಮನ ಸೆಳೆಯಿತು.

ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಕುದ್ರೋಳಿ ಕ್ಷೇತ್ರವು ಪುಟಾಣಿ ಕೃಷ್ಣರ ಆಗಮನದಿಂದ ಕಂಗೊಳಿಸಿತು. ನವಿಲುಗರಿ, ಪಿಂಛ, ಕೈಯಲ್ಲಿ ಮುರಳಿ ಹಾಗೂ ಪೀತಾಂಬರ ಧರಿಸಿದ ಕಂದಮ್ಮಗಳು ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ಮುದ್ದಾಗಿ ಕಂಗೊಳಿಸಿದರು. ಪುಟಾಣಿ ಹೆಜ್ಜೆಗಳ ಗೆಜ್ಜೆನಾದ, ಮಕ್ಕಳ ತುಂಟ ನಗು ಹಾಗೂ ಮುಗ್ಧ ಅಳು-ನಗುವಿನ ಕಲರವ ಕ್ಷೇತ್ರದ ವಾತಾವರಣವನ್ನು ವೃಂದಾವನದಂತೆ ಕೃಷ್ಣಮಯಗೊಳಿಸಿತು.

WhatsApp Image 2026-08-19 at 12.40.37 PM (1).jpeg

ಮನೆಯಂಗಳದ ಮುದ್ದು ಕಂದನನ್ನು ಶ್ರೀಕೃಷ್ಣನ ರೂಪದಲ್ಲಿ ವೇದಿಕೆಯ ಮೇಲೆ ಕಂಡ ಪೋಷಕರ ಮುಖದಲ್ಲಿ ವಾತ್ಸಲ್ಯ ಹಾಗೂ ಸಂತಸದ ಭಾವ ತುಂಬಿ ತುಳುಕಿತು. ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವುದರ ಜೊತೆಗೆ, ಭಾರತೀಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪೌರಾಣಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶವನ್ನು ಕಲೋತ್ಸವ ಸಾಕಾರಗೊಳಿಸಿತು.

ಯುವಕರ ಸಂಘಟನಾ ಚಾತುರ್ಯ ಹಾಗೂ ಸೇವಾ ಮನೋಭಾವಕ್ಕೆ ಸಾಕ್ಷಿಯಾದ ‘ಟೀಂ ವಿಹಾರಿ’ ಬಳಗದ ಕಾರ್ಯವು ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣವಾಯಿತು. ‘ಸಾಧನೆಗೆ ವಯಸ್ಸಿನ ಹಂಗಿಲ್ಲ; ಸಂಘಟನಾ ಚಾತುರ್ಯಕ್ಕೆ ಛಲವೊಂದೇ ಸಾಕು’ ಎಂಬುದನ್ನು ತಂಡದ ಯುವಕರು ತಮ್ಮ ಕಾರ್ಯದ ಮೂಲಕ ಮತ್ತೊಮ್ಮೆ ಸಾಬೀತುಪಡಿಸಿದರು.

ಬೆಳಗ್ಗಿನಿಂದ ಸಂಜೆಯವರೆಗೆ ಕ್ಷೇತ್ರದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಲೋತ್ಸವದ ಸಂಭ್ರಮವನ್ನು ಕಣ್ತುಂಬಿಕೊಂಡರು. ಶ್ರೀಕೃಷ್ಣನ ಬಾಲಲೀಲೆಗಳನ್ನು ನೆನಪಿಸುವ ಮುದ್ದು ಕಂದಮ್ಮಗಳ ವೇಷಭೂಷಣ ಹಾಗೂ ಸಾಂಸ್ಕೃತಿಕ ವಾತಾವರಣವು ಎಲ್ಲರ ಮನದಲ್ಲೂ ಅವಿಸ್ಮರಣೀಯ ಅನುಭೂತಿ ಮೂಡಿಸಿತು.

ಭಕ್ತಿ ಮತ್ತು ಸಂಸ್ಕೃತಿಯ ಸೊಬಗನ್ನು ಯುವಶಕ್ತಿಯ ಸಂಘಟನಾ ಸಾಮರ್ಥ್ಯದೊಂದಿಗೆ ಬೆಸೆದ ‘ಶ್ರೀಕೃಷ್ಣ ಕಲೋತ್ಸವ–2026’ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿದ್ದು, ‘ಟೀಂ ವಿಹಾರಿ’ ಬಳಗದ ನಿಸ್ವಾರ್ಥ ಸೇವೆ ಹಾಗೂ ಕಲಾಭಿಮಾನಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ವರ್ಷಗಳಲ್ಲಿ ಈ ಕಲೋತ್ಸವ ಮತ್ತಷ್ಟು ವೈಭವದಿಂದ ನಡೆಯಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.