Skip to content
Billava News

ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೈಜೋಡಿಸಲಿ: ಹರೀಶ್ ಜಿ. ಅಮೀನ್

“ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವ ಸಂದೇಶಗಳು ಹಾಗೂ ಸಮಾನತೆಯ ಆದರ್ಶಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸದಾ ದಾರಿದೀಪ. ಸಂಸ್ಥೆಯು ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಶಿಕ್ಷಣ ಸಂಸ್ಥೆಯ ನಿರ್ಮಾಣ ಯೋಜನೆಗೆ ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು”

By Billavavani
ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಸಮಾಜ ಬಾಂಧವರು ಒಗ್ಗಟ್ಟಿನಿಂದ ಕೈಜೋಡಿಸಲಿ: ಹರೀಶ್ ಜಿ. ಅಮೀನ್

ಮುಂಬೈ: ಕಲ್ವಾ ಪಶ್ಚಿಮದ ಖಾರೇಗಾವ್ ಎಂ.ಪಿ. ರೋಡ್, ರೇತಿಬಂದರ್ ನಾಕಾ ಸಮೀಪದ ಪಾರ್ಸಿಕ್ ನಗರದಲ್ಲಿರುವ ಹೋಟೆಲ್ ಅಮಿತ್ ಗಾರ್ಡನ್ ಸಭಾಂಗಣದಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬೈ ಕಲ್ವಾ ಸ್ಥಳೀಯ ಕಚೇರಿ ವತಿಯಿಂದ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ನಡೆಯಿತು.

“ಮಹಾನ್ ಸಮಾಜ ಸುಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಶ್ವಮಾನವ ಸಂದೇಶಗಳು ಹಾಗೂ ಸಮಾನತೆಯ ಆದರ್ಶಗಳು ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸದಾ ದಾರಿದೀಪ. ಸಂಸ್ಥೆಯು ಕೈಗೆತ್ತಿಕೊಂಡಿರುವ ಮಹತ್ವಾಕಾಂಕ್ಷೆಯ ಶಿಕ್ಷಣ ಸಂಸ್ಥೆಯ ನಿರ್ಮಾಣ ಯೋಜನೆಗೆ ಸಮಾಜ ಬಾಂಧವರೆಲ್ಲರೂ ಒಗ್ಗಟ್ಟಿನಿಂದ ಕೈಜೋಡಿಸಬೇಕು” ಎಂದು ಬಿಲ್ಲವರ ಅಸೋಸಿಯೇಷನ್ ಮುಂಬೈ ಅಧ್ಯಕ್ಷ ಹರೀಶ್ ಜಿ. ಅಮೀನ್‌ ಕರೆ ನೀಡಿದರು.

ಮುಂದಿನ ದಿನಗಳಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆ ಹಾಗೂ ಸಮುದಾಯ ಭವನ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಂಸ್ಥೆ ಹೊಂದಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಜಾಗ ಹಾಗೂ ಅನುದಾನ ಕ್ರೋಡೀಕರಣಕ್ಕೆ ಚಾಲನೆ ನೀಡಲಾಗಿದೆ. ಈ ಮಹತ್ವದ ಯೋಜನೆಯನ್ನು ಸಾಕಾರಗೊಳಿಸಲು ಸಮಾಜದ ಪ್ರತಿಯೊಬ್ಬರೂ ತನು-ಮನ-ಧನದಿಂದ ಸಹಕರಿಸಬೇಕು ಎಂದು ಹರೀಶ್ ಜಿ. ಅಮೀನ್ ಮನವಿ ಮಾಡಿದರು.

WhatsApp Image 2026-09-15 at 8.47.49 AM.jpeg

ಸಮಾರಂಭದಲ್ಲಿ ಸಂಸ್ಥೆಯ ಹಿರಿಯ ಕೋಶಾಧಿಕಾರಿ ಆನಂದ್ ಬಂಗೇರ ದಂಪತಿ, ಉಪ ಕಾರ್ಯಾಧ್ಯಕ್ಷ ಉಮೇಶ್ ಟಿ. ಕರ್ಕೇರ ದಂಪತಿ, ಅರ್ಚಕ ಪ್ರವೀಣ್ ಸಾಲ್ಯಾನ್ ದಂಪತಿ, ಕಾರ್ಯಕರ್ತೆ ಲೀಲಾ ಕರುಣಾಕರ್ ಪೂಜಾರಿ ದಂಪತಿ ಹಾಗೂ ಹಿರಿಯ ಕಾರ್ಯಕರ್ತೆ ರುಕ್ಮಿಣಿ ಪೂಜಾರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಮಾತನಾಡಿ, ಹರೀಶ್ ಡಿ. ಸಾಲ್ಯಾನ್ ಅವರ ಸಂಘಟನಾ ಚಾತುರ್ಯ ಹಾಗೂ ಕಲ್ವಾ ಸ್ಥಳೀಯ ಸಮಿತಿಯ ಸಮಾಜಮುಖಿ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಠಾಣೆ ಹೋಟೆಲ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೊಲ್ಯ ಉಮೇಶ್ ಶೆಟ್ಟಿ ಮಾತನಾಡಿ, ನಾರಾಯಣ ಗುರುಗಳ ಚಿಂತನೆಗಳು ಸರ್ವಕಾಲಿಕವಾಗಿದ್ದು, ಸಾಮಾಜಿಕ ಸಾಮರಸ್ಯ ಮತ್ತು ಸಮಾಜ ಜಾಗೃತಿಯಲ್ಲಿ ಬಿಲ್ಲವರ ಅಸೋಸಿಯೇಷನ್‌ನಂತಹ ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ ಎಂದರು.

