ಜೇಸಿಐ ಕಾಪು ಘಟಕದಲ್ಲಿ ತುಳುನಾಡಿನ ಸಾಂಪ್ರದಾಯಿಕ ‘ಆಟಿದ ತಮ್ಮನ’ ಆಚರಣೆ, ಪೊಲೀಸ್ ಠಾಣೆಗೆ ಎರಡು ಬ್ಯಾರಿಕೇಡ್ ಹಸ್ತಾಂತರ
ಕಾಪು: ಜೇಸಿಐ ವಲಯ 15ರ ಘಟಕಗಳಲ್ಲಿ ಒಂದಾಗಿರುವ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ, ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ಸಹಯೋಗದಲ್ಲಿ ಕಾಪು ಪೊಲೀಸ್ ಠಾಣೆಗೆ ಎರಡು ಬ್ಯಾರಿಕೇಡ್‌ಗಳನ್ನು ಶಾಶ್ವತ ಯೋಜನೆಯಾಗಿ ಹಸ್ತಾಂತರಿಸಲಾಯಿತು.

ಕಾಪು: ಜೇಸಿಐ ವಲಯ 15ರ ಘಟಕಗಳಲ್ಲಿ ಒಂದಾಗಿರುವ ಜೇಸಿಐ ಕಾಪು ಘಟಕದ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಅಂಗವಾಗಿ, ಜೇಸಿಐ ಕಾಪು ಘಟಕ ಹಾಗೂ ಗ್ರೀನ್‌ವುಡ್ ರೆಸಾರ್ಟ್ ಸಹಯೋಗದಲ್ಲಿ ಕಾಪು ಪೊಲೀಸ್ ಠಾಣೆಗೆ ಎರಡು ಬ್ಯಾರಿಕೇಡ್‌ಗಳನ್ನು ಶಾಶ್ವತ ಯೋಜನೆಯಾಗಿ ಹಸ್ತಾಂತರಿಸಲಾಯಿತು.
ವಲಯಾಧ್ಯಕ್ಷ ಜೆಎಫ್‌ಎಸ್ ಸಂತೋಷ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾರಿಕೇಡ್‌ಗಳನ್ನು ಕಾಪು ಪೊಲೀಸ್ ಠಾಣೆಯ ತನಿಖಾಧಿಕಾರಿ ಶುಭಕರ್ ಹಾಗೂ ಸಹಾಯಕ ಪೊಲೀಸ್ ಉಪನಿರೀಕ್ಷಕ ರವೀಶ್ ಹೊಳ್ಳ ಅವರಿಗೆ ಹಸ್ತಾಂತರಿಸಲಾಯಿತು. ಪೊಲೀಸ್ ಇಲಾಖೆಗೆ ಅಗತ್ಯವಾದ ಮೂಲಸೌಕರ್ಯ ಒದಗಿಸುವ ಮೂಲಕ ಸಮಾಜಮುಖಿ ಸೇವೆಗೆ ಕೊಡುಗೆ ನೀಡಿರುವ ಜೇಸಿಐ ಕಾಪು ಘಟಕದ ಕಾರ್ಯವನ್ನು ಪೊಲೀಸ್ ಅಧಿಕಾರಿಗಳು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು.

