Skip to content
Tulunadu Special

ಅ.11ರಿಂದ ಮಂಗಳೂರು ದಸರಾ: ಅ.12ರಂದು ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟನೆ, ಅರಮನೆ ಮಾದರಿಯಲ್ಲಿ ದರ್ಬಾರ್ ಮಂಟಪ

ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಐತಿಹಾಸಿಕ ಮಂಗಳೂರು ದಸರಾ ಮತ್ತು ನವರಾತ್ರಿ ಮಹೋತ್ಸವ-2026 ಅಕ್ಟೋಬರ್ 11ರಿಂದ 22ರವರೆಗೆ ಕುಡ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದೆ.

By Billavavani
ಅ.11ರಿಂದ ಮಂಗಳೂರು ದಸರಾ: ಅ.12ರಂದು ಸಿಎಂ ಡಿ.ಕೆ. ಶಿವಕುಮಾರ್ ಉದ್ಘಾಟನೆ, ಅರಮನೆ ಮಾದರಿಯಲ್ಲಿ ದರ್ಬಾರ್ ಮಂಟಪ

ಮಂಗಳೂರು: ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವದ ಪ್ರತೀಕವಾಗಿರುವ ಐತಿಹಾಸಿಕ ಮಂಗಳೂರು ದಸರಾ ಮತ್ತು ನವರಾತ್ರಿ ಮಹೋತ್ಸವ-2026 ಅಕ್ಟೋಬರ್ 11ರಿಂದ 22ರವರೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅದ್ದೂರಿಯಾಗಿ ನಡೆಯಲಿದೆ ಎಂದು ಜೈರಾಜ್ ಸೋಮಸುಂದರಂ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪದ್ಮರಾಜ್ ಆರ್. ಪೂಜಾರಿ, ದಸರಾ ಮಹೋತ್ಸವಕ್ಕೆ ಅಗತ್ಯವಿರುವ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು. ಮಾಜಿ ಕೇಂದ್ರ ಹಣಕಾಸು ಸಚಿವ ಹಾಗೂ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದೆ.

ಈ ಬಾರಿ ದೇವಸ್ಥಾನದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿದ್ದು, ಅರಮನೆ ಮಾದರಿಯಲ್ಲಿ ನಿರ್ಮಿಸಲಾಗಿರುವ ಭವ್ಯ ದರ್ಬಾರ್ ಮಂಟಪದಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನ ದೇವತೆ ಶ್ರೀ ಶಾರದಾ ಮಾತೆಯ ಆರಾಧನೆ ನಡೆಯಲಿದೆ. ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟ ಹಾಗೂ ವಿವಿಧ ಜಾನಪದ ಕಲಾ ಪ್ರಕಾರಗಳು ಉತ್ಸವದ ಮೆರುಗು ಹೆಚ್ಚಿಸಲಿವೆ.

ಅ.12ರಂದು ಮುಖ್ಯಮಂತ್ರಿ ಉದ್ಘಾಟನೆ

ಅಕ್ಟೋಬರ್ 11ರಂದು ವೈದಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಮಧ್ಯಾಹ್ನ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅಕ್ಟೋಬರ್ 12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಉದ್ಘಾಟಿಸಲಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಐತಿಹಾಸಿಕ ಮಂಗಳೂರು ದಸರಾ ಶೋಭಾಯಾತ್ರೆ ಅಕ್ಟೋಬರ್ 21ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ.