ಜಯಂತ್ಯುತ್ಸವದ ಅಂಗವಾಗಿ ಮುಂಜಾನೆ ದೀಪ ಪ್ರಜ್ವಲನೆಯ ಬಳಿಕ ಅರ್ಚಕರಾದ ಕರುಣಾಕರ್ ಸಿ. ಬಂಗೇರ, ಸಂತೋಷ್ ಎಸ್. ಸುವರ್ಣ ಹಾಗೂ ಪ್ರವೀಣ್ ಸಾಲ್ಯಾನ್ ಅವರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಗುರುಪೂಜೆ, ಗುರು ಸ್ತೋತ್ರ ಪಠಣ ಹಾಗೂ ಪುಣ್ಯವಾಚನ ಶಾಸ್ತ್ರೋಕ್ತವಾಗಿ ನೆರವೇರಿತು.

ಭಕ್ತಾದಿಗಳಿಂದ ಭಜನಾ ಸಂಕೀರ್ತನೆ ಹಾಗೂ ಕುಣಿತ ಭಜನೆ ನಡೆಯಿತು. ಮಧ್ಯಾಹ್ನ ಮಹಾಮಂಗಳಾರತಿಯ ಬಳಿಕ ತೀರ್ಥ ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಕಾರ್ಯಕ್ರಮದಲ್ಲಿ ಠಾಣೆಯ ಮಾಜಿ ಮೇಯರ್ ಹಾಗೂ ನಗರಸೇವಕಿ ಮೀನಾಕ್ಷಿ ಶಿಂದೆ, ರಘುರಾಮ್ ರಾಯ್, ವಿಹಾಂಗ್ ರತ್ನಾಕರ್ ಶೆಟ್ಟಿ, ಉದ್ಯಮಿ ಮೋಹನ್ ಗೌಡ, ಬಿಲ್ಲವರ ಅಸೋಸಿಯೇಷನ್ ಮುಂಬೈ ಉಪಾಧ್ಯಕ್ಷ ಹಾಗೂ ಕೇಂದ್ರ ಕಚೇರಿ ಉಸ್ತುವಾರಿ ಪುರುಷೋತ್ತಮ ಎಸ್. ಕೋಟ್ಯಾನ್, ಉಪಾಧ್ಯಕ್ಷ ಕೆ. ಸುರೇಶ್ ಕುಮಾರ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್, ಯುವಾಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷ ನೀಲೇಶ್ ಪೂಜಾರಿ ಪಲಿಮಾರ್, ಸಾಮಾಜಿಕ ಮತ್ತು ಧಾರ್ಮಿಕ ಉಪಸಮಿತಿಯ ಕಾರ್ಯಾಧ್ಯಕ್ಷ ಧರ್ಮಪಾಲ್ ಜಿ. ಅಂಚನ್, ಗೌರವ ಕಾರ್ಯದರ್ಶಿ ಸದಾಶಿವ್ ವೈ. ಕೋಟ್ಯಾನ್, ಮಾಜಿ ಉಪಾಧ್ಯಕ್ಷ ರಾಜ ವಿ. ಸಾಲ್ಯಾನ್ ಸೇರಿದಂತೆ ವಿವಿಧ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗೌರವ ಪ್ರಧಾನ ಕೋಶಾಧಿಕಾರಿ ರವಿ ಎಸ್. ಸನಿಲ್ ನಿರೂಪಿಸಿದರು.

ಜಯಂತ್ಯುತ್ಸವದ ಯಶಸ್ಸಿಗೆ ಕಲ್ವಾ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರಾದ ಬಿ.ಸಿ. ಅಮೀನ್ ಹಾಗೂ ಆರ್.ಕೆ. ಅಮೀನ್, ಗೌರವ ಕಾರ್ಯದರ್ಶಿ ಮಮತಾ ಎಂ. ಅಮೀನ್, ಜೊತೆ ಕಾರ್ಯದರ್ಶಿ ಪ್ರಕಾಶ್ ಜಿ. ಪೂಜಾರಿ, ಜೊತೆ ಕೋಶಾಧಿಕಾರಿ ಸುಕನ್ಯಾ ಸಿ. ಪೂಜಾರಿ, ಸ್ಥಳೀಯ ಸಮಿತಿ ಸದಸ್ಯ ವಿಕಾಸ್ ಸೇರಿದಂತೆ ಮಹಿಳಾ ಮತ್ತು ಯುವ ವಿಭಾಗದ ಸದಸ್ಯರು ಸಹಕರಿಸಿದರು.