ತಾಯಿ ಮತ್ತು ಮಗಳು ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ: ರತ್ನಮಾಲಾ ಹಾಗೂ ಡಾ. ಐಶ್ವರ್ಯಾ ಎಸ್. ಸುವರ್ಣ
ಮಣಿಪಾಲ: ತಾಯಿ ಮತ್ತು ಮಗಳು ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ ಗಳಿಸಿರುವುದು ವಿಶೇಷ ಸಾಧನೆಯಾಗಿದೆ. ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ

ಮಣಿಪಾಲ: ತಾಯಿ ಮತ್ತು ಮಗಳು ಒಂದೇ ದಿನ ಪಿಎಚ್.ಡಿ. ಪದವಿಗೆ ಅರ್ಹತೆ ಗಳಿಸಿರುವುದು ವಿಶೇಷ ಸಾಧನೆಯಾಗಿದೆ. ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಶ್ರೀಮತಿ ಡಾ. ರತ್ನಮಾಲಾ ಸುಧಾಕರ ಸುವರ್ಣ ಹಾಗೂ ಅವರ ಪುತ್ರಿ ಡಾ. ಐಶ್ವರ್ಯಾ ಎಸ್. ಸುವರ್ಣ ಅವರು ಡಾಕ್ಟರೇಟ್ ಪದವಿ ಪಡೆದಿದ್ದು, ಇವರ ಸಾಧನೆಗೆ ಹಾರ್ದಿಕ ಅಭಿನಂದನೆಗಳು ವ್ಯಕ್ತವಾಗಿವೆ.
ಡಾ. ರತ್ನಮಾಲಾ ಅವರು ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದಲ್ಲಿ ಡಾ. ಸುರೇಶ್ ರೈ. ಕೆ. ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ಪುತ್ತಿ ವಸಂತಕುಮಾರ್ ಅವರ ಸಹಮಾರ್ಗದರ್ಶನದಲ್ಲಿ ‘ತುಳುನಾಡಿನ ಸ್ತ್ರೀ ದೈವಗಳ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಷಯದ ಕುರಿತು ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದಿದ್ದಾರೆ.
ಅವರ ಪುತ್ರಿ ಡಾ. ಐಶ್ವರ್ಯಾ ಎಸ್. ಸುವರ್ಣ ಅವರು ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (ಎನ್‌ಐಟಿಕೆ)ಯಲ್ಲಿ ಡಾ. ಎ. ಚಿತ್ತರಂಜನ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ರಸಾಯನಶಾಸ್ತ್ರ ವಿಭಾಗದಲ್ಲಿ ‘Development of Nickel Vanadium Alloy Coatings Through Different Approaches of Electroplating and Their Characterization’ ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸುವ ಮೂಲಕ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ತಾಯಿ ತುಳುನಾಡಿನ ಸ್ತ್ರೀ ದೈವಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಅಧ್ಯಯನದಲ್ಲಿ ಸಾಧನೆ ಮಾಡಿದ್ದರೆ, ಮಗಳು ರಸಾಯನಶಾಸ್ತ್ರದ ಸಂಶೋಧನಾ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವುದು ಗಮನಾರ್ಹವಾಗಿದೆ. ಒಂದೇ ದಿನ ತಾಯಿ ಮತ್ತು ಮಗಳು ಇಬ್ಬರೂ ಪಿಎಚ್.ಡಿ. ಪದವಿಗೆ ಅರ್ಹತೆ ಗಳಿಸಿರುವುದು ಕುಟುಂಬಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿಯೂ ವಿಶೇಷ ಸಾಧನೆಯಾಗಿ ಗುರುತಿಸಿಕೊಂಡಿದೆ.
ಈ ಸಾಧನೆಗಾಗಿ ಡಾ. ರತ್ನಮಾಲಾ ಹಾಗೂ ಡಾ. ಐಶ್ವರ್ಯಾ ಎಸ್. ಸುವರ್ಣ ಅವರಿಗೆ ಕುಟುಂಬಸ್ಥರು, ಹಿತೈಷಿಗಳು ಹಾಗೂ ಸ್ನೇಹಿತರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
