ಗಡಿನಾಡ ಕನ್ನಡ ಸಾಹಿತ್ಯ ಸಂಘದಿಂದ ನಾರಾಯಣ ಗುರು ಜಯಂತಿ ಸಂಭ್ರಮ
ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸಾಹಿತ್ಯ, ಗಾನ ಹಾಗೂ ನೃತ್ಯ ವೈಭವದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು...

ಕಾಸರಗೋಡು: ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಂಘ (ರಿ), ಕಾಸರಗೋಡು ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿಯನ್ನು ಸಾಹಿತ್ಯ, ಗಾನ ಹಾಗೂ ನೃತ್ಯ ವೈಭವದೊಂದಿಗೆ ಅದ್ದೂರಿಯಾಗಿ ಆಚರಿಸಲಾಯಿತು.
ಸಂಘದ 244ನೇ ಕಾರ್ಯಕ್ರಮವಾಗಿ ಆಯೋಜಿಸಲಾದ ಈ ಸಮಾರಂಭವು ಆಗಸ್ಟ್ 30, 2026ರಂದು ಸಂಜೆ 5 ಗಂಟೆಗೆ ಚೂರಿಪ್ಪಳ್ಳ ನೆಲ್ಲಿಕಟ್ಟೆಯ ಪ್ರಕೃತಿ ಆಯುರ್ವೇದ ಚಿಕಿತ್ಸಾಲಯದ ಶ್ರೀಗಿರಿ ಸದನದ ಶಿವದುರ್ಗಾ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಡಾ. ವಾಣಿಶ್ರೀ ಕಾಸರಗೋಡು, ಕೇರಳದಲ್ಲಿ ಜಾತಿ-ಮತ ಭೇದ ಹಾಗೂ ಅಸ್ಪೃಶ್ಯತೆ ತೀವ್ರವಾಗಿದ್ದ ಕಾಲಘಟ್ಟದಲ್ಲಿ “ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು” ಎಂಬ ಸಮಾನತೆಯ ಸಂದೇಶ ಸಾರಿದ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು ಸಮಾಜ ಸುಧಾರಣೆಯ ಮಹಾನ್ ದಾರಿದೀಪರಾಗಿದ್ದಾರೆ ಎಂದು ಹೇಳಿದರು.
ಸಂಸ್ಕೃತ ಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು “ಜಾತಿಯನ್ನು ಕೇಳಬೇಡಿ, ಜಾತಿಯನ್ನು ಹೇಳಬೇಡಿ, ಜಾತಿಯನ್ನು ಮಾಡಬೇಡಿ” ಎಂಬ ಸಂದೇಶದ ಮೂಲಕ ಮಾನವೀಯ ಮೌಲ್ಯಗಳನ್ನು ಬೋಧಿಸಿದ್ದಾರೆ. “ವಿದ್ಯೆಯಿಂದ ಪ್ರಬುದ್ಧರಾಗಿ, ಸಂಘಟನೆಯಿಂದ ಬಲಶಾಲಿಗಳಾಗಿ” ಎಂಬ ಅವರ ತತ್ವಸಿದ್ಧಾಂತಗಳನ್ನು ಯುವಪೀಳಿಗೆಗೆ ಪರಿಚಯಿಸುವುದು ಹಾಗೂ ಅದರ ಮೂಲಕ ಸುಸಂಸ್ಕೃತ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂಘದ ಕೋಶಾಧಿಕಾರಿ ಡಾ. ವೆಂಕಟಗಿರೀಶ್ ಮಾತನಾಡಿ, ನಾರಾಯಣ ಗುರುಗಳ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಸುರೇಶ್ ಉಡುಪಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಮಾರ್ಗದರ್ಶನ ನೀಡಿ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಾದ ಆರಾಧ್ಯ, ಶ್ರೇಯ, ಬಾಲಕೃಷ್ಣ, ಪ್ರಜ್ವಲ್ ಸೇರಿದಂತೆ ಹಲವರಿಂದ ಸಾಹಿತ್ಯ, ಗಾನ ಹಾಗೂ ನೃತ್ಯ ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಲಾವಿದರನ್ನು ಪುಸ್ತಕ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಣ್ಯರು, ಸಾಹಿತ್ಯಾಸಕ್ತರು ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದು, ನಾರಾಯಣ ಗುರುಗಳ ಸಂದೇಶಗಳನ್ನು ಸ್ಮರಿಸಿದರು.
