'ದಶ ವೈಭವ'ದೊಂದಿಗೆ ಮಂಗಳೂರು ದಸರಾ: ಧಾರ್ಮಿಕ-ಸಾಂಸ್ಕೃತಿಕ ಸಂಭ್ರಮಕ್ಕೆ ಸಜ್ಜಾದ ಕುದ್ರೋಳಿ
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಿತ ಮಂಗಳೂರು ದಸರಾ ಮಹೋತ್ಸವ–2026 ಅನ್ನು ಈ ಬಾರಿ "ದಶ ವೈಭವ" ಪರಿಕಲ್ಪನೆಯಡಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು..

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಿತ ಮಂಗಳೂರು ದಸರಾ ಮಹೋತ್ಸವ–2026 ಅನ್ನು ಈ ಬಾರಿ "ದಶ ವೈಭವ" ಪರಿಕಲ್ಪನೆಯಡಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿ ನಿರ್ಧರಿಸಿದೆ ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.
ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿ. ಜನಾರ್ದನ ಪೂಜಾರಿ ಅವರ ಆಶಯದಂತೆ ಈ ಬಾರಿಯೂ ಭಕ್ತರು ಮತ್ತು ಸಾರ್ವಜನಿಕರನ್ನು ಆಕರ್ಷಿಸುವ ಹತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು. ಕಿನ್ನಿಪಿಲಿ ಪಂಥ, ಮುದ್ದು ಶಾರದೆ, ಮಕ್ಕಳ ದಸರಾ, ಕಾಲೇಜು ಮಟ್ಟದ ಜನಪದ ಸ್ಪರ್ಧೆ, ಕವಿಗೋಷ್ಠಿ, ಮ್ಯಾರಥಾನ್, ರುದ್ರತಾಂಡವ ನೃತ್ಯ, ಮಹಿಳಾ ದಸರಾ ಸೇರಿದಂತೆ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳು ಮಹೋತ್ಸವದ ಅಂಗವಾಗಿ ನಡೆಯಲಿವೆ.

ದಸರಾ ಮಹೋತ್ಸವದ ಅವಧಿಯಲ್ಲಿ ಪ್ರತಿದಿನ ಅಕ್ಷರಾಭ್ಯಾಸ, ಚಂಡಿಕಾಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಅಲ್ಲದೆ, ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಕೃಷ್ಣವೇಷ ಸ್ಪರ್ಧೆ, ನಾರಾಯಣಗುರು ಪೂಜೆ, ವರಮಹಾಲಕ್ಷ್ಮೀ ಪೂಜೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಗೌರವಾರ್ಪಣೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೆಚ್ಚುವರಿ ಜಾಗ ಖರೀದಿ, ಅನ್ನಸಭಾಗೃಹದ ಆಧುನೀಕರಣ ಹಾಗೂ ಪಾಕಶಾಲೆಯ ನವೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಮಂಗಳೂರು ದಸರಾ ಕೇವಲ ಸಾಂಸ್ಕೃತಿಕ ಉತ್ಸವವಲ್ಲ, ಧಾರ್ಮಿಕ ಮಹೋತ್ಸವವೂ ಆಗಿದೆ. ವಿಶ್ವದ ವಿವಿಧ ಭಾಗಗಳಿಂದ ಭಕ್ತರು ಕ್ಷೇತ್ರಕ್ಕೆ ಆಗಮಿಸುತ್ತಿದ್ದು, ಮಹೋತ್ಸವವನ್ನು ಯಶಸ್ವಿಗೊಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ. ಜೊತೆಗೆ, ರಾಜ್ಯ ಸರ್ಕಾರವೂ ಮಂಗಳೂರು ದಸರಾ ಮಹೋತ್ಸವಕ್ಕೆ ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಸಭೆಯಲ್ಲಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮ್‌ಸುಂದರ್, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕೃತಿನ್ ಡಿ. ಅಮೀನ್, ಕಿಶೋರ್ ಕುಮಾರ್ ದಂಡೆಕೇರಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷ ಡಾ. ಬಿ.ಜಿ. ಸುವರ್ಣ, ಸದಸ್ಯರಾದ ಹರೀಶ್ ಕುಮಾರ್, ಸೂರ್ಯಕಾಂತ್ ಜೆ. ಸುವರ್ಣ, ವಾಸುದೇವ ಕೋಟ್ಯಾನ್, ವಸಂತ ಕಾರಂದೂರು, ಲತೀಶ್ ಕೋಟ್ಯಾನ್, ಗೌರವಿ ರಾಜಶೇಖರ್, ಶೈಲೇಂದ್ರ ವೈ. ಸುವರ್ಣ, ರಾಧಾಕೃಷ್ಣ, ಲೀಲಾಕ್ಷ ಕರ್ಕೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮಂಗಳೂರು ದಸರಾ ಮಹೋತ್ಸವವನ್ನು ಇನ್ನಷ್ಟು ಯಶಸ್ವಿಯಾಗಿ ಆಯೋಜಿಸುವ ಕುರಿತು ತಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು. ಕ್ಷೇತ್ರದ ಅರ್ಚಕ ವೃಂದ ಪ್ರಾರ್ಥನೆ ನೆರವೇರಿಸಿದ್ದು, ದಿನೇಶ್ ರಾಯಿ ಕಾರ್ಯಕ್ರಮ ನಿರೂಪಿಸಿದರು.


