ಬೆಂಗಳೂರು–ಉಡುಪಿ–ಗೋವಾ ವಂದೇ ಭಾರತ್ ರೈಲು: ಹಲವು ವರ್ಷಗಳ ಬೇಡಿಕೆಗೆ ಈಗ ಸಾಕಾರ: ಸಂಸದ ಕೋಟ ಶ್ರೀನಿವಾಸ ಪೂಜಾರಿ
ನವೆಂಬರ್ 15ರಿಂದ ನಿಯಮಿತ ರೈಲು ಸೇವೆ ಆರಂಭ – ಬೆಂಗಳೂರು ಮತ್ತು ಕರಾವಳಿ ನಡುವಿನ ಪ್ರಯಾಣ ಮತ್ತಷ್ಟು ಸುಗಮ

ಉಡುಪಿ: ಕರ್ನಾಟಕದ ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಂಗಳೂರು–ಮಂಗಳೂರು–ಉಡುಪಿ–ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆಗೆ ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಉಡುಪಿ–ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ನವೆಂಬರ್ 13ರಂದು ಮಧ್ಯಾಹ್ನ 2 ಗಂಟೆಗೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರೈಲಿಗೆ ಚಾಲನೆ ನೀಡಲಿದ್ದು, ಇದೇ ಸಂದರ್ಭದಲ್ಲಿ ಮಂಗಳೂರು ಜಂಕ್ಷನ್ನಲ್ಲಿಯೂ ಕರಾವಳಿಯಿಂದ ಬೆಂಗಳೂರಿನತ್ತ ಸಂಚರಿಸುವ ವಂದೇ ಭಾರತ್ ರೈಲಿನ ಸಾಂಕೇತಿಕ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡದ ಸಂಸದರೊಂದಿಗೆ ಮಂಗಳೂರು ಜಂಕ್ಷನ್ನಲ್ಲಿ ರೈಲಿಗೆ ಚಾಲನೆ ನೀಡಲಿದ್ದಾರೆ. ನವೆಂಬರ್ 15ರಿಂದ ಎರಡೂ ದಿಕ್ಕುಗಳಲ್ಲಿ ನಿಯಮಿತ ರೈಲು ಸೇವೆ ಆರಂಭವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ, ರೈಲ್ವೆ ಸಚಿವರಿಗೆ ಅಭಿನಂದನೆ..
ರಾಜಧಾನಿ ಬೆಂಗಳೂರಿನಿಂದ ಕರ್ನಾಟಕದ ಕರಾವಳಿಯನ್ನು ಸಂಪರ್ಕಿಸುವ ವಂದೇ ಭಾರತ್ ರೈಲು ಸೇವೆಯನ್ನು ಆರಂಭಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಕೋಟ ಶ್ರೀನಿವಾಸ ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಯೋಜನೆ ಸಾಕಾರಗೊಳ್ಳಲು ಸಹಕಾರ ನೀಡಿದ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

2019ರಲ್ಲಿ ಆರಂಭವಾದ ಪ್ರಯತ್ನಕ್ಕೆ ಈಗ ಫಲ
2019ರಲ್ಲಿ ಅಂದಿನ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ಬೆಂಗಳೂರಿಗೆ ವಂದೇ ಭಾರತ್ ರೈಲು ಸಂಪರ್ಕ ಕಲ್ಪಿಸುವ ಕನಸನ್ನು ವ್ಯಕ್ತಪಡಿಸಿದ್ದರು. ಆದರೆ ಸಕಲೇಶಪುರ–ಸುಬ್ರಹ್ಮಣ್ಯ ಘಾಟ್ ಮಾರ್ಗದ ವಿದ್ಯುದೀಕರಣ ಕಾಮಗಾರಿ ಬಾಕಿ ಇದ್ದುದರಿಂದ ಯೋಜನೆ ಮುಂದೂಡಲ್ಪಟ್ಟಿತ್ತು.
ನಂತರ ಭಾರತೀಯ ರೈಲ್ವೆಯ ವಿದ್ಯುದೀಕರಣ ಯೋಜನೆಯಡಿ ಕಾರವಾರ–ಮಂಗಳೂರು–ಬೆಂಗಳೂರು ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿತು. ಕಳೆದ ವರ್ಷ ಬೆಂಗಳೂರಿಗೆ ಭೇಟಿ ನೀಡಿದ್ದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು–ಮಂಗಳೂರು ಮಾರ್ಗವಾಗಿ ಗೋವಾದ ಮಡಗಾಂವ್ವರೆಗೆ ವಂದೇ ಭಾರತ್ ರೈಲು ಓಡಿಸುವ ನಿರ್ಧಾರ ಪ್ರಕಟಿಸಿದ್ದರು.
ಈಗಾಗಲೇ ಮಂಗಳೂರು–ಮಡಗಾಂವ್ ನಡುವೆ ವಂದೇ ಭಾರತ್ ರೈಲು ಸೇವೆ ಚಾಲ್ತಿಯಲ್ಲಿದ್ದ ಹಿನ್ನೆಲೆಯಲ್ಲಿ ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಹಲವು ಬಾರಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿತ್ತು.
ಕರಾವಳಿ ಜನರ ಬಹುದಿನಗಳ ಕನಸು ನನಸು
ದೇಗುಲಗಳ ತವರು, ಶಿಕ್ಷಣದ ಕೇಂದ್ರ, ಹೋಟೆಲ್ ಹಾಗೂ ಪ್ರವಾಸೋದ್ಯಮದ ಪ್ರಮುಖ ತಾಣವಾಗಿರುವ ಕರಾವಳಿ ಕರ್ನಾಟಕವು ಸೀಬರ್ಡ್ ನೌಕಾನೆಲೆ ಮತ್ತು ಕೈಗಾ ಅಣುಸ್ಥಾವರದಂತಹ ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರಗಳನ್ನು ಹೊಂದಿದೆ. ಇಂತಹ ಮಹತ್ವದ ಪ್ರದೇಶವನ್ನು ರಾಜಧಾನಿ ಬೆಂಗಳೂರಿನೊಂದಿಗೆ ಆಧುನಿಕ ವಂದೇ ಭಾರತ್ ರೈಲು ಸಂಪರ್ಕಿಸುವುದು ಬಹುದಿನಗಳ ಬೇಡಿಕೆಯಾಗಿತ್ತು.
ಕರಾವಳಿ ಪ್ರಯಾಣಿಕರ ಈ ಬೇಡಿಕೆ ಈಡೇರಿರುವುದು ಸಂತಸ ತಂದಿದೆ. ವಂದೇ ಭಾರತ್ ರೈಲು ಸೇವೆಯ ಮೂಲಕ ಕರಾವಳಿ ಮತ್ತು ಬೆಂಗಳೂರಿನ ನಡುವಿನ ಸಂಪರ್ಕ ಮತ್ತಷ್ಟು ಸುಗಮವಾಗಲಿದ್ದು, ಈ ಪ್ರಯತ್ನದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿದ ತೃಪ್ತಿ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
