ಯುವವಾಹಿನಿ (ರಿ.) ಉಡುಪಿ: ಅದ್ದೂರಿಯಾಗಿ ಸಂಪನ್ನಗೊಂಡ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ – 2026ಸಂಪನ್ನ
ಬನ್ನಂಜೆ ಬಾಬು ಅಮೀನ್ ಅವರಿಗೆ ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿ; ತಜ್ಞಾ ರಾಜೀವ್ ಅವರಿಗೆ ಪ್ರಭಾಕರ್ ನೀರುಮಾರ್ಗ ಯುವ ಸಾಹಿತಿ ಪುರಸ್ಕಾರ

ಉಡುಪಿ: ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ, ಯುವವಾಹಿನಿ (ರಿ.) ಉಡುಪಿ ಘಟಕದ ಆತಿಥ್ಯದಲ್ಲಿ, ವಿಶುಕುಮಾರ್ ದತ್ತಿ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನವೆಂಬರ್ 1ರಂದು ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ – 2026 ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು.

ಬೆಳಿಗ್ಗೆ 9 ಗಂಟೆಗೆ ಉದ್ಯಮಿ ಅವಿನಾಶ್ ಪೂಜಾರಿ ಅವರು ಗುರುಗಳ ಸ್ಮರಣೆಯಲ್ಲಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಮೊದಲ ಹಂತವಾಗಿ ಆಯೋಜಿಸಲಾಗಿದ್ದ ಜ್ಞಾನ ಮಂಥನ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತನ್ನು ಘಟಕದ ಸದಸ್ಯ ಶ್ರೇಯಸ್ ಕೋಟ್ಯಾನ್ ಅಚ್ಚುಕಟ್ಟಾಗಿ ನಿರ್ವಹಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಬಿಪಿನ್ ಚಂದ್ರಪಾಲ್ ನಕ್ರೆ, ಕಾರ್ಕಳ ಅವರು ವಿಶುಕುಮಾರ್ ಅವರ ಭಾವಚಿತ್ರವನ್ನು ಮುತ್ತಿನ ಪರಿಕಲ್ಪನೆಯಲ್ಲಿ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ವಿಶುಕುಮಾರ್ ದತ್ತಿ ಸಮಿತಿಯ ಸಂಚಾಲಕ ಜಗದೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರ, ಸಂಚಯಗಿರಿ, ಬಂಟ್ವಾಳದ ಅಧ್ಯಕ್ಷ ತುಕಾರಾಂ ಪೂಜಾರಿ ಅಭಿನಂದನಾ ನುಡಿಗಳನ್ನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಪ್ರಶಸ್ತಿ ಪ್ರದಾನ ಮಾಡಿದರು.
ಬನ್ನಂಜೆ ಬಾಬು ಅಮೀನ್ ಅವರಿಗೆ ವಿಶುಕುಮಾರ್ ಪ್ರಶಸ್ತಿ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, 'ನಡೆದಾಡುವ ಗರೋಡಿ' ಎಂಬ ಬಿರುದಾಂಕಿತರು ಹಾಗೂ ಖ್ಯಾತ ಜಾನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್ ಅವರಿಗೆ 2026ನೇ ಸಾಲಿನ ಪ್ರತಿಷ್ಠಿತ ವಿಶುಕುಮಾರ್ ಪ್ರಶಸ್ತಿಯನ್ನು ₹10,000 ನಗದು ಪುರಸ್ಕಾರ ಹಾಗೂ ಫಲಕದೊಂದಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಅದೇ ರೀತಿ, 2026ನೇ ಸಾಲಿನ ಪ್ರಭಾಕರ್ ನೀರುಮಾರ್ಗ ಯುವ ಸಾಹಿತಿ ಪುರಸ್ಕಾರವನ್ನು ಕು. ತಜ್ಞಾ ರಾಜೀವ್ ಅವರಿಗೆ ₹5,000 ನಗದು ಪುರಸ್ಕಾರದೊಂದಿಗೆ ನೀಡಿ ಗೌರವಿಸಲಾಯಿತು.
ಸಾಹಿತ್ಯಿಕ ಸ್ಪರ್ಧೆಗಳಿಗೆ ಬಹುಮಾನ ವಿತರಣೆ
ವಿಶುಕುಮಾರ್ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ 'ವಿಶು ವಿಹಂಗಮ' ಹಾಗೂ 'ವಿಶು ಕಾವ್ಯಾಮೃತ' ಸ್ಪರ್ಧೆಗಳನ್ನು ಲತೀಶ್ ಎಂ. ಸಂಕೋಲಿಗೆ ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು. ಸ್ಪರ್ಧೆಗಳ ಫಲಿತಾಂಶ ಹಾಗೂ ವಿಜೇತರ ಪಟ್ಟಿಯನ್ನು ಪ್ರಕಟಿಸಿದ ಬಳಿಕ ಅತಿಥಿಗಳು ಬಹುಮಾನ ವಿತರಿಸಿದರು.

