Skip to content
Billava News

ಶಾಸ್ತ್ರೀಯ ಸಂಗೀತ, ವೀಣೆ ವಾದನ ಮತ್ತು ಭರತನಾಟ್ಯದಲ್ಲಿ ಮಿಂಚುತ್ತಿರುವ ಕೊಣಾಜೆಯ ಪ್ರತಿಭೆ ಶ್ರೀರಕ್ಷಾ ಎಸ್. ಎಚ್. ಪೂಜಾರಿ

ಸಂಗೀತ ಮತ್ತು ನೃತ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಪಸರಿಸುತ್ತಿರುವ ಶ್ರೀರಕ್ಷಾ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು …

By Billavavani
ಶಾಸ್ತ್ರೀಯ ಸಂಗೀತ, ವೀಣೆ ವಾದನ ಮತ್ತು ಭರತನಾಟ್ಯದಲ್ಲಿ ಮಿಂಚುತ್ತಿರುವ ಕೊಣಾಜೆಯ ಪ್ರತಿಭೆ ಶ್ರೀರಕ್ಷಾ ಎಸ್. ಎಚ್. ಪೂಜಾರಿ

ಮಂಗಳೂರು: ಮಂಗಳೂರು ಸಮೀಪದ ಕೊಣಾಜೆಯ ಶ್ರೀ ಹರೀಶ ಪೂಜಾರಿ ಮತ್ತು ಶ್ರೀಮತಿ ಸುರೇಖಾ ದಂಪತಿಗಳ ಪುತ್ರಿ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ, ಸರಸ್ವತಿ ವೀಣೆ ವಾದನ ಹಾಗೂ ಭರತನಾಟ್ಯ ಎಂಬ ಮೂರು ಶಾಸ್ತ್ರೀಯ ಕಲಾಪ್ರಕಾರಗಳಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

ಸಂಗೀತ ಮತ್ತು ನೃತ್ಯದ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನು ಪಸರಿಸುತ್ತಿರುವ ಶ್ರೀರಕ್ಷಾ ಅವರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪರಿಚಯಿಸಿದ್ದಾರೆ. ಇದುವರೆಗೆ ಭಾರತ ಹಾಗೂ ವಿದೇಶಗಳಲ್ಲಿ 200ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳು ಮತ್ತು 80ಕ್ಕೂ ಅಧಿಕ ಭರತನಾಟ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

IMG_4759.jpeg

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದುಷಿ ಶಾಂತ ನರಸಿಂಹನ್ (ಬೆಂಗಳೂರು) ಹಾಗೂ ವಿದ್ವಾನ್ ವೆಂಕಟಕೃಷ್ಣ ಭಟ್ (ಬಂಟ್ವಾಳ) ಅವರಲ್ಲಿ ಅಭ್ಯಾಸ ಮಾಡುತ್ತಿರುವ ಇವರು, ಭರತನಾಟ್ಯವನ್ನು ವಿದುಷಿ ರೇಷ್ಮಾ ನಿರ್ಮಲ್ ಭಟ್ ಮತ್ತು ವಿದ್ವಾನ್ ಪ್ರಮೋದ್ ಉಳ್ಳಾಲ್ ಅವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದಾರೆ. ಸರಸ್ವತಿ ವೀಣೆ ವಾದನವನ್ನು ಕಾರ್ಕಳದ ಶ್ರೀಮತಿ ಜಯಲಕ್ಷ್ಮಿ ಭಟ್ ಅವರಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

