"ನಾನು ಎಂದಿಗೂ ವೇದಿಕೆಯ ನಾಯಕನಾಗಲು ಬಯಸುವುದಿಲ್ಲ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಹೆಜ್ಜೆಯೊಂದಿಗೆ ಸಾಮಾನ್ಯ ಸೇವಕನಾಗಿ ಮುಂದುವರಿಯುತ್ತೇನೆ": ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ
ಚುನಾವಣಾ ಸ್ಪರ್ಧೆಗಿಂತ ಪಕ್ಷ ಸಂಘಟನೆಗೆ ಮೊದಲ ಆದ್ಯತೆ; ಗ್ರಾಮ–ಬೂತ್ ಮಟ್ಟದಿಂದ ಕಾಂಗ್ರೆಸ್ ಬಲವರ್ಧನೆಗೆ ಕಾರ್ಯಯೋಜನೆ

ಮಂಗಳೂರು: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಯನ್ನು ಬದಿಗೊತ್ತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗತವೈಭವವನ್ನು ಮರಳಿ ತರುವ ಕಾರ್ಯಯೋಜನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಕ್ಷವು ವಹಿಸಿರುವ ನೂತನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ತಿಳಿಸಿದರು.
“1992ರಿಂದ 2023ರವರೆಗೆ ಸಾಮಾನ್ಯ ಕಾಂಗ್ರೆಸ್ ಕಾರ್ಯಕರ್ತನಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದೇನೆ. 2023ರಲ್ಲಿ ಕೆಪಿಸಿಸಿಯು ನನ್ನನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿತು. ಬಳಿಕ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಅವಕಾಶವೂ ದೊರೆಯಿತು. ಇದೀಗ ಪಕ್ಷವು ಜಿಲ್ಲಾಧ್ಯಕ್ಷನಾಗಿ ಹೊಸ ಜವಾಬ್ದಾರಿ ನೀಡಿದೆ,” ಎಂದು ಅವರು ಹೇಳಿದರು.
ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಹಲವು ಕಾರಣಗಳಿಂದ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಈ ಸೋಲಿನ ಕುರಿತು ಸಮಗ್ರ ಆತ್ಮಾವಲೋಕನ ನಡೆಸಿ ಪಕ್ಷವನ್ನು ಮರುಸಂಘಟಿಸಲಾಗುವುದು ಎಂದು ಪದ್ಮರಾಜ್ ತಿಳಿಸಿದರು.
“ಜಿಲ್ಲೆಯ ಎಲ್ಲ ಹಿರಿಯ ಮತ್ತು ಕಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ಪ್ರತಿಯೊಂದು ಗ್ರಾಮ ಹಾಗೂ ಬೂತ್ ಮಟ್ಟದ ಕಾರ್ಯಕರ್ತರನ್ನು ಖುದ್ದಾಗಿ ಭೇಟಿಯಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ತಳಮಟ್ಟದಿಂದ ಪಕ್ಷವನ್ನು ಬಲಪಡಿಸುವುದು ನಮ್ಮ ಪ್ರಮುಖ ಉದ್ದೇಶ,” ಎಂದರು.
ಜಿಲ್ಲಾಧ್ಯಕ್ಷ ಹುದ್ದೆ ಅಧಿಕಾರ ಅಥವಾ ಕುರ್ಚಿಯಲ್ಲ; ಕಷ್ಟದ ಸಂದರ್ಭಗಳಲ್ಲೂ ಪಕ್ಷಕ್ಕಾಗಿ ದುಡಿದ ನಿಸ್ವಾರ್ಥ ಕಾರ್ಯಕರ್ತರ ಪರಿಶ್ರಮ ಮತ್ತು ಬೆವರಿಗೆ ದೊರೆತ ಗೌರವ ಎಂದು ಪದ್ಮರಾಜ್ ಆರ್. ಪೂಜಾರಿ ಹೇಳಿದರು.
“ನಾನು ಎಂದಿಗೂ ವೇದಿಕೆಯ ನಾಯಕನಾಗಲು ಬಯಸುವುದಿಲ್ಲ. ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರ ಹೆಜ್ಜೆಯೊಂದಿಗೆ ಹೆಜ್ಜೆ ಹಾಕಿ ಕೆಲಸ ಮಾಡುವ ಸಾಮಾನ್ಯ ಸೇವಕನಾಗಿ ಮುಂದುವರಿಯುತ್ತೇನೆ,” ಎಂದು ಅವರು ಸ್ಪಷ್ಟಪಡಿಸಿದರು.
ಕಾರ್ಯಕರ್ತರ ಪ್ರೀತಿ, ಆಶೀರ್ವಾದ ಮತ್ತು ಬೆಂಬಲವೇ ತಮ್ಮನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದು ಹೇಳಿದ ಅವರು, ಜಿಲ್ಲೆಯ ಕಟ್ಟಕಡೆಯ ಗ್ರಾಮದ ಕೊನೆಯ ಬೂತ್‌ನ ಕಾರ್ಯಕರ್ತನ ಧ್ವನಿಯೂ ಪಕ್ಷದ ನಾಯಕತ್ವವನ್ನು ತಲುಪುವ ವ್ಯವಸ್ಥೆ ನಿರ್ಮಿಸುವುದೇ ತಮ್ಮ ಮೊದಲ ಆದ್ಯತೆ ಎಂದರು.
“ಕಾರ್ಯಕರ್ತರು ಹಾಗೂ ಪಕ್ಷದ ನಾಯಕರು ನನ್ನ ಮೇಲಿಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತೇನೆ. ಇದು ಕೇವಲ ಒಬ್ಬ ವ್ಯಕ್ತಿಯ ಜಯವಲ್ಲ. ನಮ್ಮ ಒಗ್ಗಟ್ಟಿನ ಸಂಘಟನಾ ಶಕ್ತಿಗೆ ಸಂದ ಜಯ,” ಎಂದು ಅವರು ಹೇಳಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ತಳಮಟ್ಟದಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸಲಾಗುವುದು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಪದ್ಮರಾಜ್ ಕರೆ ನೀಡಿದರು.
“ಎಲ್ಲರನ್ನೂ ಒಗ್ಗೂಡಿಸಿ ದುಡಿಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮರಳಿ ಅಜೇಯ ಶಕ್ತಿಯನ್ನಾಗಿ ಕಟ್ಟಿಬೆಳೆಸುವುದೇ ನಮ್ಮ ಸಂಕಲ್ಪ,” ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಡಾ ಅಧ್ಯಕ್ಷ ಸಂತೋಷ್ ಕುಮಾರ್, ಪ್ರಮುಖರಾದ ಅಪ್ಪಿ, ಸಲೀಂ ಅಹ್ಮದ್, ನೀರಜ್‌ಪಾಲ್, ಸುಹಾನ್ ಆಳ್ವಾ, ಚಿತ್ತರಂಜನ್ ಶೆಟ್ಟಿ, ಸುಭಾಶ್‌ಚಂದ್ರ ಶೆಟ್ಟಿ, ಲಾರೆನ್ಸ್ ಡಿಸೋಜಾ, ಬಶೀರ್, ಪದ್ಮನಾಭ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