ಪ್ರತಿದಿನ ಚಂಡಿಕಾ ಹೋಮ

ಅಕ್ಟೋಬರ್ 12ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 8.30ಕ್ಕೆ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯಲಿದೆ. ಅಕ್ಟೋಬರ್ 17ರಂದು ವಿಶೇಷ ಸಾಮೂಹಿಕ ಚಂಡಿಕಾ ಹೋಮ ಆಯೋಜಿಸಲಾಗಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಚಂಡಿಕಾ ಹೋಮದಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

‘ದಸರಾ ಕಲಾಜೇಂಕರ’ದಲ್ಲಿ ಸಾಂಸ್ಕೃತಿಕ ವೈಭವ

ಅಕ್ಟೋಬರ್ 11ರಿಂದ 20ರವರೆಗೆ ಪ್ರತಿದಿನ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ಸಂತೋಷಿ ಕಲಾ ಮಂಟಪದಲ್ಲಿ ‘ದಸರಾ ಕಲಾಜೇಂಕರ’ ಹೆಸರಿನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಇದೇ ವೇದಿಕೆಯಲ್ಲಿ ಪ್ರತಿದಿನ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ‘ಅಸಾಮಾನ್ಯ ಸ್ತ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಾವ್ಯ, ನೃತ್ಯ ಹಾಗೂ ವಿವಿಧ ಸ್ಪರ್ಧೆಗಳು

ಅಕ್ಟೋಬರ್ 12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 13ರಂದು ಸಂಜೆ 7.30ರಿಂದ ರಾಜ್ಯಮಟ್ಟದ ಭಕ್ತಿಗೀತೆ ಆಧಾರಿತ ಸಮೂಹ ನೃತ್ಯ ಸ್ಪರ್ಧೆ ‘ರುದ್ರತಾಂಡವಂ-2’ ಆಯೋಜಿಸಲಾಗಿದೆ.

ಮಕ್ಕಳಿಗಾಗಿ ‘ಮಕ್ಕಳ ದಸರಾ’ ಅಕ್ಟೋಬರ್ 15ರಂದು ನಡೆಯಲಿದ್ದು, ಬೆಳಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 16ರಂದು ‘ಮುದ್ದು ಶಾರದೆ’ ಸ್ಪರ್ಧೆ ಆಯೋಜಿಸಲಾಗಿದೆ.

ಅಕ್ಟೋಬರ್ 18ರಂದು ದಸರಾ ಮ್ಯಾರಥಾನ್ ಎಡಿಷನ್-4 ಹಾಗೂ ‘ಕಿನ್ನಿಪಿಲಿ-2’ ಕಾರ್ಯಕ್ರಮ ನಡೆಯಲಿದೆ.

ಅ.19ರಂದು ಮಹಿಳಾ ದಸರಾ

ಅಕ್ಟೋಬರ್ 19ರಂದು ಮಹಿಳೆಯರಿಗಾಗಿ ‘ಮಹಿಳಾ ದಸರಾ’ ಆಯೋಜಿಸಲಾಗಿದ್ದು, ಭರತನಾಟ್ಯ, ಅಗ್ನಿರಹಿತ ಅಡುಗೆ, ರಂಗೋಲಿ, ಮೆಹೆಂದಿ, ಸಮೂಹ ಗಾಯನ ಹಾಗೂ ಪುಷ್ಪಾಲಂಕಾರ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಬಾ-ದಾಂಡಿಯಾ ನೃತ್ಯವೂ ನಡೆಯಲಿದೆ.

ಅಕ್ಟೋಬರ್ 20ರಂದು ‘ದಸರಾ ರಂಗಾಂತರಂಗ’ ಹೆಸರಿನಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಶಾರದಾ ಮಾತೆಯ ಮಡಿಲಲ್ಲಿ ಅಕ್ಷರಾಭ್ಯಾಸ

ಅಕ್ಟೋಬರ್ 20ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಶಾರದಾ ಮಾತೆಯ ಸನ್ನಿಧಿಯಲ್ಲಿ ಮಕ್ಕಳಿಗಾಗಿ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಅರಮನೆ ಮಾದರಿಯಲ್ಲಿ ದರ್ಬಾರ್ ಮಂಟಪ

ಈ ಬಾರಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸಲಿರುವ ದರ್ಬಾರ್ ಮಂಟಪವನ್ನು ಅರಮನೆ ಮಾದರಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಜೈರಾಜ್ ಸೋಮಸುಂದರಂ, ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.