Skip to content
Billava News

ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ಯೋಧರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ: ರೇಖಾ ಗೋಪಾಲ್, ಯುವವಾಹಿನಿ ಮಂಗಳೂರು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶದ ಗಡಿಯನ್ನು ಕಾಯುವ ಯೋಧರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ

By Billavavani
ಸ್ವಾತಂತ್ರ್ಯ ಹೋರಾಟಗಾರರು, ಗಡಿ ಕಾಯುವ ಯೋಧರನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ: ರೇಖಾ ಗೋಪಾಲ್, ಯುವವಾಹಿನಿ ಮಂಗಳೂರು ಘಟಕದಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು: ಸ್ವಾತಂತ್ರ್ಯ ಹೋರಾಟಗಾರರು ಹಾಗೂ ದೇಶದ ಗಡಿಯನ್ನು ಕಾಯುವ ಯೋಧರನ್ನು ಸದಾ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಖಾ ಗೋಪಾಲ್ ಹೇಳಿದರು.

ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಗಸ್ಟ್ 15ರಂದು ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ರೇಖಾ ಗೋಪಾಲ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಗಡಿಯಲ್ಲಿ ದೇಶವನ್ನು ಕಾಯುತ್ತಿರುವ ಸೈನಿಕರ ಸೇವೆಯಿಂದಲೇ ಇಂದು ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಾಗಿದೆ. ಆದ್ದರಿಂದ ಅವರನ್ನು ಪ್ರತಿದಿನವೂ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. ಇದೇ ಸಂದರ್ಭದಲ್ಲಿ ಅವರು ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಘಟಕದ ಅಧ್ಯಕ್ಷ ಶ್ರೀ ಹರೀಶ್ ಕೆ. ಸುವರ್ಣ ಮಾತನಾಡಿ, ಇಂದು ನಾವು ವಿವಿಧ ರೀತಿಯ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದರೂ, ಅತಿಯಾದ ವಾಕ್ ಸ್ವಾತಂತ್ರ್ಯದ ದುರ್ಬಳಕೆಯಿಂದ ದೇಶಾದ್ಯಂತ ಹಲವು ಸಮಸ್ಯೆಗಳು ಎದುರಾಗುತ್ತಿವೆ. ಬಾಹ್ಯ ಶಕ್ತಿಗಳಿಗಿಂತ ಆಂತರಿಕ ಭದ್ರತಾ ಸವಾಲುಗಳು ಕಾಡುತ್ತಿರುವುದು ವಿಪರ್ಯಾಸ ಎಂದರು. ಮುಂದಿನ ಪೀಳಿಗೆಯ ಮಕ್ಕಳಲ್ಲಿ ದೇಶಪ್ರೇಮ ಹಾಗೂ ಭಾರತೀಯ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಮ್ಮಿಂದಲೇ ಆರಂಭಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

2222.jpeg

ಧ್ವಜಾರೋಹಣವನ್ನು ಮಂಗಳೂರು ಘಟಕದ ಗೌರವ ಸದಸ್ಯ ಶ್ರೀ ಭಾಸ್ಕರ ಪೂಜಾರಿ ನೆರವೇರಿಸಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಮಂಗಳೂರು ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಒಂದನೇ ಉಪಾಧ್ಯಕ್ಷ ಯತೀಶ್ ಬಳಂಜ ಸ್ವಾಗತಿಸಿದರು. ಕಾರ್ಯದರ್ಶಿ ಕುಮಾರಿ ಉಷಾ ವಂದಿಸಿದರು. ಸದಸ್ಯ ಸತೀಶ್ ಕೆ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಬಳಿಕ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.