ಬಳಿಕ ವಲಯಾಧ್ಯಕ್ಷರ ಅಧಿಕೃತ ಭೇಟಿಯ ಪ್ರಯುಕ್ತ ಸಭಾ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರು ಜೇಸಿಐ ಕಾಪು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಈ ಹಿಂದೆ ಕಾಪು ಘಟಕದ ಆತಿಥ್ಯದಲ್ಲಿ ನಡೆದ ಮಧ್ಯಂತರ ವಲಯ ಸಮ್ಮೇಳನದ ಯಶಸ್ಸನ್ನು ಸ್ಮರಿಸಿದ ಅವರು, ಮುಂದಿನ ದಿನಗಳಲ್ಲಿಯೂ ಘಟಕವು ಇನ್ನಷ್ಟು ಉತ್ತಮ ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಸಾಂಪ್ರದಾಯಿಕ ‘ಆಟಿದ ತಮ್ಮನ’ ಆಚರಣೆಯನ್ನು ವಿಶೇಷವಾಗಿ ನೆರವೇರಿಸಲಾಯಿತು. ಅತಿಥಿಗಳನ್ನು ತುಳುನಾಡಿನ ಸಾಂಪ್ರದಾಯಿಕ ಶಾಲು ಹೊದಿಸಿ, ವೀಳ್ಯದೆಲೆ-ಅಡಿಕೆ ನೀಡಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಕಲಸೆಯ ಕುರುವೆಯಲ್ಲಿ ಅಕ್ಕಿಯನ್ನು ತುಂಬಿಸಿ, ಹಿಂಗಾರವನ್ನು ಇರಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಂಪ್ರದಾಯಿಕ ರೀತಿಯಲ್ಲಿ ಚಾಲನೆ ನೀಡಲಾಯಿತು. ಬಳಿಕ ತುಳುವಪ್ಪೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ತುಳುನಾಡ ಗೀತೆಯ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು.

ಪೂರ್ವ ವಲಯ ಅಧ್ಯಕ್ಷ ರಾಕೇಶ್ ಕುಂಜೂರು ಅವರು ತುಳುವರ ಆಟಿ ತಿಂಗಳು ಹಾಗೂ ಅದರ ವಿಶೇಷ ಆಚರಣೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಲಯಾಧ್ಯಕ್ಷರಾಗಿ ಭೇಟಿ ನೀಡಿದ ಸಂತೋಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ, ಜೇಸಿಐ ಆಯೋಜಿಸುವ ‘ಮೌನ ಸಾಧಕರ ಸಾಧನೆಯ ಸನ್ಮಾನ’ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಸಾಧನೆ ಮಾಡಿರುವ ಗಾಯನ್ ಸಿ. ಸುವರ್ಣ ಹಾಗೂ ‘ಆಟಿದ ತಮ್ಮನ’ ಅಂಗವಾಗಿ ತುಳು ಲಿಪಿ ಕಲಿಕೆಗೆ ವಿಶೇಷ ಕೊಡುಗೆ ನೀಡಿರುವ ಅಕ್ಷತಾ ಜ್ಞಾನೇಶ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತುಳು ಭಾಷೆ ಹಾಗೂ ತುಳುನಾಡಿನ ಸಂಸ್ಕೃತಿಗೆ ಸಂಬಂಧಿಸಿದ ವಿವಿಧ ಪ್ರಶ್ನೆಗಳನ್ನು ಕೇಳಲಾಗಿದ್ದು, ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ವಿತರಿಸಲಾಯಿತು. ಜೇಸಿಐ ಕಾಪು ಘಟಕದ ಸದಸ್ಯರು ತಮ್ಮ ಮನೆಗಳಲ್ಲಿ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ಸಾಂಪ್ರದಾಯಿಕ ತುಳುನಾಡಿನ ಖಾದ್ಯಗಳನ್ನು ಅತಿಥಿಗಳಿಗೆ ಉಣಬಡಿಸಲಾಯಿತು.
ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಜೆಎಫ್‌ಡಿ ಅರುಣ್ ಮಾಂಜ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಜೆಎಫ್‌ಪಿ ಲೂಯಿಸ್ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ, ಕಾರ್ಯದರ್ಶಿ ಶೃತಿ ಶೆಟ್ಟಿ, ಲೇಡಿ ಜೆಸಿ ಸಂಯೋಜಕಿ ಕವಿತಾ ಕುಂದರ್, ‘ಆಟಿದ ತಮ್ಮನ’ ನಿರ್ದೇಶಕಿ ಸುಖಲಾಕ್ಷಿ ಬಂಗೇರ, ಸಹ ನಿರ್ದೇಶಕಿ ಸತ್ಯವತಿ ಬಂಗೇರ, ಜೂನಿಯರ್ ಜೆಸಿ ಅಧ್ಯಕ್ಷ ಮನ್ವಿತ್ ಬಂಗೇರ ಸೇರಿದಂತೆ ಜೇಸಿಐ ಕಾಪು ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
