ಪ್ರದೀಪ್ ಪೂಜಾರಿ ಸಾವಿನ ಪ್ರಕರಣ: ನ್ಯಾಯಕ್ಕಾಗಿ ನ. 4ರಂದು ಉಡುಪಿಯಲ್ಲಿ ಬೃಹತ್ ಜನಾಗ್ರಹ ಪ್ರತಿಭಟನೆ
ಉಡುಪಿ: ಹಿರಿಯಡ್ಕದ ಪ್ರದೀಪ್ ಪೂಜಾರಿ ಅವರ ಸಾವಿನ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹಾಗೂ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಖಂಡಿಸಿ ನವೆಂಬರ್ 4ರಂದು ಉಡುಪಿಯಲ್ಲಿ ಬೃಹತ್ ಜನಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಉಡುಪಿ: ಹಿರಿಯಡ್ಕದ ಪ್ರದೀಪ್ ಪೂಜಾರಿ ಅವರ ಸಾವಿನ ಪ್ರಕರಣದಲ್ಲಿ ನ್ಯಾಯ ಒದಗಿಸುವಂತೆ ಆಗ್ರಹಿಸಿ ಹಾಗೂ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಖಂಡಿಸಿ ನವೆಂಬರ್ 4ರಂದು ಉಡುಪಿಯಲ್ಲಿ ಬೃಹತ್ ಜನಾಗ್ರಹ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ನೇತೃತ್ವದಲ್ಲಿ ವಿವಿಧ ಸಮಾಜಮುಖಿ ಸಂಘಟನೆಗಳು, ಹೋರಾಟಗಾರರು ಹಾಗೂ ನ್ಯಾಯಪರ ಚಿಂತಕರ ಸಹಭಾಗಿತ್ವದಲ್ಲಿ ಈ ಪಕ್ಷಾತೀತ ಪ್ರತಿಭಟನೆ ನಡೆಯಲಿದೆ.
ಪ್ರದೀಪ್ ಪೂಜಾರಿ ಪ್ರಕರಣದಲ್ಲಿ ಕರ್ತವ್ಯ ಲೋಪದ ಆರೋಪ ಎದುರಿಸುತ್ತಿರುವ ಹಿರಿಯಡ್ಕ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಅಮಾನತುಗೊಳಿಸುವ ಬದಲು ವರ್ಗಾವಣೆ ಮಾಡಿರುವ ಕ್ರಮಕ್ಕೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಿಡುಗಡೆಗೊಳಿಸಿದ ವಿಡಿಯೋ ಮಾಹಿತಿಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ರಾಜ್ಯ ಸರ್ಕಾರದ ಉನ್ನತ ಮಟ್ಟದ ತನಿಖಾ ಸಂಸ್ಥೆಯಾದ ಸಿಐಡಿಗೆ ವಹಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಆಗ್ರಹವಾಗಿದೆ.
ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಅಡ್ಡಿಪಡಿಸುವ ಪ್ರಯತ್ನಗಳನ್ನು ಖಂಡಿಸುವುದರ ಜೊತೆಗೆ ಸಾಮಾಜಿಕ ನ್ಯಾಯದ ಪರವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಈ ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದ್ದಾರೆ.
ಪ್ರತಿಭಟನೆಯ ವಿವರ:
- ದಿನಾಂಕ: ನವೆಂಬರ್ 4, 2026, ಬುಧವಾರ
- ಸಮಯ: ಬೆಳಗ್ಗೆ 10 ಗಂಟೆ
- ಸ್ಥಳ: ಜಿಲ್ಲಾಧಿಕಾರಿ ಕಚೇರಿ ಸಮೀಪ, ರಜತಾದ್ರಿ, ಮಣಿಪಾಲ, ಉಡುಪಿ
- ನೇತೃತ್ವ: ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಹಾಗೂ ಸಹಭಾಗಿ ಸಂಘಟನೆಗಳು
ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿರುವ ಸಮಾಜ ಬಾಂಧವರು, ಯುವಕರು, ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ನ್ಯಾಯಪರ ಹೋರಾಟಗಾರರು ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನ್ಯಾಯದ ಹೋರಾಟಕ್ಕೆ ಕೈಜೋಡಿಸುವಂತೆ ಪ್ರವೀಣ್ ಎಂ. ಪೂಜಾರಿ ಮನವಿ ಮಾಡಿದ್ದಾರೆ.
“ನಮ್ಮ ಹೋರಾಟ ಅನ್ಯಾಯದ ವಿರುದ್ಧ, ನಮ್ಮ ಆಗ್ರಹ ನ್ಯಾಯಕ್ಕಾಗಿ. ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲದು” ಎಂಬ ಸಂದೇಶದೊಂದಿಗೆ ಪ್ರತಿಭಟನೆಗೆ ಕರೆ ನೀಡಲಾಗಿದೆ.
