ನಾರಾಯಣ ಗುರುಗಳ ಮೌನಕ್ರಾಂತಿ ಸಮಾಜ ಪರಿವರ್ತನೆಗೆ ದಾರಿದೀಪ, ನಾರಾಯಣ ಗುರುಗಳದ್ದು ಸಮಾಜ ಕಟ್ಟುವಲ್ಲಿ ರಕ್ತಕ್ರಾಂತಿಯ ದಾರಿಯಲ್ಲ, ಅವರದ್ದು ಮೌನಕ್ರಾಂತಿ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ
ನಾರಾಯಣ ಗುರುಗಳ ಮೌನಕ್ರಾಂತಿ ಸಮಾಜ ಪರಿವರ್ತನೆಗೆ ದಾರಿದೀಪ, ನಾರಾಯಣ ಗುರುಗಳದ್ದು ಸಮಾಜ ಕಟ್ಟುವಲ್ಲಿ ರಕ್ತಕ್ರಾಂತಿಯ ದಾರಿಯಲ್ಲ, ಅವರದ್ದು ಮೌನಕ್ರಾಂತಿ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ

ಬೆಂಗಳೂರು: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಜಿಲ್ಲಾ ಹಾಗೂ ತಾಲೂಕು ಆಡಳಿತಗಳ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ತತ್ವಗಳು, ಜಾತ್ಯತೀತ ಸಮಾಜದ ಸಂದೇಶ ಹಾಗೂ ಶೈಕ್ಷಣಿಕ ಚಿಂತನೆಗಳನ್ನು ಸಾರುವ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾತನಾಡಿ, “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ” ಎಂಬ ನಾರಾಯಣ ಗುರುಗಳ ಸಂದೇಶ ಇಂದಿನ ಕಾಲಘಟ್ಟದಲ್ಲೂ ಅತ್ಯಂತ ಪ್ರಸ್ತುತವಾಗಿದೆ ಎಂದು ಹೇಳಿದರು.

“ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದಲೇ ನಾನು ಶಿಕ್ಷಣ ಖಾತೆಯನ್ನು ಆಯ್ಕೆ ಮಾಡಿಕೊಂಡೆ. ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ಮನುಷ್ಯನನ್ನು ಸ್ವಾಭಿಮಾನಿ, ವಿವೇಕವಂತ ಹಾಗೂ ಸ್ವತಂತ್ರ ಚಿಂತನೆಯ ವ್ಯಕ್ತಿಯನ್ನಾಗಿ ರೂಪಿಸುವ ಶಕ್ತಿ,” ಎಂದು ಅವರು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ತಮ್ಮಂತಹವರಿಗೆ ನಾರಾಯಣ ಗುರುಗಳ ಚಿಂತನೆಗಳು ವಿಶೇಷ ಪ್ರೇರಣೆಯಾಗಿವೆ ಎಂದ ಸಚಿವರು, “ಮಕ್ಕಳ ಕೆಲಸವೇ ದೇವರ ಕೆಲಸ; ಅದೇ ನಾರಾಯಣ ಗುರುಗಳಿಗೆ ಸಲ್ಲಿಸುವ ನಿಜವಾದ ಸೇವೆ” ಎಂಬ ನಂಬಿಕೆ ತಮ್ಮದಾಗಿದೆ ಎಂದು ತಿಳಿಸಿದರು.
ರಾಜ್ಯದ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ಹೆಮ್ಮೆಯ ಜೊತೆಗೆ ದೊಡ್ಡ ಜವಾಬ್ದಾರಿಯೂ ಆಗಿದೆ. ನಾರಾಯಣ ಗುರುಗಳು ಕಂಡ ಸಮಾನತೆಯ ಸಮಾಜದ ಕನಸನ್ನು ನನಸಾಗಿಸಲು ಶಿಕ್ಷಣವೇ ಅತ್ಯಂತ ಶಕ್ತಿಶಾಲಿ ಸಾಧನವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ತಮ್ಮ ತಂದೆ ಬಂಗಾರಪ್ಪ ಹಾಗೂ ವರನಟ ಡಾ. ರಾಜ್‌ಕುಮಾರ್ ಅವರು ತಮ್ಮ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದು ಸ್ಮರಿಸಿದ ಮಧು ಬಂಗಾರಪ್ಪ, ಅಣ್ಣನ ಸಮಾನರಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವನಾಗಿ ಕಾರ್ಯನಿರ್ವಹಿಸುತ್ತಿರುವುದು ತಮ್ಮ ಭಾಗ್ಯ ಎಂದರು. ಇದೇ ವೇಳೆ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ಸಮುದಾಯಕ್ಕೆ ಆರ್ಥಿಕವಾಗಿ ಮತ್ತಷ್ಟು ಶಕ್ತಿ ತುಂಬುವಂತೆ ಮನವಿ ಮಾಡಿದರು.

