ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಒಮಾನ್ ಬಿಲ್ಲವಾಸ್ ಕೂಟದ ಅಧ್ಯಕ್ಷ ಉಮೇಶ್ ಬಂಟ್ವಾಳ್ ಭೇಟಿ – ಅನ್ನಛತ್ರ ನಿರ್ಮಾಣಕ್ಕೆ ಕೂಟದಿಂದ ಸ್ಥಳದಾನ
ಕೊಲ್ಲಿ ರಾಷ್ಟ್ರ ಒಮಾನ್ನ ಮಸ್ಕತ್ನಲ್ಲಿರುವ ಒಮಾನ್ ಬಿಲ್ಲವಾಸ್ ಕೂಟದ ಅಧ್ಯಕ್ಷರಾದ ಶ್ರೀ ಉಮೇಶ್ ಬಂಟ್ವಾಳ್ ಅವರು ಇಂದು ದೇಯಿ ಬೈದೆತಿ–ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ, ಕ್ಷೇತ್ರದ ಶಕ್ತಿ ಸಾನಿಧ್ಯಗಳ ದರ್ಶನ ಪಡೆದು ಪುನೀತರಾದರು.

ಗೆಜ್ಜೆಗಿರಿ, ನ. 3: ಕೊಲ್ಲಿ ರಾಷ್ಟ್ರ ಒಮಾನ್ನ ಮಸ್ಕತ್ನಲ್ಲಿರುವ ಒಮಾನ್ ಬಿಲ್ಲವಾಸ್ ಕೂಟದ ಅಧ್ಯಕ್ಷರಾದ ಶ್ರೀ ಉಮೇಶ್ ಬಂಟ್ವಾಳ್ ಅವರು ಇಂದು ದೇಯಿ ಬೈದೆತಿ–ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ, ಕ್ಷೇತ್ರದ ಶಕ್ತಿ ಸಾನಿಧ್ಯಗಳ ದರ್ಶನ ಪಡೆದು ಪುನೀತರಾದರು.
ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಿಸಿದ ಅವರು ಸಂತಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ರವಿ ಪೂಜಾರಿ ಚಿಲಿಂಬಿ ಅವರು ಕ್ಷೇತ್ರದ ಗೌರವಾನ್ವಿತ ಪದಾಧಿಕಾರಿಗಳು ಹಾಗೂ ಟ್ರಸ್ಟಿಗಳ ಸಮ್ಮುಖದಲ್ಲಿ ಉಮೇಶ್ ಬಂಟ್ವಾಳ್ ಅವರಿಗೆ ಶಾಲು ಹೊದಿಸಿ, ಕ್ಷೇತ್ರದ ಶಕ್ತಿ ಸಾನಿಧ್ಯಗಳ ಪ್ರಸಾದ ನೀಡಿ ಗೌರವಿಸಿದರು.
ಅನ್ನಛತ್ರ ನಿರ್ಮಾಣಕ್ಕೆ ಒಮಾನ್ ಬಿಲ್ಲವಾಸ್ ಕೂಟದಿಂದ ಸ್ಥಳದಾನ
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸತ್ಯ ಧರ್ಮ ಚಾವಡಿಯ ಮುಂಭಾಗದಲ್ಲಿ ನಿರ್ಮಾಣಗೊಳ್ಳಲಿರುವ ಅನ್ನಛತ್ರದ ಪುಣ್ಯ ಕಾರ್ಯಕ್ಕೆ ಒಮಾನ್ ಬಿಲ್ಲವಾಸ್ ಕೂಟವು ಸ್ಥಳದಾನ (ಭೂದಾನ) ಮಾಡುವ ಮೂಲಕ ಮಹತ್ವದ ಕೊಡುಗೆ ನೀಡಿದೆ. ಕೂಟದ ಅಧ್ಯಕ್ಷ ಉಮೇಶ್ ಬಂಟ್ವಾಳ್ ಅವರ ನೇತೃತ್ವದಲ್ಲಿ ಈ ಸೇವಾ ಕಾರ್ಯ ನೆರವೇರಿದೆ.
ಈ ಮಹತ್ಕಾರ್ಯದ ಸಂಪೂರ್ಣ ಶ್ರೇಯಸ್ಸು ಒಮಾನ್ ಬಿಲ್ಲವಾಸ್ ಕೂಟ ಹಾಗೂ ಅದರ ಸರ್ವ ಸದಸ್ಯರಿಗೆ ಸಲ್ಲುತ್ತದೆ. ಸ್ಥಳದಾನ ಮಾಡಿದ ಕೂಟದ ಹೆಸರು ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ಅಲ್ಲದೆ, ಅನ್ನಛತ್ರ ನಿರ್ಮಾಣದ ಪುಣ್ಯ ಕಾರ್ಯಕ್ಕೆ ಕೂಟದ ಸದಸ್ಯರು ಯಥಾಶಕ್ತಿ, ಯಥಾಭಕ್ತಿಯಿಂದ ಸಹಕಾರ ನೀಡುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.
