Skip to content
Billava News

'ಗುರುದರ್ಶನ' ಜಾಗತಿಕ ಮಟ್ಟದಲ್ಲಿ: ಹತ್ತು ಲಕ್ಷ ಮಂದಿಯಿಂದ ಸಾಮೂಹಿಕ 'ದೈವದಶಕಂ' ಪಠಣಕ್ಕೆ ಸಿದ್ಧತೆ

ಶ್ರೀ ನಾರಾಯಣ ಗುರುಗಳ ಸಾರ್ವತ್ರಿಕ ಸಹೋದರತ್ವ, ಆಧ್ಯಾತ್ಮಿಕ ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ, "ಗುರುದರ್ಶನ" ಹೆಸರಿನಲ್ಲಿ ಜಾಗತಿಕ ಮಟ್ಟದ ಸಾಮೂಹಿಕ 'ದೈವದಶಕಂ' ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

By Billavavani
'ಗುರುದರ್ಶನ' ಜಾಗತಿಕ ಮಟ್ಟದಲ್ಲಿ: ಹತ್ತು ಲಕ್ಷ ಮಂದಿಯಿಂದ ಸಾಮೂಹಿಕ 'ದೈವದಶಕಂ' ಪಠಣಕ್ಕೆ ಸಿದ್ಧತೆ

ಜರ್ಮನಿ: ಶ್ರೀ ನಾರಾಯಣ ಗುರುಗಳ ಸಾರ್ವತ್ರಿಕ ಸಹೋದರತ್ವ, ಆಧ್ಯಾತ್ಮಿಕ ಸಾಮರಸ್ಯ ಹಾಗೂ ಮಾನವೀಯ ಮೌಲ್ಯಗಳ ಸಂದೇಶವನ್ನು ವಿಶ್ವದಾದ್ಯಂತ ಪಸರಿಸುವ ಉದ್ದೇಶದಿಂದ, "ಗುರುದರ್ಶನ" ಹೆಸರಿನಲ್ಲಿ ಜಾಗತಿಕ ಮಟ್ಟದ ಸಾಮೂಹಿಕ 'ದೈವದಶಕಂ' ಪಠಣ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

ಭಾರತೀಯ ಕಾಲಮಾನದ ಪ್ರಕಾರ ಅಕ್ಟೋಬರ್ 25 ರಂದು ಸಂಜೆ 7:15ಕ್ಕೆ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ಭಕ್ತರು ಏಕಕಾಲದಲ್ಲಿ ಸೇರಿ 'ದೈವದಶಕಂ' ಪಠಿಸಲಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ನಾರಾಯಣ ಗುರು ಸಂಘಟನೆಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಭಕ್ತರ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮವನ್ನು ಸಂಯೋಜಿಸಲಾಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಸುಮಾರು ಹತ್ತು ಲಕ್ಷ ಮಂದಿಯನ್ನು ಒಗ್ಗೂಡಿಸಿ ದೈವದಶಕಂ ಪಠಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಆಯೋಜಕರು ಹೊಂದಿದ್ದಾರೆ. ಯುನೈಟೆಡ್ ಕಿಂಗ್‌ಡಮ್, ಅಮೆರಿಕ, ಸಿಂಗಾಪುರ, ಮಲೇಷ್ಯಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಸ್ಕಾಟ್‌ಲ್ಯಾಂಡ್, ಕುವೈತ್, ಬಹ್ರೇನ್, ನೇಪಾಳ ಸೇರಿದಂತೆ ಸುಮಾರು 20 ದೇಶಗಳ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಈ ಹಿಂದೆ ಜರ್ಮನಿಯಲ್ಲಿ ಸುಮಾರು 350 ಮಂದಿ ಭಕ್ತರು ಸೇರಿ ದೈವದಶಕಂ ಪಠಿಸಿದ್ದ ಕಾರ್ಯಕ್ರಮದ ಯಶಸ್ಸಿನ ಮುಂದುವರಿದ ಭಾಗವಾಗಿ ಈ ಜಾಗತಿಕ ಉಪಕ್ರಮ ರೂಪುಗೊಂಡಿದೆ. ಶ್ರೀ ನಾರಾಯಣ ಗುರುಗಳ ಸಂದೇಶವನ್ನು ವಿಶ್ವದ ಮೂಲೆಮೂಲೆಗಳಿಗೆ ತಲುಪಿಸುವುದು ಹಾಗೂ ಭಕ್ತರನ್ನು ಒಂದೇ ಆಧ್ಯಾತ್ಮಿಕ ವೇದಿಕೆಯಲ್ಲಿ ಒಗ್ಗೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಕಳೆದ 15 ವರ್ಷಗಳಿಂದ ಜರ್ಮನಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕೇರಳದ ಕೊಲ್ಲಂ ಮೂಲದ ಡಾ. ವರುಣ್ ರಾಧಾಕೃಷ್ಣನ್ ಅವರು ಈ ಉಪಕ್ರಮದ ಪ್ರಮುಖ ಸಂಯೋಜಕರಲ್ಲಿ ಒಬ್ಬರಾಗಿದ್ದು, ಕಾರ್ಯಕ್ರಮದ ರೂಪುರೇಷೆ ಹಾಗೂ ಜಾಗತಿಕ ಸಮನ್ವಯ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ವಿವಿಧ ದೇಶಗಳಲ್ಲಿ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ವಿಶ್ವದಾದ್ಯಂತ ಇರುವ ಶ್ರೀ ನಾರಾಯಣ ಗುರುಗಳ ಅನುಯಾಯಿಗಳು, ಭಕ್ತರು ಹಾಗೂ ಹಿತೈಷಿಗಳು ಈ ಐತಿಹಾಸಿಕ ಜಾಗತಿಕ ದೈವದಶಕಂ ಪಠಣ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.

"ಒಂದು ಜಗತ್ತು – ಒಂದು ಪ್ರಾರ್ಥನೆ" ಎಂಬ ಸಂದೇಶದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮವು ಜಾಗತಿಕ ಆಧ್ಯಾತ್ಮಿಕ ಐಕ್ಯತೆಗೆ ಹೊಸ ಆಯಾಮ ನೀಡುವ ನಿರೀಕ್ಷೆಯಿದೆ.