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಯೋಗೀಶ ಕೈರೋಡಿ ಅವರು ವಿಶೇಷ ಉಪನ್ಯಾಸ - “ನಾರಾಯಣ ಗುರುಗಳದ್ದು ಸಮಾಜ ಕಟ್ಟುವಲ್ಲಿ ರಕ್ತಕ್ರಾಂತಿಯ ದಾರಿಯಲ್ಲ, ಅವರದ್ದು ಮೌನಕ್ರಾಂತಿ. ಯಾರನ್ನೂ ಟೀಕಿಸುತ್ತಾ ಕಾಲ ಕಳೆಯಲಿಲ್ಲ. ಸ್ವತಃ ಆಧ್ಯಾತ್ಮಿಕ ಸಾಧನೆ ಮಾಡಿ ಕಲುಷಿತ ವ್ಯವಸ್ಥೆಯನ್ನು ಶುದ್ಧೀಕರಿಸಿದ ಮಹಾ ಗುರು. ದೇವಾಲಯ ಮತ್ತು ದೇವರ ಪ್ರತಿಷ್ಠೆ ಅವರ ಸಾಮಾಜಿಕ ಕೊಡುಗೆಯ ಪ್ರಾಥಮಿಕ ಹಂತ ಮಾತ್ರ. ಶಿಕ್ಷಣ ಮತ್ತು ಸ್ವ ಉದ್ಯೋಗ ಅವರ ಮಹಾ ಧ್ಯೇಯ. ಆರಾಧನೆಯ ಜೊತೆಗೆ ಅವರ ಆಶಯದ ದಾರಿಯಲ್ಲಿ ನಡೆಯುವುದು ಗುರುಗಳಿಗೆ ನೀಡುವ ದೊಡ್ಡ ಗೌರವ. ಅನುಷ್ಠಾನವೇ ಆರಾಧನೆಯಾಗಲಿ,” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ನಿಟ್ಟೂರಿನ ನಾರಾಯಣಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿ, ಸಂಡೂರಿನ ಮಹಾಕಾಳಿ ಓಂ ಶಕ್ತಿ ಪೀಠದ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ, ಸಾರಗನಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತ ಶ್ರೀಗಳು, ಹಜಲಾಫುರ ಬಲಭೀಮಸೇನ ದೇವಸ್ಥಾನದ ಶ್ರೀ ಶಂಕರಪ್ಪ ಸ್ವಾಮೀಜಿ, ಸೈದಾಪುರ ಬಾಲಯೋಗಿ ರಾಜೇಂದ್ರ ಮಠದ ಶ್ರೀ ಅನುಷ್ಠಾನಮೂರ್ತಿ ಭೀಮಾಶಂಕರ ಶರಣ ಸ್ವಾಮೀಜಿ ಉಪಸ್ಥಿತರಿದ್ದರು.
ಸಚಿವರಾದ ಶ್ರೀ ಶಿವರಾಜ ತಂಗಡಗಿ, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಬಿ.ಕೆ. ಹರಿಪ್ರಸಾದ್, ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ, ಬಿಲ್ಲವ ಅಸೋಸಿಯೇಷನ್ ಅಧ್ಯಕ್ಷ ಎಂ. ವೇದಕುಮಾರ್, ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ ಸೇರಿದಂತೆ ಸಮಾಜದ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

