Skip to content
Billava News

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಆಗಸ್ಟ್ 28ರಂದು ನಾರಾಯಣಗುರು ಜಯಂತಿ, ಶ್ರೀ ವರಮಹಾಲಕ್ಷ್ಮೀ ಪೂಜೆ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸ್ಥಾಪನಾಚಾರ್ಯರಾದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ ಆಗಸ್ಟ್ 28ರಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

By Billavavani
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ: ಆಗಸ್ಟ್ 28ರಂದು ನಾರಾಯಣಗುರು ಜಯಂತಿ, ಶ್ರೀ ವರಮಹಾಲಕ್ಷ್ಮೀ ಪೂಜೆ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸ್ಥಾಪನಾಚಾರ್ಯರಾದ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆ ಹಾಗೂ ಶ್ರೀ ವರಮಹಾಲಕ್ಷ್ಮೀ ಪೂಜೆ ಆಗಸ್ಟ್ 28ರಂದು ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ನಾರಾಯಣಗುರು ಜಯಂತಿ ಅಂಗವಾಗಿ ಬೆಳಗ್ಗೆ 8.45ಕ್ಕೆ ಸಾಮೂಹಿಕ ಪ್ರಾರ್ಥನೆ, ಗುರುಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಹಾಗೂ ರಾತ್ರಿ 7.45ಕ್ಕೆ ಮಹಾಗುರುಪೂಜೆ ಮತ್ತು ಪ್ರಸಾದ ವಿತರಣೆ ನೆರವೇರಲಿದೆ.

ಸಂಜೆ 6ಕ್ಕೆ ಗುರುವರ್ಯರ ಭಾವಚಿತ್ರ ಮೆರವಣಿಗೆ

ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ವತಿಯಿಂದ ಶ್ರೀ ಗುರುವರ್ಯರ ಭಾವಚಿತ್ರ ಮೆರವಣಿಗೆ ಸಂಜೆ 6 ಗಂಟೆಗೆ ಗಾಂಧಿನಗರ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಿಂದ ಹೊರಡಲಿದೆ. ಮಣ್ಣಗುಡ್ಡೆ, ಕಂಬಳಕ್ರಾಸ್ ರಸ್ತೆಯಾಗಿ ಸಾಗುವ ಮೆರವಣಿಗೆ ಬಳಿಕ ಕುದ್ರೋಳಿ ಕ್ಷೇತ್ರವನ್ನು ತಲುಪಲಿದೆ.

ಶ್ರೀ ವರಮಹಾಲಕ್ಷ್ಮೀ ಪೂಜೆ

ವರಮಹಾಲಕ್ಷ್ಮೀ ಪೂಜೆಯ ಅಂಗವಾಗಿ ಬೆಳಗ್ಗೆ 9ಕ್ಕೆ ಶ್ರೀ ಅನ್ನಪೂರ್ಣೇಶ್ವರಿ ದೇವಿಗೆ ವಿಶೇಷ ಅಭಿಷೇಕ ನಡೆಯಲಿದೆ. ಬೆಳಗ್ಗೆ 9.45ಕ್ಕೆ ಶ್ರೀ ಗೋಕರ್ಣನಾಥ ಕಲ್ಯಾಣ ಮಂಟಪದ ವೇದಿಕೆಯಲ್ಲಿ ಕಲಶ ಪ್ರತಿಷ್ಠಾಪನೆ ನೆರವೇರಲಿದೆ. 10 ಗಂಟೆಗೆ ಲಲಿತಾ ಸಹಸ್ರನಾಮ ಪಠಣ ಹಾಗೂ ಭಜನೆ ನಡೆಯಲಿದ್ದು, 11.30ಕ್ಕೆ ಶ್ರೀ ವರಮಹಾಲಕ್ಷ್ಮೀ ಪೂಜೆ ನೆರವೇರಲಿದೆ. ಮಧ್ಯಾಹ್ನ 12ಕ್ಕೆ ದೇವಿಗೆ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

500 ಮಹಿಳೆಯರಿಗೆ ವಿಶೇಷ ಅವಕಾಶ

ಶ್ರೀಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದ ವೇದಿಕೆಯಲ್ಲಿ ನಡೆಯುವ ವರಮಹಾಲಕ್ಷ್ಮೀ ಪೂಜೆಯಲ್ಲಿ ಮೊದಲು ಆಗಮಿಸುವ 500 ಮಹಿಳೆಯರಿಗೆ ಶ್ರೀದೇವಿಯ ಮಹಾ ಅರ್ಚನೆಯಲ್ಲಿ ಕುಳಿತುಕೊಳ್ಳಲು ಈ ಬಾರಿ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಮುಂಚಿತವಾಗಿ ಆಗಮಿಸುವಂತೆ ಕ್ಷೇತ್ರಾಡಳಿತ ಸಮಿತಿ ಮನವಿ ಮಾಡಿದೆ.

ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಹಾಗೂ ಶ್ರೀ ವರಮಹಾಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವಂತೆ ಕ್ಷೇತ್ರಾಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.