“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ನಾರಾಯಣ ಗುರುಗಳ ಸಂದೇಶ ಭಾವನಾತ್ಮಕವಾಗಿ ಆಕರ್ಷಕವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಸವಾಲಿನ ಸಂಗತಿ: ಹರೀಶ್ ಕೆ. ಸುವರ್ಣ
ನಾರಾಯಣ ಗುರುಗಳು ಸಂಘಟನೆಯ ಮೂಲಕ ಬಲಯುತರಾಗಿರಿ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ ಇಂದು ಅನೇಕರು ಗುರುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರೂ ಅವರ ತತ್ವಾದರ್ಶಗಳನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ.

ಮಂಗಳೂರು, ಸೆ. 4: ನಾರಾಯಣ ಗುರುಗಳ ತತ್ವಾದರ್ಶಗಳನ್ನು ಕೇವಲ ಪೂಜೆ ಮತ್ತು ಭಾವನಾತ್ಮಕ ಸಂದೇಶಗಳಿಗೆ ಸೀಮಿತಗೊಳಿಸದೆ, ಅವುಗಳ ಮೂಲ ಅದ್ವೈತ ತತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಹೇಳಿದರು.
ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಸೆ. 1ರಂದು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ನಾರಾಯಣ ಗುರುಗಳ ಸಂದೇಶ ಭಾವನಾತ್ಮಕವಾಗಿ ಆಕರ್ಷಕವಾಗಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವುದು ಸವಾಲಿನ ಸಂಗತಿಯಾಗಿದೆ. ಬಿಲ್ಲವ ಸಮಾಜದಲ್ಲಿ ಬಾಹ್ಯವಾಗಿ ವ್ಯವಸ್ಥಿತ ಸಂಘಟನೆಗಳು ಕಂಡುಬಂದರೂ ಅಂತರ್ಯದಲ್ಲಿ ಇನ್ನಷ್ಟು ಸಂಘಟಿತರಾಗಬೇಕಿದೆ. ವಿವಿಧ ಸಂಘಟನೆಗಳು ಸ್ವಾರ್ಥ ಮನೋಭಾವವನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಮಾಜ ಮತ್ತಷ್ಟು ಬಲಿಷ್ಠವಾಗಲು ಸಾಧ್ಯ ಎಂದು ಅವರು ಹೇಳಿದರು.

ನಾರಾಯಣ ಗುರುಗಳು ಸಂಘಟನೆಯ ಮೂಲಕ ಬಲಯುತರಾಗಿರಿ ಎಂಬ ಸಂದೇಶವನ್ನು ಸಾರಿದ್ದಾರೆ. ಆದರೆ ಇಂದು ಅನೇಕರು ಗುರುಗಳಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದರೂ ಅವರ ತತ್ವಾದರ್ಶಗಳನ್ನು ಸಂಪೂರ್ಣವಾಗಿ ಪಾಲಿಸುವಲ್ಲಿ ಹಿಂದೆ ಬೀಳುತ್ತಿದ್ದಾರೆ. ಇತರ ಸಮಾಜಗಳ ಸಂಘಟನೆಗಳಲ್ಲಿರುವ ಹೊಂದಾಣಿಕೆ ಮತ್ತು ಒಗ್ಗಟ್ಟು ನಮ್ಮಲ್ಲಿಯೂ ಬೆಳೆಸಿಕೊಳ್ಳಬೇಕು. ಎಲ್ಲರೂ ಜೊತೆಯಾಗಿ ಕಾರ್ಯನಿರ್ವಹಿಸುವುದೇ ತಮ್ಮ ಮೂಲ ಉದ್ದೇಶವಾಗಿದೆ ಎಂದು ಹರೀಶ್ ಕೆ. ಸುವರ್ಣ ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರಿನ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಲೋಹಿತ್ ರೆಂಜಳ, ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕ ಗೋಪಾಲ ಪೂಜಾರಿ ಭಾಗವಹಿಸಿದರು. ಮಂಗಳೂರು ಘಟಕದ ಕಾರ್ಯದರ್ಶಿ ಉಪಾ.ಕೆ ಉಪಸ್ಥಿತರಿದ್ದರು.