ಧೂಮಾವತಿ ದೈವಸ್ಥಾನದ ನಿರ್ಮಾಣದಲ್ಲೂ ಒಮಾನ್ ಕೂಟದ ಮಹತ್ವದ ಸೇವೆ
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುನರುತ್ಥಾನ ಹಾಗೂ ನಿರ್ಮಾಣದ ಆರಂಭಿಕ ಹಂತದಲ್ಲಿಯೂ ಒಮಾನ್ ಬಿಲ್ಲವಾಸ್ ಕೂಟ ಮಹತ್ವದ ಸೇವೆ ಸಲ್ಲಿಸಿತ್ತು. ಕೂಟದ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷರಾದ ಎಸ್.ಕೆ. ಪೂಜಾರಿ ಅವರ ಅಧ್ಯಕ್ಷತೆಯ ಅವಧಿಯಲ್ಲಿ ಕೂಟದ ವತಿಯಿಂದ ಸಂಪೂರ್ಣ ವೆಚ್ಚ ಭರಿಸಿ ಶ್ರೀ ಕ್ಷೇತ್ರದಲ್ಲಿ ಆದಿ ದೈವ ಧೂಮಾವತಿ ದೈವಸ್ಥಾನವನ್ನು ನಿರ್ಮಿಸಲಾಗಿತ್ತು. ಆ ಮೂಲಕ ಒಮಾನ್ ಬಿಲ್ಲವಾಸ್ ಕೂಟದ ಸೇವೆ ಶ್ರೀ ಕ್ಷೇತ್ರದ ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಾಗಿದೆ.
9ನೇ ವಾರ್ಷಿಕ ಮಹಾಸಭೆಯಲ್ಲಿ ಸೇವೆಗೆ ಶ್ಲಾಘನೆ
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆದ ಕ್ಷೇತ್ರಾಡಳಿತ ಸಮಿತಿಯ 9ನೇ ವಾರ್ಷಿಕ ಮಹಾಸಭೆಯಲ್ಲಿ ಒಮಾನ್ ಬಿಲ್ಲವಾಸ್ ಕೂಟವು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿರುವ ಅಮೂಲ್ಯ ಸೇವೆ ಹಾಗೂ ಕೊಡುಗೆಗಳನ್ನು ಸ್ಮರಿಸಿ ಶ್ಲಾಘಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಸ್ಥಾಪಕಾಧ್ಯಕ್ಷರಾದ ಕೆ. ಚಿತ್ತರಂಜನ್ ಕಂಕನಾಡಿ, ಗೌರವಾಧ್ಯಕ್ಷರಾದ ನಿವೃತ್ತ ಎಸ್.ಪಿ. ಪೀತಾಂಬರ ಹೆರಾಜೆ, ಜಯಂತ ನಡುಬೈಲು, ಡಾ. ರಾಜಶೇಖರ್ ಕೋಟ್ಯಾನ್, ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿರುವ ಸಂಜೀವ ಪೂಜಾರಿ, ಪ್ರಧಾನ ಕಾರ್ಯದರ್ಶಿ ಡಾ. ರಾಜಾರಾಮ್ ಕೆ.ಬಿ., ಉಪಾಧ್ಯಕ್ಷ ನವೀನ್ ಅಮೀನ್ ಶಂಕರಪುರ, ಕೋಶಾಧಿಕಾರಿ ಮೋಹನ್ ದಾಸ್ ವಾಮಂಜೂರು, ಅಭಿವೃದ್ಧಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಗುರುಪುರ, ಕ್ಷೇತ್ರಾಡಳಿತ ಸಮಿತಿ ಟ್ರಸ್ಟಿಗಳಾದ ಸತೀಶ್ ಪೂಜಾರಿ ಬೆಳಪು, ಸುಜೀತಾ ವಿ. ಬಂಗೇರಾ, ಶೈಲೇಂದ್ರ ವೈ. ಸುವರ್ಣ, ಜಯಾನಂದ್ ಎಂ. ಮಂಗಳೂರು, ನವೀನ್ ಸುವರ್ಣ ಸಜಿಪ, ಕಮಲಾಕ್ಷ ಬೋಳಾರ, ಹರೀಶ್ ಪೂಜಾರಿ ಮಂಗಳೂರು, ಚಂದ್ರಶೇಖರ್ ಉಚ್ಚಿಲ್, ಜಯ ವಿಕ್ರಮ್ ಕಲ್ಲಾಪು, ಕಾನೂನು ಸಲಹೆಗಾರ ನವನೀತ್ ಹಿಂಗಾನಿ, ಹರಿಶ್ಚಂದ್ರ ಅಮೀನ್, ನಾಗೇಶ್ ಬೈಕಂಪಾಡಿ, ನಿತ್ಯಾನಂದ ನಾವರ, ರಾಜೇಂದ್ರ ಚಿಲಿಂಬಿ, ಉಷಾ ಅಂಚನ್, ನಾರಾಯಣ ಮಚ್ಚಿನ, ಕುಮಾರ್ ಇರುವೈಲು, ಸಂತೋಷ್ ಬೈರಂಪಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ತಾಯ್ನಾಡಿನೊಂದಿಗೆ ನಿರಂತರ ನಂಟು ಬೆಸೆದುಕೊಂಡಿರುವ ಒಮಾನ್ ಬಿಲ್ಲವಾಸ್ ಕೂಟದ ಈ ಕೊಡುಗೆ ಸಮಾಜಕ್ಕೆ ಮಾದರಿಯಾಗಿದ್ದು, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಭಿವೃದ್ಧಿ ಪಯಣದಲ್ಲಿ ಮತ್ತೊಂದು ಸ್ಮರಣೀಯ ಮೈಲಿಗಲ್ಲಾಗಿದೆ.