ಸ್ಪರ್ಧೆಗಳ ತೀರ್ಪುಗಾರರಾಗಿ ಆಗಮಿಸಿದ್ದ ಸಾಹಿತಿ ಮುದ್ದು ಮೂಡುಬೆಳ್ಳೆ, ಡಾ. ಮೀನಾಕ್ಷಿ ರಾಮಚಂದ್ರ, ರತ್ನಾ ಕೆ. ಭಟ್ ತಲಂಜೇರಿ, ಪುತ್ತೂರು ಹಾಗೂ ಅಮಿತಾಂಜಲಿ ಅವರನ್ನು ಗೌರವಿಸಲಾಯಿತು. ಸ್ಪರ್ಧೆಗಳ ಯಶಸ್ವಿ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಲತೀಶ್ ಎಂ. ಸಂಕೋಲಿಗೆ ಅವರನ್ನೂ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 'ವಿಶು ಸಂಗಮ' ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಪ್ರಶಸ್ತಿ ಪುರಸ್ಕೃತ ಬನ್ನಂಜೆ ಬಾಬು ಅಮೀನ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಆಯೋಜಕರು ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಶುಕುಮಾರ್ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ವಿಶುಕುಮಾರ್, ಬೆಂಗಳೂರು ಅವರು ಕೃತಜ್ಞತಾ ನುಡಿಗಳನ್ನಾಡಿದರು. ಗೋವಾ ಬಿಲ್ಲವ ಸಂಘದ ಅಧ್ಯಕ್ಷ ಚಂದ್ರಹಾಸ ಸುವರ್ಣ ಅವರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಪಡ್ಪು ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ವಿಶುಕುಮಾರ್ ದತ್ತಿ ಸಮಿತಿಯ ಕಾರ್ಯದರ್ಶಿ ರಮೇಶ್ ಪೂಜಾರಿ ಯಡ್ತಾಡಿ ಹಾಗೂ ಘಟಕದ ಕಾರ್ಯದರ್ಶಿ ವೀಕ್ಷಿತ್ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ದಯಾನಂದ ಕರ್ಕೇರ ಸ್ವಾಗತಿಸಿದರು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಧನ್ಯವಾದ ಸಮರ್ಪಿಸಿದರು. ಘಟಕದ ಮಾಜಿ ಅಧ್ಯಕ್ಷರಾದ ಅಮಿತಾಂಜಲಿ ಕಿರಣ್ ಹಾಗೂ ಸಚೇಂದ್ರ ಅಂಬಾಗಿಲು ಕಾರ್ಯಕ್ರಮ ನಿರೂಪಿಸಿದರು.
'ಸಿನಿ ದನಿ' ಕಿರುಚಿತ್ರ ಸ್ಪರ್ಧೆ ವಿಶೇಷ ಆಕರ್ಷಣೆ
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ 'ಸಿನಿ ದನಿ' ಕಿರುಚಿತ್ರ ಸ್ಪರ್ಧೆ ಅದ್ದೂರಿಯಾಗಿ ನಡೆಯಿತು. ಘಟಕದ ಸಂಘಟನಾ ಕಾರ್ಯದರ್ಶಿ ಮಹೇಶ್ ಮಲ್ಪೆ ಅವರ ಮುತುವರ್ಜಿಯಲ್ಲಿ ಹಾಗೂ ಘಟಕದ ಸದಸ್ಯರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಸ್ಪರ್ಧೆಯಲ್ಲಿ ಯುವವಾಹಿನಿಯ ಒಟ್ಟು 9 ಘಟಕಗಳು ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು.

ಸಾಹಿತ್ಯ, ಸಂಸ್ಕೃತಿ, ಸೃಜನಶೀಲತೆ ಹಾಗೂ ಕಲಾಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭವು ಯುವವಾಹಿನಿಯ ಸಂಘಟನಾ ಶಕ್ತಿ ಮತ್ತು ಸಾಹಿತ್ಯಿಕ ಬದ್ಧತೆಯನ್ನು ಮತ್ತೊಮ್ಮೆ ಅನಾವರಣಗೊಳಿಸಿತು.

