ಶಿಕ್ಷಣ ಸಂಸ್ಥೆ ಸ್ಥಾಪನೆಗೆ ರೂ. 1 ಕೋಟಿ ದೇಣಿಗೆ ಘೋಷಿಸಿದ ಹರೀಶ್ ಜಿ. ಅಮೀನ್
ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ ಒಟ್ಟು ಆದಾಯದ ಶೇ. 80ಕ್ಕೂ ಅಧಿಕ ಮೊತ್ತವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಜಿ. ಅಮೀನ್ ಹೇಳಿದರು.

ಡೊಂಬಿವಲಿ, ಆ. 17: ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವೇ ಮೂಲಾಧಾರ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ, ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ ಒಟ್ಟು ಆದಾಯದ ಶೇ. 80ಕ್ಕೂ ಅಧಿಕ ಮೊತ್ತವನ್ನು ಸಮಾಜದ ಶೈಕ್ಷಣಿಕ ಅಭಿವೃದ್ಧಿಗೆ ವಿನಿಯೋಗಿಸುತ್ತಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಜಿ. ಅಮೀನ್ ಹೇಳಿದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ 94 ವರ್ಷಗಳನ್ನು ಪೂರೈಸಿ ಬಲಿಷ್ಠ ಸಂಘಟನೆಯಾಗಿ ಬೆಳೆದಿದ್ದು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಸ್ವತಂತ್ರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಲಾಗಿದೆ. ಈ ಮಹತ್ಕಾರ್ಯಕ್ಕೆ ವೈಯಕ್ತಿಕವಾಗಿ ರೂ. 1 ಕೋಟಿ ದೇಣಿಗೆ ನೀಡುವುದಾಗಿ ಹರೀಶ್ ಜಿ. ಅಮೀನ್ ಘೋಷಿಸಿದರು.
ಆ. 16ರಂದು ಡೊಂಬಿವಲಿ ಪಶ್ಚಿಮ ರೈಲು ನಿಲ್ದಾಣದ ಸಮೀಪದ ರೇತಿ ಭವನದಲ್ಲಿರುವ ಸುದಾಮ ಭೋಯಿರ್ ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಡೊಂಬಿವಲಿ ಸ್ಥಳೀಯ ಕಚೇರಿ ವತಿಯಿಂದ ಆಯೋಜಿಸಿದ್ದ ‘ಆಟಿದೊಂಜಿ ದಿನ’ ಕಾರ್ಯಕ್ರಮದ ಸಭಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಬ್ರಹ್ಮಶ್ರೀ ನಾರಾಯಣ ಗುರುಗಳ ‘ಸತ್ಯ ಮತ್ತು ಧರ್ಮ’ದ ತತ್ವಗಳ ಅಡಿಯಲ್ಲಿ ಸಂಘಟನೆಯ ಆಡಳಿತವನ್ನು ಮುನ್ನಡೆಸಲಾಗುತ್ತಿದ್ದು, ಆರ್ಥಿಕ ವ್ಯವಹಾರಗಳಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. ಪ್ರಸ್ತುತ ಸಂಘದ ಶೈಕ್ಷಣಿಕ ನಿಧಿ ರೂ. 14–15 ಕೋಟಿಗೂ ಅಧಿಕವಾಗಿದೆ. ನೂತನ ಶಿಕ್ಷಣ ಸಂಸ್ಥೆಯ ಕನಸಿಗೆ ದಾನಿಗಳಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಯೋಜನೆ ಸಾಕಾರಗೊಳ್ಳಲು ಇನ್ನೂ ಸುಮಾರು ರೂ. 15 ಕೋಟಿ ಅಗತ್ಯವಿದ್ದು, ಸಮಾಜದ ಪ್ರತಿಯೊಬ್ಬರ ‘ಒಂದು ಇಟ್ಟಿಗೆ’ಯಷ್ಟು ಸಹಾಯವಾದರೂ ಅತ್ಯಂತ ಅವಶ್ಯಕ,” ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ರಾತ್ರಿ ಶಾಲೆಯ ಶಿಕ್ಷಕಿ ಮೋಹಿನಿ ಪೂಜಾರಿ ತಮ್ಮ ಜೀವಮಾನದ ಉಳಿತಾಯವಾದ ರೂ. 15 ಲಕ್ಷವನ್ನು ಶಿಕ್ಷಣ ನಿಧಿಗೆ ದೇಣಿಗೆಯಾಗಿ ನೀಡಿದ ನಿಸ್ವಾರ್ಥ ಸೇವೆಯನ್ನು ಹರೀಶ್ ಜಿ. ಅಮೀನ್ ಕೃತಜ್ಞತೆಯಿಂದ ಸ್ಮರಿಸಿದರು. ಡೊಂಬಿವಲಿ ಸಮಿತಿಯ ಸದಸ್ಯರ ಕ್ರಿಯಾಶೀಲತೆಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.

ಹಿರಿಯ ಮಹಿಳಾ ಸದಸ್ಯೆಯರಿಗೆ ಗೌರವ
ಸಂಘದಲ್ಲಿ ಹಲವು ವರ್ಷಗಳಿಂದ ಭಜನೆ, ಗುರುಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸಿದ ಗುಣವತಿ ಪೂಜಾರಿ, ಸುಲೋಚನಾ ಪೂಜಾರಿ, ವಿನೋದ ಪೂಜಾರಿ, ಯಶೋಧ ಕರ್ಕೇರ, ವಸಂತಿ ಅಮೀನ್, ವೇದಾವತಿ ಮಂಜಪ್ಪ ಪೂಜಾರಿ, ಹೇಮಲತಾ ಸುವರ್ಣ, ಸೌಮ್ಯ ಸುವರ್ಣ ಹಾಗೂ ಪ್ರೇಮಾ ಕೃಷ್ಣ ಪೂಜಾರಿ ಅವರನ್ನು ಗಣ್ಯರು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.
ಶಿಕ್ಷಣ ಸಂಸ್ಥೆಯ ನಿಧಿಗೆ ರೂ. 1 ಲಕ್ಷ ದೇಣಿಗೆ ಘೋಷಿಸಿದ ಮಾಜಿ ಉಪಕಾರ್ಯದಕ್ಷೆ ಮಹಿಳಾ ವಿಭಾಗ ಬಿಲ್ಲವರ ಅಸೋಸಿಯೇಷನ್, ಮುಂಬೈ , ಪ್ರಭಾ ಕೆ. ಬಂಗೇರ ಅವರನ್ನು ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಶ್ರೀಧರ್ ಬಿ. ಅಮೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಸಮಾಜ ಸೇವಕಿ ಶ್ಯಾಮಲಾ ಪೂಜಾರಿ, ದೀಪಾ ಎಸ್. ಕೋಟ್ಯಾನ್, ಚಾಂದನಿ ರಾಮಚಂದ್ರ ಬಂಗೇರ, ಕುಶಾ ರವಿ ಸನಿಲ್ ಹಾಗೂ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ದೇವಿಕಾ ಕೆ. ಸಾಲ್ಯಾನ್ ಉಪಸ್ಥಿತರಿದ್ದು ಶುಭ ಹಾರೈಸಿದರು.


















