ತುಳು ಭಾಷಿಕರೆಲ್ಲರಿಗೂ ಐತಿಹಾಸಿಕ ಹಾಗೂ ಹೆಮ್ಮೆಯ ಕ್ಷಣ, ಬ್ರಿಟನ್ ಬಿಲ್ಲವ ಬಳಗ ಯುಕೆ ಅಧ್ಯಕ್ಷ ಡಾ. ಮನೋಜ್ ಪೂಜಾರಿ ಹರ್ಷ
ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಭಾಷೆಗೆ ಮಾನ್ಯತೆ ದೊರೆತಿರುವುದು ತುಳು ಭಾಷಿಕರೆಲ್ಲರಿಗೂ ಐತಿಹಾಸಿಕ ಹಾಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಬ್ರಿಟನ್ ಬಿಲ್ಲವ ಬಳಗ ಯುಕೆ ಅಧ್ಯಕ್ಷ ಡಾ. ಮನೋಜ್ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

ಬ್ರಿಟನ್: ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ತುಳು ಭಾಷೆಗೆ ಮಾನ್ಯತೆ ದೊರೆತಿರುವುದು ತುಳು ಭಾಷಿಕರೆಲ್ಲರಿಗೂ ಐತಿಹಾಸಿಕ ಹಾಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಬ್ರಿಟನ್ ಬಿಲ್ಲವ ಬಳಗ ಯುಕೆ ಅಧ್ಯಕ್ಷ ಡಾ. ಮನೋಜ್ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅವರು, “ಒಬ್ಬ ಬಿಲ್ಲವನಾಗಿ ಹಾಗೂ ಬ್ರಿಟನ್ ಬಿಲ್ಲವ ಬಳಗ ಯುಕೆ ಅಧ್ಯಕ್ಷನಾಗಿ ಈ ಘೋಷಣೆ ಅಪಾರ ಸಂತೋಷ ಮತ್ತು ಹೆಮ್ಮೆಯನ್ನು ನೀಡಿದೆ. ತುಳು ನನ್ನ ತಾಯಿ ಭಾಷೆ; ಅದು ನನ್ನ ಬಾಲ್ಯ, ಗುರುತು, ಸಂಸ್ಕೃತಿ ಮತ್ತು ಪರಂಪರೆಯ ಭಾಷೆ” ಎಂದು ಹೇಳಿದ್ದಾರೆ.
ತುಳುವಿನ ಶ್ರೀಮಂತಿಕೆ ಹಾಗೂ ಪ್ರಾಚೀನತೆಗೆ ದೊರೆತಿರುವ ಈ ಬಹುಕಾಲದ ಮಾನ್ಯತೆ, ತಲೆಮಾರುಗಳಿಂದ ತುಳು ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಹಿರಿಯರಿಗೆ ಸಲ್ಲುವ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಬರುವ ಕಾಲದಲ್ಲಿ ನಮ್ಮ ಶ್ರೀಮಂತ ತುಳು ಪರಂಪರೆ ಮುಂದಿನ ಪೀಳಿಗೆಗೆ ದೊಡ್ಡ ಪ್ರೇರಣೆ ಹಾಗೂ ಹೆಮ್ಮೆಯ ಮೂಲವಾಗಬೇಕು. ನಮ್ಮ ವಿಶಿಷ್ಟ ತುಳು ಸಂಸ್ಕೃತಿ, ದೈವಾರಾಧನೆ, ಕಲೆ, ಆಚರಣೆಗಳು ಮತ್ತು ಸಂಪ್ರದಾಯಗಳು ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವ ಮೂಲಕ ತುಳುನಾಡನ್ನು ಪ್ರಮುಖ ಸಾಂಸ್ಕೃತಿಕ ಪ್ರವಾಸೋದ್ಯಮ ತಾಣವಾಗಿ ಬೆಳೆಸುವಂತಾಗಬೇಕು ಎಂಬ ನಂಬಿಕೆ ನನಗಿದೆ” ಎಂದು ಡಾ. ಮನೋಜ್ ಪೂಜಾರಿ ತಿಳಿಸಿದ್ದಾರೆ.
ವಿದೇಶಗಳಲ್ಲಿ ನೆಲೆಸಿರುವ ತುಳು ಭಾಷಿಕರು, ವಿಶೇಷವಾಗಿ ಯುವ ಪೀಳಿಗೆ, ಒಟ್ಟಾಗಿ ಸೇರಿ ತುಳು ಭಾಷೆಯನ್ನು ಮಾತನಾಡಲು, ಕಲಿಯಲು ಹಾಗೂ ಪ್ರೀತಿಸಲು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಅವರು ಕರೆ ನೀಡಿದ್ದಾರೆ.
ತುಳು ಭಾಷೆ ಮತ್ತು ತುಳು ಸಂಸ್ಕೃತಿ ಚಿರಾಯುವಾಗಲಿ ಎಂದು ಡಾ. ಮನೋಜ್ ಪೂಜಾರಿ ಶುಭ ಹಾರೈಸಿದ್ದಾರೆ.