2c890c2e-9e54-4655-bb24-4f22e5f9dae3.jpeg

ದೈವದಶಕಂ ಕೃತಿಗೆ ಕನ್ನಡದಲ್ಲಿ ರಾಗ ಸಂಯೋಜನೆ

ಶ್ರೀರಕ್ಷಾ ಅವರ ಕಲಾ ಪಯಣದ ಪ್ರಮುಖ ಸಾಧನೆಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ರಚಿಸಿದ ದೈವದಶಕಂ ಕೃತಿಗೆ ಕನ್ನಡದಲ್ಲಿ ರಾಗ ಸಂಯೋಜನೆ ಮಾಡಿ, ಪ್ರಥಮ ಬಾರಿಗೆ ಕನ್ನಡದಲ್ಲಿ ಹಾಡಿ ಪ್ರಸ್ತುತಪಡಿಸಿರುವುದು ವಿಶೇಷವಾಗಿದೆ. 10 ಶ್ಲೋಕಗಳನ್ನು ಒಳಗೊಂಡ ಈ ಕೃತಿ 136 ಭಾಷೆಗಳಿಗೆ ಭಾಷಾಂತರಗೊಂಡು ಗಿನ್ನೆಸ್ ದಾಖಲೆ ನಿರ್ಮಿಸಿರುವ ಹಿನ್ನೆಲೆಯಲ್ಲಿದೆ. ಕರ್ನಾಟಕದ ಮುಖ್ಯಮಂತ್ರಿಗಳಿಂದ ಉದ್ಘಾಟನೆಗೊಂಡ ರಾಜ್ಯಮಟ್ಟದ ಪ್ರತಿಷ್ಠಿತ ಗುರು ಗಾಂಧಿ ಸಂವಾದ ಕಾರ್ಯಕ್ರಮದಲ್ಲಿ ಈ ವಿಶೇಷ ಪ್ರಸ್ತುತಿ ಗಮನ ಸೆಳೆದಿದೆ.

ಕೇರಳದ ಶಿವಗಿರಿ ತೀರ್ಥಾಟನೆ, ಗುರುವಾಯೂರು ಚೆಂಬೈ ಸಂಗೀತೋತ್ಸವ, ಬಹರೈನ್ ಕನ್ನಡ ಸಂಘ, ಓಮನ್ ಬಿಲ್ಲವಾಸ್ ಮಸ್ಕತ್ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ, ಶಿಲಪ್ಪದಿಕಾರಂ ಅಂತರರಾಷ್ಟ್ರೀಯ ಶಾಸ್ತ್ರೀಯ ನೃತ್ಯೋತ್ಸವ ಹಾಗೂ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ 47ನೇ ಅಖಿಲ ಭಾರತ ಶಾಸ್ತ್ರೀಯ ನೃತ್ಯೋತ್ಸವ ಸೇರಿದಂತೆ ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಸತತ ಐದು ವರ್ಷಗಳಿಂದ ಹಾಗೂ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ದಸರಾ ಮಹೋತ್ಸವದ ಶತವೀಣಾವಲ್ಲರಿ ತಂಡದಲ್ಲಿ ಸತತ ಮೂರು ವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಆಕಾಶವಾಣಿ ಮಂಗಳೂರು ಹಾಗೂ ವಿವಿಧ ಸರ್ಕಾರಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ತಮ್ಮ ಕಲೆಯನ್ನು ಪ್ರಸ್ತುತಪಡಿಸಿದ್ದಾರೆ.

ಹಲವು ಪ್ರಶಸ್ತಿ ಪುರಸ್ಕಾರಗಳ ಗರಿ

ಕಲಾ ಕ್ಷೇತ್ರದ ಸಾಧನೆಗಾಗಿ ಶ್ರೀರಕ್ಷಾ ಅವರು ನಾಟ್ಯ ಬಾಲ ಅಂತರರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರಮಟ್ಟದ ನಾಟ್ಯ ತಿಲಕ ಪುರಸ್ಕಾರ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ, ಕನಕ ಪುರಸ್ಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ರಾಜ್ಯೋತ್ಸವ ಸಾಧಕ ಪುರಸ್ಕಾರ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

ಕೇರಳದ ಶಿವಗಿರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಶಿವಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಸ್ವಾಮೀಜಿಯವರಿಂದ ಗೌರವಿಸಲ್ಪಟ್ಟಿದ್ದಾರೆ. ಕನ್ನಡದ ಗಾನಕೋಗಿಲೆ ರೇವಮ್ಮ ಹಾಗೂ ಓಮನ್ ಬಿಲ್ಲವಾಸ್ ವತಿಯಿಂದ ‘ಸ್ವರ ಮಾಧುರ್ಯ’ ಎಂಬ ಬಿರುದನ್ನೂ ನೀಡಿ ಗೌರವಿಸಲಾಗಿದೆ.

ಭರತನಾಟ್ಯದ ಜೂನಿಯರ್ ಮತ್ತು ಸೀನಿಯರ್ ಗ್ರೇಡ್ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ ಪಡೆದಿರುವ ಇವರು, ಕರ್ನಾಟಕ ಶಾಸ್ತ್ರೀಯ ಗಾಯನದ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಪ್ರಸ್ತುತ ವಿದ್ವತ್ ಗ್ರೇಡ್ ಅಧ್ಯಯನವನ್ನು ಮುಂದುವರಿಸುತ್ತಿದ್ದಾರೆ.

