ಯುವವಾಹಿನಿ (ರಿ) ಕೊಲ್ಯ ಘಟಕ: “ದಿನನಿತ್ಯ ದೇವರ ಪೂಜೆ ಮಾಡಿದರೂ ಮನುಷ್ಯ ಮನುಷ್ಯನಾಗಿ ವರ್ತಿಸುತ್ತಿಲ್ಲ” — ಜಯಾನಂದ ಎಂ.
ನಾರಾಯಣ ಗುರುಗಳ ತತ್ತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಸಂಸ್ಕಾರ ಮತ್ತು ಸಂಸ್ಕೃತಿಯ ಆಚರಣೆಗೆ ಆದ್ಯತೆ ನೀಡುವುದು ಇಂದಿನ ಯುವಜನಾಂಗಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.

ಕೊಲ್ಯ: ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಹಾಗೂ ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯದ ಆಶ್ರಯದಲ್ಲಿ, ನಾರಾಯಣ ಗುರು ಮಹಿಳಾ ಮಂಡಳಿ ಕೊಲ್ಯ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮ ಜಯಂತಿ ಕಾರ್ಯಕ್ರಮವು ಕೊಲ್ಯದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಅರ್ಥಪೂರ್ಣವಾಗಿ ನಡೆಯಿತು.
ಶ್ರೀ ಮೂಕಾಂಬಿಕಾ ದೇವಸ್ಥಾನ ಕೊಲ್ಯದ ಅಧ್ಯಕ್ಷ ಚಂದ್ರಹಾಸ ಪಂಡಿತ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಗೇರು ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರದ ಅಧ್ಯಕ್ಷೆ ಮಮತಾ ಗಟ್ಟಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, “ನಮ್ಮ ಧರ್ಮವನ್ನು ಪ್ರೀತಿಸಿ, ಅನ್ಯ ಧರ್ಮಗಳನ್ನು ಗೌರವಿಸೋಣ” ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಲೆಕ್ಕ ಪರಿಶೋಧಕ ಸಿ.ಎ. ಶ್ರೀವತ್ಸ ಎನ್. ಬಲ್ಲಕುರಾಯ, ಆತ್ಮಶಕ್ತಿ ಪತ್ರಿಕೆಯ ಸಹಾಯಕ ಸಂಪಾದಕ ವಿಶ್ವನಾಥ ಪೂಜಾರಿ ಕೆಂಜಾರು ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮಾನವೀಯತೆ ಮರೆಯುತ್ತಿರುವುದು ವಿಷಾದನೀಯ: ಜಯಾನಂದ ಎಂ.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಪ್ರಧಾನ ಕಾರ್ಯದರ್ಶಿ ಜಯಾನಂದ ಎಂ. ಅವರು ‘ಗುರುಸಂದೇಶ’ ನೀಡಿದರು.
ನಾರಾಯಣ ಗುರುಗಳ ತತ್ತ್ವ ಮತ್ತು ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು, ಸಂಸ್ಕಾರ ಮತ್ತು ಸಂಸ್ಕೃತಿಯ ಆಚರಣೆಗೆ ಆದ್ಯತೆ ನೀಡುವುದು ಇಂದಿನ ಯುವಜನಾಂಗಕ್ಕೆ ಅತ್ಯಂತ ಅಗತ್ಯವಾಗಿದೆ ಎಂದು ಅವರು ಹೇಳಿದರು.
“ದಿನನಿತ್ಯ ದೇವರ ಪೂಜೆ ಮಾಡಿದರೂ ಮನುಷ್ಯ ಕೆಲವೊಂದು ಸಂದರ್ಭಗಳಲ್ಲಿ ಮಾನವೀಯತೆಯನ್ನು ಮರೆತು ಬದುಕುತ್ತಿರುವುದು ತೀರಾ ವಿಷಾದನೀಯ,” ಎಂದು ಜಯಾನಂದ ಎಂ. ಬೇಸರ ವ್ಯಕ್ತಪಡಿಸಿದರು.
ಗುರುಗಳ ಸಂದೇಶಗಳು ಕೇವಲ ಜಯಂತಿ ಆಚರಣೆಗೆ ಸೀಮಿತವಾಗದೆ, ದೈನಂದಿನ ಬದುಕಿನಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಅವರು ಕರೆ ನೀಡಿದರು.
90ಕ್ಕೂ ಅಧಿಕ ಅಂಕ ಗಳಿಸಿದ 17 ವಿದ್ಯಾರ್ಥಿಗಳಿಗೆ ಸನ್ಮಾನ
2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದ 17 ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಿ ಅಭಿನಂದಿಸಲಾಯಿತು.
ಶೈಕ್ಷಣಿಕ ಕ್ಷೇತ್ರದಲ್ಲಿ ಉನ್ನತ ಸಾಧನೆಗೈದ ರಕ್ಷಿತ್ ಕುಮಾರ್ ಜೆ. ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯದ ಅಧ್ಯಕ್ಷ ಗೋಪಾಲ ಕೊಂಡಾಣ, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷೆ ತ್ರಿವೇಣಿ ಉದಯ್ ಕುಂಪಲ ಹಾಗೂ ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷ ಜೀವನ್ ಕೊಲ್ಯ ಅವರು ಗುರು ಜಯಂತಿಯ ಹಿನ್ನೆಲೆಯಲ್ಲಿ ಶುಭ ಹಾರೈಸಿದರು.

ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ
ಗುರು ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಉಳ್ಳಾಲ ವಲಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹುಮಾನ ವಿತರಿಸಲಾಯಿತು.
ಸಾಂಸ್ಕೃತಿಕ ಸಂಚಾಲಕ ಜೀವನ್ ಕೊಲ್ಯ ಅವರು ಕಾರ್ಯಕ್ರಮವನ್ನು ನೆರವೇರಿಸಿದರು. ಚಿತ್ರಕಲಾ ಸ್ಪರ್ಧೆಯ ತೀರ್ಪುಗಾರರಾದ ರಘುರಾಮ್ ಸುವರ್ಣ ಮತ್ತು ಗಂಗಾಧರ ಕುಜುಮಗದ್ದೆ ಅವರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯದ ಅಧ್ಯಕ್ಷ ಶೇಷಪ್ಪ ಬೈದ್ಯಮನೆ ಪ್ರಸ್ತಾವನೆಗೈದು ಸ್ವಾಗತಿಸಿದರು. ನಾರಾಯಣ ಗುರು ಮಹಿಳಾ ಮಂಡಳಿಯ ಸದಸ್ಯರು ಪ್ರಾರ್ಥನೆ ನೆರವೇರಿಸಿದರು. ಬಿಲ್ಲವ ಸೇವಾ ಸಮಾಜ (ರಿ.) ಕೊಲ್ಯದ ಕಾರ್ಯದರ್ಶಿ ಸುಂದರ್ ಸುವರ್ಣ ಧನ್ಯವಾದ ಸಮರ್ಪಿಸಿದರು.

ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ಹಾಗೂ ಕೇಂದ್ರ ಸಮಿತಿ ಯುವ ಸಿಂಚನ ಸಂಪಾದಕ ಮಂಡಳಿ ಸದಸ್ಯರು ಮತ್ತು ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಲತೀಶ್ ಎಂ. ಸಂಕೋಳಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ನಾರಾಯಣ ಗುರು ಯಕ್ಷಗಾನ ಕಲಾ ಸಂಘ ಕೊಲ್ಯ ವತಿಯಿಂದ “ಬ್ರಾಣೆ ಶರ್ತ್” ಯಕ್ಷಗಾನ ತಾಳಮದ್ದಳೆ ನಡೆಯಿತು.


