ಮಂಗಳೂರು ರೈಲ್ವೆ ಜಾಲದ ಏಕೀಕರಣ: ಕರಾವಳಿಯ ದೀರ್ಘಕಾಲದ ಬೇಡಿಕೆ ಈಡೇರಿಕೆ
ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲವನ್ನು ಇದೀಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ...

ಮಂಗಳೂರು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ನಡುವೆ ಹಂಚಿಕೆಯಾಗಿದ್ದ ಮಂಗಳೂರು ರೈಲ್ವೆ ಜಾಲವನ್ನು ಇದೀಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಕರಾವಳಿ ಭಾಗದ ಜನರ ಬಹುಕಾಲದ ಬೇಡಿಕೆ ಹಾಗೂ ದೀರ್ಘಕಾಲದ ಕನಸು ನನಸಾಗುವಂತಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, 2024ರ ಜೂನ್‌ನಲ್ಲಿ ಸಂಸದನಾಗಿ ಅಧಿಕಾರ ವಹಿಸಿಕೊಂಡ ಬಳಿಕವೇ ಮಂಗಳೂರು ರೈಲ್ವೆ ಜಾಲದ ಏಕೀಕರಣದ ವಿಚಾರವನ್ನು ಆದ್ಯತೆಯಾಗಿ ಪರಿಗಣಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ಈ ಬೇಡಿಕೆಯನ್ನು ತಂದು, ಲಭ್ಯವಿದ್ದ ಸಂಸದೀಯ ಹಾಗೂ ಸಾಂಸ್ಥಿಕ ವೇದಿಕೆಗಳ ಮೂಲಕ ನಿರಂತರವಾಗಿ ಧ್ವನಿ ಎತ್ತಲಾಗಿತ್ತು. ಈ ವಿಷಯದ ಕುರಿತು ಅಂದಿನಿಂದಲೂ ನಿರಂತರ ಪ್ರಯತ್ನ ನಡೆಸಲಾಗಿದ್ದು, ಇದೀಗ ಪ್ರಮುಖ ಬೇಡಿಕೆ ಈಡೇರುತ್ತಿರುವುದು ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ.
ಮಂಗಳೂರು ರೈಲ್ವೆ ಜಾಲದ ಏಕೀಕರಣದಿಂದ ಆಡಳಿತಾತ್ಮಕ ಗೊಂದಲಗಳು ನಿವಾರಣೆಯಾಗಲಿದ್ದು, ರೈಲ್ವೆ ಇಲಾಖೆಗಳ ನಡುವಿನ ಸಮನ್ವಯತೆ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ. ಇದರ ಪರಿಣಾಮವಾಗಿ ಪ್ರಯಾಣಿಕರ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸುವುದರ ಜೊತೆಗೆ, ಕರಾವಳಿ ಭಾಗದಲ್ಲಿ ರೈಲ್ವೆ ಮೂಲಸೌಕರ್ಯ ವಿಸ್ತರಣೆ ಹಾಗೂ ಸಂಪರ್ಕ ಅಭಿವೃದ್ಧಿಗೆ ವೇಗ ದೊರೆಯಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಮಂಗಳೂರಿನ ರೈಲ್ವೆ ಸಂಬಂಧಿತ ಸಮಸ್ಯೆಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಗೆಹರಿಸಲು ಹಾಗೂ ರೈಲ್ವೆ ಸೇವೆಗಳನ್ನು ಅಭಿವೃದ್ಧಿಯ ಹಾದಿಯಲ್ಲಿ ವೇಗವಾಗಿ ಮುನ್ನಡೆಸಲು ಈ ನಿರ್ಧಾರ ನೆರವಾಗಲಿದೆ ಎಂದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿಪ್ರಾಯಪಟ್ಟಿದ್ದಾರೆ.
ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನತೆಯ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುವುದಾಗಿ ಅವರು ತಿಳಿಸಿದ್ದಾರೆ.
ಮಂಗಳೂರು ರೈಲ್ವೆ ಜಾಲದ ಏಕೀಕರಣವು ಕರಾವಳಿ ಭಾಗದ ರೈಲ್ವೆ ಸಂಪರ್ಕ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
