ನಾರಾಯಣ ಗುರುಗಳ ಹೆಸರಿನಲ್ಲಿ 26 ಉಪಜಾತಿಗಳ ಐತಿಹಾಸಿಕ ಒಗ್ಗಟ್ಟು: ರಾಜ್ಯಮಟ್ಟದ ‘ಶ್ರೀ ನಾರಾಯಣ ಗುರು ಮಹಾ ಒಕ್ಕೂಟ’ ಅಸ್ತಿತ್ವಕ್ಕೆ
ಬೆಂಗಳೂರು: ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ ಒಟ್ಟು 26 ಉಪಜಾತಿಗಳನ್ನು ಒಳಗೊಂಡ ರಾಜ್ಯಮಟ್ಟದ ‘ಶ್ರೀ ನಾರಾಯಣ ಗುರು ಮಹಾ ಒಕ್ಕೂಟ’ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.

ಬೆಂಗಳೂರು: ಈಡಿಗ, ಬಿಲ್ಲವ, ದೀವರು, ನಾಮಧಾರಿ, ನಾಡರ್, ತಿಯ್ಯ ಸೇರಿದಂತೆ ಒಟ್ಟು 26 ಉಪಜಾತಿಗಳನ್ನು ಒಳಗೊಂಡ ರಾಜ್ಯಮಟ್ಟದ ‘ಶ್ರೀ ನಾರಾಯಣ ಗುರು ಮಹಾ ಒಕ್ಕೂಟ’ ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿದೆ.
ಮಹಾ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಗಣ್ಯರು, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ತ್ವ ಹಾಗೂ ಆದರ್ಶಗಳ ಅಡಿಯಲ್ಲಿ ಸಮಾಜದ ಎಲ್ಲ ಉಪಜಾತಿಗಳು ಒಂದಾಗಿ ಸಂಘಟಿತರಾಗುವ ಅಗತ್ಯವನ್ನು ಪ್ರತಿಪಾದಿಸಿದರು.

ಕೇರಳದ ಶ್ರೀ ನಾರಾಯಣ ಗುರು ಧರ್ಮ ಸಂಘಂ ಮಠದ ಪೀಠಾಧಿಪತಿ ಪೂಜ್ಯ ಶ್ರೀ ಸ್ವಾಮಿ ಋತುಂಬರಾನಂದ ಸ್ವಾಮೀಜಿ ಅವರು ಮಹಾ ಒಕ್ಕೂಟವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, “ಸಮಾಜದ ಒಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ನಾರಾಯಣ ಗುರುಗಳ ತತ್ತ್ವದಡಿ ಸಂಘಟಿತರಾದಾಗ ಮಾತ್ರ ಸಮಾಜಕ್ಕೆ ನಿಜವಾದ ಶಕ್ತಿ ಬರಲು ಸಾಧ್ಯ. ದಶಕದ ಹಿಂದೆ ತಾವು ಕಂಡಿದ್ದ ಈ ಒಗ್ಗಟ್ಟಿನ ಕನಸು ಇಂದು ಸಾಕಾರಗೊಂಡಿರುವುದು ಅತ್ಯಂತ ಸಂತಸ ಮತ್ತು ಹೆಮ್ಮೆಯ ಸಂಗತಿ” ಎಂದು ಅಭಿಪ್ರಾಯಪಟ್ಟರು.

ಹಿಂದೆ ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ನಾರಾಯಣ ಗುರುಗಳ ಚಿಂತನೆಗಳನ್ನು ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸುವುದು, ಅಧ್ಯಯನ ಪೀಠ ಸ್ಥಾಪಿಸುವುದು ಹಾಗೂ ನಿಗಮ-ಮಂಡಳಿ ರಚಿಸುವಂತೆ ಮಂಡಿಸಿದ್ದ ಮೂರು ಪ್ರಮುಖ ಬೇಡಿಕೆಗಳಿಗೆ ಸರ್ಕಾರ ಸಮ್ಮತಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು.

ಮಹಾ ಒಕ್ಕೂಟದ ಅಧ್ಯಕ್ಷರಾದ ಜಿ.ಪಿ. ಸುಧಾಕರ್ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು, ನಾವೆಲ್ಲರೂ ಬೇರೆ ಬೇರೆ ವೇದಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಈ ಮಹಾ ಒಕ್ಕೂಟದೊಂದಿಗೆ ಸದಾ ಕೈಜೋಡಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸೋಲೂರಿನ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಧರ್ಮಸ್ಥಳದ ಶ್ರೀ ರಾಮ ಕ್ಷೇತ್ರದ ಪೀಠಾಧಿಪತಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಚಿಕ್ಕಮಗಳೂರಿನ ದತ್ತಾಶ್ರಮದ ಶ್ರೀ ವಿನಯ್ ಗುರೂಜಿ, ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿ, ಸಾರಗನಜಡ್ಡು ಪೀಠದ ಯೋಗೇಂದ್ರ ಅವಧೂತರು, ನಿಪ್ಪಾಣಿಯ ಶ್ರೀ ಅರುಣಾನಂದತೀರ್ಥ ಸ್ವಾಮೀಜಿ, ವರ್ತೂರಿನ ಶ್ರೀ ಸ್ವಾಮಿ ದೇವಿಕಾನಂದ, ಅಫಜಲಪುರದ ಶ್ರೀ ಶಂಕರಪ್ಪ ಸ್ವಾಮೀಜಿ, ಸೈದಾಪುರದ ಶ್ರೀ ಭೀಮಾಶಂಕರ ಶರಣ ಸ್ವಾಮೀಜಿ ಹಾಗೂ ಸಿಗಂದೂರು ಚೌಡೇಶ್ವರಿ ಕ್ಷೇತ್ರದ ಎಸ್. ರಾಮಪ್ಪ ಉಪಸ್ಥಿತರಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಭೀಮಣ್ಣ ಟಿ. ನಾಯ್ಕ, ವಿ. ಸುನಿಲ್ ಕುಮಾರ್, ಬೇಳೂರು ಗೋಪಾಲಕೃಷ್ಣ, ಜಗದೇವ ಗುತ್ತೇದಾರ್ ಸೇರಿದಂತೆ ಸಮುದಾಯದ ಮಾಜಿ ಸಚಿವರು, ಶಾಸಕರು ಹಾಗೂ ವಿವಿಧ ಮುಖಂಡರು ಭಾಗವಹಿಸಿದ್ದರು.

26 ಉಪಜಾತಿಗಳನ್ನು ಒಂದೇ ವೇದಿಕೆಯಡಿ ತರುವ ಮೂಲಕ ಸಮಾಜದ ಸಂಘಟನೆ, ಒಗ್ಗಟ್ಟು ಹಾಗೂ ನಾರಾಯಣ ಗುರುಗಳ ಸಮಾನತೆಯ ಸಂದೇಶವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಮಹಾ ಒಕ್ಕೂಟದ ಸ್ಥಾಪನೆ ಮಹತ್ವದ ಹೆಜ್ಜೆಯಾಗಿದೆ.
