Skip to content
Billava News

“ಜನಸೇವೆಯೇ ಜನಾರ್ದನ ಸೇವೆ” ಎಂಬ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಡಾ. ಸದಾನಂದ ಪೂಜಾರಿ ದಂಪತಿಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಗೌರವಾರ್ಪಣೆ

ಕೊಲ್ಲೂರು: ಬಡವರು ಹಾಗೂ ನಿರ್ಗತಿಕರ ಸೇವೆಯನ್ನು ವೈದ್ಯಕೀಯ ವೃತ್ತಿಯ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿರುವ ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಮತ್ತು...

By Billavavani
“ಜನಸೇವೆಯೇ ಜನಾರ್ದನ ಸೇವೆ” ಎಂಬ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಡಾ. ಸದಾನಂದ ಪೂಜಾರಿ ದಂಪತಿಗಳಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಗೌರವಾರ್ಪಣೆ

ಕೊಲ್ಲೂರು: ಬಡವರು ಹಾಗೂ ನಿರ್ಗತಿಕರ ಸೇವೆಯನ್ನು ವೈದ್ಯಕೀಯ ವೃತ್ತಿಯ ಪ್ರಮುಖ ಧ್ಯೇಯವನ್ನಾಗಿಸಿಕೊಂಡಿರುವ ಮಂಗಳೂರಿನ ಸರ್ಕಾರಿ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಯ ಖ್ಯಾತ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಮತ್ತು ಅವರ ಧರ್ಮಪತ್ನಿ, ನೇತ್ರ ತಜ್ಞೆ ಡಾ. ಸೌಮ್ಯ ಅವರನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಕೆ. ಬಾಬುಶೆಟ್ಟಿ ಅವರು ವೈದ್ಯ ದಂಪತಿಗಳನ್ನು ಗೌರವಿಸಿದರು.

“ಜನಸೇವೆಯೇ ಜನಾರ್ದನ ಸೇವೆ” ಎಂಬ ಆಶಯವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಡಾ. ಸದಾನಂದ ಪೂಜಾರಿ ಅವರು, ತಮ್ಮ ವೃತ್ತಿಯ ಮಿತಿಗಳನ್ನು ಮೀರಿ ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುವ ಬಡ ಹಾಗೂ ನಿರ್ಗತಿಕ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿ, ಹಣದ ಕೊರತೆಯಿಂದ ಚಿಕಿತ್ಸೆ ಪಡೆಯಲು ಅಸಹಾಯಕರಾಗಿದ್ದ ಅನೇಕರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಅವರ ವೈದ್ಯಕೀಯ ಪರಿಣತಿ, ಕೈಗುಣ, ಹೃದಯವೈಶಾಲ್ಯತೆ ಹಾಗೂ ನಿಸ್ವಾರ್ಥ ಸೇವೆಯಿಂದಾಗಿ ಅನೇಕ ಬಡ ಕುಟುಂಬಗಳ ಬದುಕಿನಲ್ಲಿ ಮತ್ತೆ ನೆಮ್ಮದಿಯ ಬೆಳಕು ಮೂಡಿದೆ. ವೈದ್ಯರಾಗಿ ಜನಪ್ರಿಯರಾಗಿರುವ ಅವರು, ಪ್ರವೃತ್ತಿಯಲ್ಲಿ ಅಪ್ಪಟ ಮಾನವತಾವಾದಿಯಾಗಿ ಗುರುತಿಸಿಕೊಂಡಿದ್ದಾರೆ.

ಬೆಳ್ತಂಗಡಿಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಡಾ. ಸದಾನಂದ ಪೂಜಾರಿ ಅವರು, ಬಡತನ ಹಾಗೂ ಗ್ರಾಮೀಣ ಜನರ ಬದುಕಿನ ಸಂಕಷ್ಟಗಳನ್ನು ಹತ್ತಿರದಿಂದ ಕಂಡವರು. ಅವಿರತ ಪರಿಶ್ರಮದ ಮೂಲಕ ವೈದ್ಯಕೀಯ ಶಿಕ್ಷಣ ಪಡೆದು, ಇಂದು ಸಮಾಜದ ದುರ್ಬಲ ವರ್ಗದವರ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಇದರ ಜೊತೆಗೆ ಅವರು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್‌ನ ಮಂಗಳೂರು ಘಟಕದ ಅಧ್ಯಕ್ಷರಾಗಿದ್ದು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಕರ್ನಾಟಕ ರಾಜ್ಯ ಶಾಖೆಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಸದಾನಂದ ಪೂಜಾರಿ ಅವರ ಸಾಮಾಜಿಕ ಹಾಗೂ ವೈದ್ಯಕೀಯ ಸೇವೆಯ ಹಿಂದೆ ಅವರ ಧರ್ಮಪತ್ನಿ ಡಾ. ಸೌಮ್ಯ ಅವರ ತ್ಯಾಗ, ಸಹಕಾರ ಮತ್ತು ಬೆಂಬಲವೂ ಮಹತ್ವದ್ದಾಗಿದೆ. ನೇತ್ರ ತಜ್ಞೆಯಾಗಿರುವ ಅವರು ಕೂಡ ವೈದ್ಯಕೀಯ ಸೇವೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದ್ದಾರೆ.

ಬಡವರ ಆರೋಗ್ಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಈ ವೈದ್ಯ ದಂಪತಿಗಳ ಸೇವೆಯನ್ನು ಗುರುತಿಸಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.