ಶಿಕ್ಷಣ, ತಂತ್ರಜ್ಞಾನ ಮತ್ತು ಕ್ರೀಡೆಯಲ್ಲಿಯೂ ಸಾಧನೆ

ಕಲೆಯ ಜೊತೆಗೆ ಶಿಕ್ಷಣದಲ್ಲಿಯೂ ಉತ್ತಮ ಸಾಧನೆ ಮಾಡಿರುವ ಶ್ರೀರಕ್ಷಾ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ರಲ್ಲಿ 620 ಅಂಕಗಳನ್ನು (99.20%) ಹಾಗೂ ಪದವಿಪೂರ್ವ ವಿಜ್ಞಾನ ವಿಭಾಗದಲ್ಲಿ ಶೇ. 96.50 ಅಂಕಗಳನ್ನು ಗಳಿಸಿದ್ದಾರೆ. ಪ್ರಸ್ತುತ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

ಐಐಟಿ ಬಾಂಬೆ ಮತ್ತು ಐಐಟಿ ಕಾನ್ಪುರದ ಟೆಕ್‌ಫೆಸ್ಟ್‌ಗಳಲ್ಲಿ ಭಾಗವಹಿಸಿರುವ ಇವರು, ಕ್ರೀಡಾ ಕ್ಷೇತ್ರದಲ್ಲಿಯೂ ಮೈಸೂರು ವಿಭಾಗ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲಿಯೂ ಮುಂಚೂಣಿ

ಶ್ರೀರಕ್ಷಾ ಅವರು ಸ್ವತಃ ರಾಗ ಸಂಯೋಜನೆ ಮಾಡಿ ಭಕ್ತಿಗೀತೆಗಳನ್ನು ರಚಿಸಿ ಹಾಡುವ ಸೃಜನಶೀಲ ಕಲಾವಿದೆಯೂ ಹೌದು. ಮಕ್ಕಳ ವೆಬ್ ವೇದಿಕೆಯಾದ ‘ಮಕ್ಕಳ ಜಗಲಿ’ಯ ಶೀರ್ಷಿಕೆ ಗೀತೆಯನ್ನು ರಚಿಸಿ, ಸ್ವತಃ ಹಾಡಿದ್ದಾರೆ.

ಯುವ ಪ್ರತಿಭೆಗಳಿಗೆ ಶಾಸ್ತ್ರೀಯ ಸಂಗೀತದ ತರಬೇತಿ ನೀಡುವ ಉದ್ದೇಶದಿಂದ ‘ಮಾಧುರ್ಯ ಸಂಗೀತ ಶಾಲೆ’ಯನ್ನು ಸ್ಥಾಪಿಸಿದ್ದಾರೆ. ಸಂಗೀತದ ಮೂಲಕ ಮಾನಸಿಕ ಮತ್ತು ಭಾವನಾತ್ಮಕ ಕ್ಷೇಮವನ್ನು ಉತ್ತೇಜಿಸುವ ಆಶಯದೊಂದಿಗೆ ‘Strings of Serenity – Veena for Mental Health’ ಎಂಬ ಸಾಮಾಜಿಕ ಕಾರ್ಯವನ್ನೂ ಆರಂಭಿಸಿದ್ದಾರೆ.

ಕಲೆ, ಶಿಕ್ಷಣ, ತಂತ್ರಜ್ಞಾನ, ಸೃಜನಶೀಲತೆ ಮತ್ತು ಸಮಾಜಮುಖಿ ಚಿಂತನೆಗಳನ್ನು ಸಮನ್ವಯಗೊಳಿಸಿಕೊಂಡು ಮುನ್ನಡೆಯುತ್ತಿರುವ ಶ್ರೀರಕ್ಷಾ ಎಸ್. ಎಚ್. ಪೂಜಾರಿ ಅವರು ಭಾರತೀಯ ಶಾಸ್ತ್ರೀಯ ಕಲಾಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ತಮ್ಮ ಪ್ರತಿಭೆ, ಶಿಸ್ತು, ಭಕ್ತಿ ಹಾಗೂ ಸಮರ್ಪಣಾ ಮನೋಭಾವದಿಂದ ಯುವಪೀಳಿಗೆಗೆ ಪ್ರೇರಣೆಯಾಗಿರುವ ಕೊಣಾಜೆಯ ಈ ಯುವ ಕಲಾವಿದೆ ಬಿಲ್ಲವ ಸಮಾಜದ ಹೆಮ್ಮೆಯ ಸಾಧಕಿಯಾಗಿ ಗುರುತಿಸಿಕೊಂಡಿದ್ದಾರೆ.