ಅಡಿಕೆ ಬೆಳೆಗಾರರ ಪರ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ
ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ರಕ್ಷಣೆಯ ದೃಷ್ಟಿಯಿಂದ ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕಗಳು ಮತ್ತು ಮೈಲುತುತ್ತಿನ ಮೇಲಿನ ಜಿಎಸ್‌ಟಿ ದರವನ್ನು ಇಳಿಸುವಂತೆ ಕೋಟ ಶ್ರೀನಿವಾಸ ಪೂಜಾರಿ

ನವದೆಹಲಿ: ಅಡಿಕೆ ಬೆಳೆಗಾರರ ಹಿತಾಸಕ್ತಿ ಹಾಗೂ ರಕ್ಷಣೆಯ ದೃಷ್ಟಿಯಿಂದ ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕಗಳು ಮತ್ತು ಮೈಲುತುತ್ತಿನ ಮೇಲಿನ ಜಿಎಸ್‌ಟಿ ದರವನ್ನು ಇಳಿಸುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಪ್ರಸ್ತುತ ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕಗಳು ಹಾಗೂ ಮೈಲುತುತ್ತಿನ ಮೇಲೆ ಶೇ.18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದ್ದು, ಅಡಿಕೆ ಕೃಷಿ ವ್ಯಾಪ್ತಿಯ ಬೆಳೆ ಆಗಿರುವುದರಿಂದ ಜಿಎಸ್‌ಟಿ ದರವನ್ನು ಶೇ.5ಕ್ಕೆ ಇಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.
ಮನವಿಗೆ ಸ್ಪಂದಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮೈಲುತುತ್ತು ಸೇರಿದಂತೆ ಅಡಿಕೆ ಬೆಳೆಗೆ ಬಳಸುವ ಕ್ರಿಮಿನಾಶಕಗಳ ಮೇಲಿನ ಜಿಎಸ್‌ಟಿ ಇಳಿಕೆ ಕುರಿತು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂಸದರಾದ ಬಿ.ವೈ. ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ರಾಜ್ಯದ ಮಾಜಿ ಗೃಹ ಸಚಿವ ಹಾಗೂ ಶಾಸಕ ಅರಗ ಜ್ಞಾನೇಂದ್ರ, ಕ್ಯಾಂಪ್ಕೋ ಅಧ್ಯಕ್ಷ ಸತೀಶ್ಚಂದ್ರ, ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
